ಬಾಗಲಕೋಟೆ: ಸಾಮಾನ್ಯವಾಗಿ ಒಂದು ತೆಂಗಿನಕಾಯಿ ಬೆಲೆ ₹ 10-12 ಇರಬಹುದು. ಹೆಚ್ಚೆಂದರೆ 30ರಿಂದ 40ರವರೆಗೂ ಆಗಬಹುದು. ಆದರೆ ಇಲ್ಲೊಂದು ತೆಂಗಿನಕಾಯಿ ಬರೋಬ್ಬರಿ 6 ಲಕ್ಷ 50 ಸಾವಿರವಂತೆ. ಅಷ್ಟೊಂದು ಹಣವನ್ನು ನೀಡಿ ಓರ್ವ ಭಕ್ತ ಇದನ್ನು ಪಡೆದಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ಇಂತಹದ್ದೊಂದು ಅಚ್ಚರಿ ಘಟನೆ ನಡೆದಿದೆ. ಮಹಾವೀರ ಹರಕೆ ಎಂಬುವವರೇ ಈ ಮಹಾನ್ ಭಕ್ತಾಗ್ರೇಸರರೇ ಇಷ್ಟೊಂದು ದೊಡ್ಡ ಮೊತ್ತ ಕೊಟ್ಟು ತೆಂಗಿನಕಾಯಿಯನ್ನು ಪಡೆದಿದ್ದಾರೆ. ಅಚ್ಚರಿ ಎನ್ನಿಸಿದರೂ ಇದು ಸತ್ಯ.
ಇಷ್ಟೊಂದು ದೊಡ್ಡ ಮೊತ್ತ ನೀಡಿ ತೆಂಗಿನಕಾಯಿ ಪಡೆಯೋದು ಇದೇನು ಹುಚ್ಚುತನ ಅಂತಿರಾ? ಅಲ್ಲ, ಇದು ಅಂತಿಂತಹ ತೆಂಗಿನಕಾಯಿಯಲ್ಲ. ಇದು ದೇವರ ಗದ್ದುಗೆ ಮೇಲಿನ ತೆಂಗಿನಕಾಯಿ. ಚಿಕ್ಕಲಕಿ ಗ್ರಾಮದ ಮಾಳಿಂಗರಾಯ ಜಾತ್ರೆ ದಿನ ನಡೆಯುವ ದೇವರಕಾಯಿ ಸವಾಲಿನಲ್ಲಿ ಇಷ್ಟೊಂದು ಮೊತ್ತಕ್ಕೆ ತೆಂಗಿನಕಾಯಿ ಸವಾಲ್ ಮೂಲಕ ಮಹಾವೀರ ಅವರು ಪಡೆದುಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ಮೂಲದ ಮಹಾವೀರ 6 ಲಕ್ಷ 50 ಸಾವಿರ ನೀಡಿ ಮಾಳಿಂಗರಾಯನ ಗದ್ದುಗೆ ಮೇಲಿನ ತೆಂಗಿನಕಾಯಿ ಸವಾಲು ಗೆದ್ದಿದ್ದಾರೆ. ಪ್ರತಿ ವರ್ಷ ಶ್ರಾವಣ ಅವಧಿ ಮುಕ್ತಾಯದ ವೇಳೆಯಲ್ಲಿ ಚಿಕ್ಕಲಕಿ ಗ್ರಾಮದ ಮಾಳಿಂಗರಾಯ ದೇವರ ಜಾತ್ರೆ ನಡೆಯುತ್ತದೆ. ಈ ವರ್ಷ ಕೊವಿಡ್ ಕಾರಣದಿಂದ ಸರಳವಾಗಿ ಜಾತ್ರೆ ಆಚರಿಸಲಾಗಿದೆ. ಕೊನೆಗೆ ದೇವರ ಗದ್ದುಗೆ ಮೇಲಿನ ಪಲ್ಲಕ್ಕಿಯ ಎಡ ಹಾಗೂ ಬಲಭಾಗದ ತೆಂಗಿನಕಾಯಿ ಹರಾಜು ನಡೆಯುತ್ತದೆ. ಈ ವರ್ಷದ ಹರಾಜು ಪ್ರಕ್ರಿಯೆಯಲ್ಲಿ ಈ ವೇಳೆ ಒಂದು ಲಕ್ಷ ಎರಡು ಲಕ್ಷ,ಮೂರು ಲಕ್ಷ.. ಹಾಗೇ ಏರುತ್ತಾ ಸಾಗಿ ಕೊನೆಗೆ 6 ಲಕ್ಷ 50 ಸಾವಿರಕ್ಕೆ ತಲುಪಿದೆ. ಮಹಾವೀರ ಅವರು ಸವಾಲು ಕೂಗಿ ಗೆದ್ದುಕೊಂಡಿದ್ದಾರೆ.
ಒಂದು ತೆಂಗಿನಕಾಯಿಗೆ ಏಕಿಷ್ಟು ಬೆಲೆ?
ಒಂದು ತೆಂಗಿನಕಾಯಿಗೆ ಇಷ್ಟೊಂದು ಹಣವನ್ನು ಯಾಕೆ ಯಾರಾದರೂ ಕೊಡುತ್ತಾರೆ? ಎಂಬ ಪ್ರಶ್ನೆ ಏಳುವುದು ಸಹಜ. ಆದರೆ ಈ ತೆಂಗಿನಕಾಯಿಗೆ ಅದರದ್ದೇ ಆದ ಮಹತ್ವ ಇರಲೇಬೇಕಲ್ಲ. ಇಲ್ಲಿ ಮಾಳಿಂಗರಾಯ ದೇವರ ಮೇಲಿನ ಭಕ್ತಿ ನಂಬಿಕೆ ಇಷ್ಟೊಂದು ದೊಡ್ಡ ಮೊತ್ತಕ್ಕೆ ಕಾಯಿ ಪಡೆಯೋದಕ್ಕೆ ಕಾರಣವಾಗಿದೆ. ಮಾಳಿಂಗರಾಯ ದೇವರ ಗದ್ದುಗೆ ಮೇಲಿನ ಕಾಯಿ ಒಯ್ದು ಮನೆಯಲ್ಲಿಟ್ಟು ಪೂಜಿಸೋದು ಇಲ್ಲಿನ ಸಂಪ್ರದಾಯ. ತಮ್ಮ ಮನೆಯಲ್ಲಿಟ್ಟು ಪೂಜೆ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಮಾಳಿಂಗರಾಯನ ಭಕ್ತರದ್ದು. ಅದಕ್ಕಾಗಿಯೇ ಪ್ರತಿವರ್ಷ ಕಾಯಿ ಸವಾಲಿನಲ್ಲಿ ಭಕ್ತರು ಭಾಗಿಯಾಗುತ್ತಾರೆ. ಸವಾಲು ಕೂಗುವ ಮೂಲಕ ಅದನ್ನು ಪಡೆಯೋದಕ್ಕೆ ಪ್ರಯತ್ನ ಮಾಡುತ್ತಾರೆ. ಈ ವರ್ಷ ಮಹಾವೀರ ಹರಕೆ ಅತಿ ಹೆಚ್ಚಿನ ಮೊತ್ತದ ಸವಾಲು ಕೂಗಿ ಮಾಳಿಂಗರಾಯನ ಕಾಯಿ ಪಡೆದಿದ್ದಾರೆ. ಇದು ಮಾಳಿಂಗರಾಯ ದೇವರ ಜಾತ್ರೆ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತದ ಸವಾಲಾಗಿದ, ಇತಿಹಾಸದಲ್ಲಿ ದಾಖಲಾಗಿದೆ.
“ನಾವು ಮಾಳಿಂಗರಾಯ ದೇವರ ಭಕ್ತರು. ನಾವು ಬೇಡಿದ ಎಲ್ಲ ಹರಕೆಯನ್ನು ದೇವರು ಈಡೇರಿಸುತ್ತಾನೆ. ಮಾಳಿಂಗರಾಯ ದೇವರ ಮೇಲೆ ನಮಗೆ ಹೆಚ್ಚಿನ ಭಕ್ತಿಯಿದೆಯೇ ಹೊರತು ನಮ್ಮಲ್ಲಿ ಹಣಕ್ಕೆ ಪ್ರಾಮುಖ್ಯತೆಯಿಲ್ಲ. ಕಾಯಿ ಒಯ್ದರೆ ನಮಗೆ ಒಳಿತಾಗುವುದು ಅದಕ್ಕೆ ಇಷ್ಟೊಂದು ಹಣದ ಸವಾಲು ಕೂಗಿ ಕಾಯಿ ಪಡೆದಿದ್ದೇನೆ” ಅಂತಾರೆ ಭಕ್ತಾಗ್ರೇಸರ ಮಹಾವೀರ ಹರಕೆ.
ಮಾಳಿಂಗರಾಯ ದೇವರ ಗದ್ದುಗೆ ಮೇಲಿನ ತೆಂಗಿನಕಾಯಿ ಜೊತೆಗೆ ಬೀರಲಿಂಗೇಶ್ವರ ಪಲ್ಲಕ್ಕಿ ಮೇಲಿನ ಕಾಯಿಗಳ ಹರಾಜು ನಡೆಯುತ್ತದೆ. ಅದರಂತೆ ಬೀರಲಿಂಗೇಶ್ವರ ಪಲ್ಲಕ್ಕಿಯ ಬಲಗಡೆ ಕಾಯಿ ಚೇತನ ಡೆಂಗೆಯವರಿಗೆ 30,001 ರೂಪಾಯಿಗೆ ಸವಾಲಾಯಿತು. ಎಡಗಡೆಕಾಯಿ ಹೊಳೆಪ್ಪ ಮುತ್ತಪ್ಪ ಬಬಲಾದಿ ಯವರಿಗೆ 21,001 ರೂಪಾಯಿಗೆ ಸವಾಲಾಯಿತು. ಮಹಾಳಿಂಗರಾಯನ ಬಲಗಡೆ ಕಾಯಿ ಬಾವುರಾಯ ಪೂಜಾರಿಯವರಿಗೆ 26,001 ರೂಪಾಯಿಗೆ ಸವಾಲಾಯಿತು. ಎಡಗಡೆ ಕಾಯಿ ಸದಾಶಿವ ಬಸಪ್ಪ ಬೆಳ್ಳುಬ್ಬಿಯವರಿಗೆ 30,001ರೂಪಾಯಿಗೆ ಸವಾಲಾಯಿತು.
ಒಟ್ಟಾರೆ ದೇವರ ಮೇಲಿನ ಭಕ್ತಿ, ನಂಬಿಕೆ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದಕ್ಕೆ ಈ ಸವಾಲು ಸಾಕ್ಷಿಯಾಗಿದ್ದು ಎಲ್ಲವೂ ಭಕ್ತಿ ಪರಾಕಾಷ್ಟೆಯ ಮೇಲೆ ನಿಂತಿದೆ ಎಂಬುದು ಮತ್ತೆ ಸಾಬೀತಾದಂತಾಗಿದೆ.
ವಿಶೇಷ ವರದಿ: ರವಿ ಮೂಕಿ, ಬಾಗಲಕೋಟೆ
ಇದನ್ನೂ ಓದಿ:
Ganesha Chaturthi 2021: ಗಣೇಶ ಚತುರ್ಥಿ ಆಚರಣೆಯ ಪೂಜಾ ವಿಧಾನ ಮತ್ತು ಶುಭ ಮುಹೂರ್ತ
ಗೋಮಯ ಹಾಗೂ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶನ ಮೂರ್ತಿ; ಗೋಫಲ ಟ್ರಸ್ಟ್ನಿಂದ ಮಾರುಕಟ್ಟೆಗೆ ಬಿಡುಗಡೆ