
ಬಾಗಲಕೋಟೆ, (ಅಕ್ಟೋಬರ್ 17): ಮಹಾರಾಷ್ಟ್ರದಲ್ಲಿ ಲಿಂಗಾಯತ ಶ್ರೀಗಳ ಬಗ್ಗೆ ಅವಹೇಳನಕಾರಿ ಭಾಷಣ ಹಿನ್ನೆಲೆಯಲ್ಲಿ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ (Kaneri Mutt Seer) ಬಾಗಲಕೋಟೆ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿರೋ ಕನ್ನೇರಿ ಶ್ರೀಗಳಿಗೆ ಇದೀಗ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ಪ್ರವೇಶ ಮಾಡದಂತೆ ಹಾಗೂ ಚಿಕ್ಕಾಲಗುಂಡಿ ಮಲ್ಲಿಕಾರ್ಜುನ ಮಠಕ್ಕೆ ಬಾರದಂತೆ ನೊಟೀಸ್ ನಲ್ಲಿ ಸೂಚಿಸಲಾಗಿದೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಜಿಲ್ಲಾಧಿಕಾರಿ ಹೊರಡಿಸಿದ ನೋಟಿಸ್ ಅನ್ನು ತಹಶೀಲ್ದಾರ ವಿನೋದ್ ಅವರು ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿರುವ ಮಠಕ್ಕೆ ತೆರಳಿ ಕನ್ಹೇರಿಯ ಕಾಡಸಿದ್ದೇಶ್ವರ ಶ್ರೀಗಳಿಗೆ ನೀಡಿದ್ದು, ಮಠ ತೆರವು ಮಾಡುವಂತೆ ನೋಟಿಸ್‌ನಲ್ಲಿ ಸೂಚಿಸಿದ್ದಾರೆ. ಕಾನೂನು ಸವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ. ಹೀಗಾಗಿ ಬಾಗಲಕೋಟೆಯಲ್ಲಿ ಜಿಲ್ಲೆಯಲ್ಲಿ ಇರಬಾರದು. ನಿಮ್ಮ ಮೂಲ ಜಾಗಕ್ಕೆ ತೆರಳಿ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಬಸವನಬಾಗೇವಾಡಿಯಲ್ಲಿ ಅಕ್ಟೋಬರ್ 16 ಮತ್ತು 17ರಂದು ಸಮರ್ಥ ಸದ್ಗುರು ಶ್ರೀಸಿದ್ದರಾಮೇಶ್ವರ ಮಹಾರಾಜರ ಪುಣ್ಯತಿಥಿ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಶ್ರೀಗಳು ದಿವ್ಯಸಾನಿಧ್ಯವಹಿಸಬೇಕಿತ್ತು. ಹೀಗಾಗಿ ಕೋಲ್ಹಾಪುರದಿಂದ ಹೊರಟಿದ್ದ ಶ್ರೀಗಳು ವಿಜಯಪುರದ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಚಿಕ್ಕಾಲಗುಂಡಿಯಲ್ಲೇ ಉಳಿದುಕೊಳ್ಳಬೇಕಾಯಿತು. ಕಳೆದ ಎರಡು ದಿನಗಳ ಕಾಲ ಮಠದಲ್ಲಿರುವ ಶ್ರೀಗಳನ್ನು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಸೇರಿ ಹಲವು ಗಣ್ಯರು ಭೇಟಿ ಮಾಡಿ ಧೈರ್ಯ ಹೇಳಿದ್ದರು.
ಮಹಾರಾಷ್ಟ್ರದಲ್ಲಿ ಬಸವ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಿದ್ದ ಕನ್ಹೇರಿ ಮಠದ ಶ್ರೀಗಳು ಲಿಂಗಾಯತ ಮಠಾಧೀಶರ ವಿರುದ್ಧ ಮಾತಾಡಿದ್ದ ವಿವಾದಾತ್ಮಕ ಹೇಳಿಕೆ ವೈರಲ್ ಆಗಿತ್ತು. ಅದಾದ ನಂತರ ಶ್ರೀಗಳು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಆದರೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ನೆಪವೊಡ್ಡಿ ಶ್ರೀಗಳಿಗೆ ವಿಜಯಪುರ ಜಿಲ್ಲೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಇನ್ನು ಜಿಲ್ಲಾಧಿಕಾರಿಗಳ ಆದೇಶವನ್ನು ಕರ್ನಾಟಕ ಉಚ್ಛನ್ಯಾಯಾಲಯದ ಕಲಬುರಗಿಯ ಸಂಚಾರಿ ನ್ಯಾಯಪೀಠವು ಎತ್ತಿ ಹಿಡಿದಿತ್ತು. ನ್ಯಾಯಾಲಯದ ಆದೇಶದ ವಿವರಗಳನ್ನು ಒಳಗೊಂಡಿರುವ ಆದೇಶದ ಜತೆಗೆ ಬಾಗಲಕೋಟೆಯನ್ನು ತೊರೆಯುವಂತೆ ಜಿಲ್ಲಾಧಿಕಾರಿ ಎಂ.ಸಂಗಪ್ಪ ಅವರು ಆದೇಶಿಸಿದ್ದಾರೆ.