ಕನೇರಿ ಮಠದ ಶ್ರೀಗಳಿಗೆ ವಿಜಯಪುರ ಜಿಲ್ಲೆ ಪ್ರವೇಶಕ್ಕೆ 2 ತಿಂಗಳು ನಿರ್ಬಂಧ: ಜಿಲ್ಲಾಧಿಕಾರಿ ಡಾ.ಆನಂದ್ ಆದೇಶ
ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿಗೆ ವಿಜಯಪುರ ಜಿಲ್ಲೆ ಪ್ರವೇಶಕ್ಕೆ 2 ತಿಂಗಳು ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ.ಆನಂದ್ ಆದೇಶಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಗ್ರಾಮದ ಸಮಾರಂಭದಲ್ಲಿ ಶ್ರೀಗಳು ಆಡಿದ್ದ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರೋದಾಗಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯಪುರ, ಅಕ್ಟೋಬರ್ 16: ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮಿಜಿಗಳ ಅವಹೇಳನ ಮತ್ತು ಧರ್ಮದ ಹೆಸರಿನಲ್ಲಿ ವಿಭಜನೆ ಮೂಡಿಸಬಹುದಾದ ಅಸಂವಿಧಾನಿಕ ಆಶ್ಲೀಲ ಭಾಷೆ ಬಳಸಿದ ಆರೋಪದ ಹಿನ್ನಲೆ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿ 2 ತಿಂಗಳುಗಳ ಕಾಲ ವಿಜಯಪುರ (Vijayapura) ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಆನಂದ್ ಆದೇಶ ಹೊರಡಿಸಿದ್ದಾರೆ. ಆದೇಶದ ಅನ್ವಯ ಅಕ್ಟೋಬರ್ 16ರಿಂದ ಡಿಸೆಂಬರ್ 14ರ ವರೆಗೆ ಸ್ವಾಮೀಜಿ ವಿಜಯಪುರ ಜಿಲ್ಲೆಗೆ ಭೆಟಿ ನೀಡುವಂತಿಲ್ಲ.
ಇತ್ತೀಚೆಗೆ ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಗ್ರಾಮದ ಸಮಾರಂಭದಲ್ಲಿ ಮಾತನಾಡಿದ್ದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕೆಲ ಲಿಂಗಾಯತ ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಳೆದ ಎರಡು ತಿಗಂಗಳುಗಳಿಂದ ದೇವಾಲಯಕ್ಕೆ ಹೋಗಬೇಡಿ ಎಂದು ಪ್ರಚಾರ ಮಾಡಲಾಗ್ತಿದೆ. ಮುಖ್ಯಮಂತ್ರಿಗಳ ಕೃಪಾಪೋಷಿತ ಲಿಂಗಾಯತ ಮಠಾಧೀಪತಿಗಳ ಒಕ್ಕೂಟದ ಕಲಾವಿದರು ಸೇರಿ ಬಸವ ಸಂಸ್ಕೃತಿ ಅಭಿಯಾನ ಎನ್ನುವ ನಾಟಕವನ್ನ ರಾಜ್ಯಾದ್ಯಂತ ಮಾಡುತ್ತಿದ್ದಾರೆ. ಗುಡಿಯಲ್ಲಿ ದೇವರಲಿಲ್ಲ. ಮನೆಯಲ್ಲಿನ ದೇವರನ್ನು ಹೊಳೆಗೆ ಹಾಕಿ ಎನ್ನುತ್ತಿದ್ದಾರೆ. ಇವರಿಗೆ ನಾನೇ ಬುದ್ಧಿ ಹೇಳಬೇಕು ಎಂದು ಕೆಲ ಅಸಂವಿಧಾನಿಕ ಪದ ಬಳಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ನಿಧಿ ಆಸೆ ತೋರಿಸಿ 1.87 ಕೋಟಿ ರೂ. ವಂಚನೆ: ನಕಲಿ ಬಾಬಾ ಅಂದರ್
ಸ್ವಾಮೀಜಿಗಳ ಹೇಳಿಕೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಕೃತಿಗಳನ್ನು ದಹಿಸಿ ಪ್ರತಿಭಟನೆಗಳನ್ನು ನಡೆಸಲಾಗಿದೆ. ಈ ನಡುವೆ ಬಸವನ ಬಾಗೇವಾಡಿಯಲ್ಲಿ ನಡೆಯುತ್ತಿರುವ ಸಮರ್ಥ ಸದ್ಗುರು, ಶ್ರೀ ಸಿದ್ದರಾಮೇಶ್ವರ ಮಹಾರಾಜರ ಪುಣ್ಯತಿಥಿ ಉತ್ಸವ ಕಾರ್ಯಕ್ರಮದಲ್ಲಿ ಅ.16 ಮತ್ತು 17ರಂದು ಕನೇರಿ ಶ್ರೀಗಳು ಭಾಗವಹಿಸಲಿರುವ ಕಾರಣ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ಸ್ಥಳೀಯ ಠಾಣಾ ವರದಿ ತಿಳಿಸಿದೆ. ಹೀಗಾಗಿ ಜಿಲ್ಲೆಗೆ ಕಾಡಸಿದ್ದೇಶ್ವರ ಸ್ವಾಮೀಜಿಯವರ ಭೇಟಿಯನ್ನ ಕನಿಷ್ಠ 2 ತಿಂಗಳವರೆಗೆ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಕಿಡಿ
ಕಾಡಸಿದ್ದೇಶ್ವರ ಶ್ರೀಗೆ ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ ಡಿಸಿ ಆದೇಶ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಈ ಸರ್ಕಾರದಲ್ಲಿ ಪಾಕಿಸ್ತಾನದಿಂದ ಬಂದು ಊಟ ಮಾಡಿ ಮಲಗಿ ಹೋಗಬಹುದು. ಹೀಗಿರುವಾಗ ಕನ್ನೇರಿ ಕಾಡಸಿದ್ದೇಶ್ವರ ಶ್ರೀಗಳು ಹಿಂದೂ ಧರ್ಮದ ಕೆಲಸ ಮಾಡಿದ್ದಾರೆ. ಅವರೇನು ರಾಜಕೀಯ ಭಾಷಣ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಹಿಂದೂಗಳು ಈಗ ಒಗ್ಗಟ್ಟಾಗುತ್ತಿದ್ದು, ಈ ಸರ್ಕಾರವನ್ನ ಕಿತ್ತು ಬಿಸಾಡುತ್ತಾರೆ ಎಂದು ಕಿಡಿ ಕಾರಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:42 am, Thu, 16 October 25




