ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದ ಬಾಗಲಕೋಟೆ ಜಿಲ್ಲಾಡಳಿತ; ಕಲಾವಿದರ ಮೊಗದಲ್ಲಿ ಮಂದಹಾಸ
ಮೊದಲ ಹಾಗೂ ಎರಡನೇ ಅಲೆಯಿಂದ ನಾಟಕ ಪ್ರದರ್ಶನ ಇಲ್ಲದೆ ಅನೇಕ ಕಲಾವಿದರು ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದೇವೆ. ಕೊನೆಗೂ ಜಿಲ್ಲಾಡಳಿತ ಸದ್ಯ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದ್ದು, ಜಿಲ್ಲಾಡಳಿತಕ್ಕೆ ಧನ್ಯವಾದ ಹೇಳುತ್ತೇವೆ ಎಂದು ವೃತ್ತಿ ರಂಗಭೂಮಿ ಕಲಾವಿದರಾದ ಶೇಖಪ್ಪ ಹಾಗೂ ಮಮತಾ ತಿಳಿಸಿದ್ದಾರೆ.
ಬಾಗಲಕೋಟೆ: ಕೊವಿಡ್ ಒಂದು ಹಾಗೂ ಎರಡನೇ ಅಲೆ ವೇಳೆ ಲಾಕ್ಡೌನ್ನಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡಿವರು ಒಬ್ಬಿಬ್ಬರಲ್ಲ. ಆ ಸಾಲಿಗೆ ವೃತ್ತಿ ರಂಗಭೂಮಿ ಕಲಾವಿದರು, ಕಾರ್ಮಿಕರು ಸಹ ಇದ್ದರು. ಮೊದಲ ಅಲೆಯಲ್ಲಿ ಒಂಬತ್ತು ತಿಂಗಳು ಹಾಗೂ 2ನೇ ಅಲೆಯಲ್ಲಿ ನಾಲ್ಕು ತಿಂಗಳು ನಾಟಕ ಕಂಪನಿ ಬಂದ್ ಆಗಿದ್ದರಿಂದ ಅವಲಂಬಿತ ಕಲಾವಿದರು ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿತ್ತು. ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ ಮತ್ತೆ ನಾಟಕ ಪ್ರದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದ್ದರಿಂದ ಕಲಾವಿದರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಮತ್ತೆ ಮುಖಕ್ಕೆ ಬಣ್ಣ ಹಚ್ಚಿ ತಾಲೀಮು ಹಾಗೂ ಪ್ರದರ್ಶನ ನೀಡಲು ಕಲಾವಿದರು ಆರಂಭಿಸಿದ್ದಾರೆ. ಕಲಾವಿದರು, ನಾಟಕ ಪ್ರದರ್ಶನಕ್ಕೆ ಬರುವ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಮಾಡಿ ಎಲ್ಲವೂ ಸಿದ್ದವಾಗುತ್ತಿದೆ ಪ್ರದರ್ಶನ ಕೂಡ ಶುರುವಾಗಿದೆ. ಹೌದು, ಲಾಕ್ಡೌನ್ನಿಂದಾಗಿ ಸ್ಥಬ್ದವಾಗಿದ್ದ ನಾಟಕ ಕಂಪನಿಗಳಿಂದಾಗಿ ಮುಖಕ್ಕೆ ಬಣ್ಣ ಹಚ್ಚದೇ ಕಲಾವಿದರು ಪಾಡು ಬಹಳ ಕಷ್ಟದಲ್ಲಿ ಸಿಲುಕಿತ್ತು. ಕಲಾವಿದರು ಕುಟುಂಬ ನಿರ್ವಹಣೆಗಾಗಿ ಪಡಬಾರದ ಕಷ್ಟ ಅನುಭವಿಸಿದರು.
ಒಂದನೇ ಅಲೆ ಮುಗಿಯಿತು ಎನ್ನುವಷ್ಟರಲ್ಲಿ 2ನೇ ಅಲೆ ಅಪ್ಪಳಿಸಿ ನಾಟಕ ಪ್ರದರ್ಶನವನ್ನು ರದ್ದುಗೊಳಿಸಲಾಗಿತ್ತು. ಇದರಿಂದ ಕುಟುಂಬ ನಿರ್ವಹಣೆ ಮಾಡಲು ಕಲಾವಿದರು ಮತ್ತು ಕಾರ್ಮಿಕ ವರ್ಗ ಕಣ್ಣೀರು ಸುರಿಸುವಂತಾಗಿತ್ತು. ಅನೇಕ ಕಲಾವಿದರು ತರಕಾರಿ, ಹಣ್ಣು, ಹೂವು ಮಾರಾಟ ಮಾಡಿ ಹೇಗೋ ಅರೇಬರೇ ಊಟ ಮಾಡಿಕೊಂಡಿದ್ದರು. ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ 2ನೇ ಅಲೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದರಿಂದ ಉಳಿದ ಉದ್ಯೋಗಗಳಿಗೆ ಅವಕಾಶ ನೀಡಿದಂತೆ ಜಿಲ್ಲಾಡಳಿತವು ನಾಟಕ ಪ್ರದರ್ಶನಕ್ಕೂ ಅವಕಾಶ ನೀಡಿದ್ದರಿಂದ ಕಲಾವಿದರು ಹಾಗೂ ಕಾರ್ಮಿಕರು ಸಂತಸ ಪಡುವಂತಾಗಿದೆ.
ಮೊದಲ ಹಾಗೂ ಎರಡನೇ ಅಲೆಯಿಂದ ನಾಟಕ ಪ್ರದರ್ಶನ ಇಲ್ಲದೆ ಅನೇಕ ಕಲಾವಿದರು ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದೇವೆ. ಕೊನೆಗೂ ಜಿಲ್ಲಾಡಳಿತ ಸದ್ಯ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದ್ದು, ಜಿಲ್ಲಾಡಳಿತಕ್ಕೆ ಧನ್ಯವಾದ ಹೇಳುತ್ತೇವೆ ಎಂದು ವೃತ್ತಿ ರಂಗಭೂಮಿ ಕಲಾವಿದರಾದ ಶೇಖಪ್ಪ ಹಾಗೂ ಮಮತಾ ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮೊದಲೇ ನಾಟಕ ವೀಕ್ಷಕರ ಸಂಖ್ಯೆ ಕಡಿಮೆ ಇದ್ದರೂ ಸಹ ಉತ್ತರ ಕರ್ನಾಟಕದಲ್ಲಿ ಇನ್ನು ಸಹ ವೃತ್ತಿರಂಗಭೂಮಿ ಜೀವಂತವಾಗಿದೆ. ಇದನ್ನೆ ನಂಬಿಕೊಂಡು ಸಾವಿರಾರು ಜನ ಕಲಾವಿದರು, ಕಾರ್ಮಿಕ ವರ್ಗ ಜೀವನ ಸಾಗಿಸುತ್ತಿದ್ದಾರೆ. ನಾಟಕ ಬಿಟ್ಟರೆ ಅವರಿಗೆ ಬೇರೆ ಏನು ಗೊತ್ತಿಲ್ಲ. ಕಷ್ಟವೋ ಸುಖವೋ ಅದರಲ್ಲಿ ಹೊಟ್ಟೆ ಉಪಜೀವನ ನಡೆಸುತ್ತಿದ್ದಾರೆ.
ನಾಲ್ಕು ತಿಂಗಳು ನಾಟಕ ಪ್ರದರ್ಶನ ಇಲ್ಲದೇ ಕಲಾವಿದ ಬಳಗ ಕಣ್ಣೀರಲ್ಲಿ ಕೈತೊಳೆಯುವಂತಾಗಿತ್ತು. ಅಂತೂ ಇದೀಗ ಎರಡನೇ ಅಲೆ ನಿಯಂತ್ರಣದಿಂದಾಗಿ ಬಾಗಲಕೋಟೆ ಜಿಲ್ಲಾಡಳಿತ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದ್ದು, ಬಾಗಲಕೋಟೆ ನಗರದಲ್ಲಿ ಈಗ ಆಶಾಪುರ, ಸಂಗಮೇಶ್ವರ, ನಾಟ್ಯಸಂಘ, ಎಂಥ ಮೋಜಿನ ಕುದುರೆ ನಾಟಕ ಪ್ರದರ್ಶನಕ್ಕೆ ಸಂಪೂರ್ಣ ಸಿದ್ದಪಡಿಸಿಕೊಂಡಿದೆ. ಕೊವಿಡ್ ನಿಯಮ ಅಳವಡಿಸಿಕೊಂಡು ನಾಟಕ ಪ್ರದರ್ಶನ ನೀಡುತ್ತಿದ್ದು, ಪ್ರೇಕ್ಷಕರು ಪ್ರೋತ್ಸಾಹಿಸಿ, ನಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ನೆರವು ಆಗಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕ ಕಲಾವಿದೆ ಪ್ರೇಮಾ ಗುಳೇದಗುಡ್ಡ ಮನವಿ ಮಾಡಿದ್ದಾರೆ.
ಒಟ್ಟಾರೆ ಲಾಕ್ಡೌನ್ ಬರೆಯಿಂದ ಸಂಕಷ್ಟದಲ್ಲಿ ಸಿಲುಕಿದ್ದ ವೃತ್ತಿ ರಂಗಭೂಮಿ ಕಲಾವಿದರು ಹಾಗೂ ಕಾರ್ಮಿಕ ವರ್ಗಕ್ಕೆ ಇದೀಗ ಮತ್ತೆ ಮುಖಕ್ಕೆ ಬಣ್ಣ ಹಚ್ಚುವ ಅವಕಾಶ ಸಿಕ್ಕಿದ್ದು, ಸಮಾಧಾನ ತಂದಿದೆ. ಇನ್ನೇನಿದ್ದರೂ ಪ್ರೇಕ್ಷಕ ಪ್ರಭುಗಳು ಅವರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ.
ವರದಿ: ರವಿ ಮೂಕಿ
ಇದನ್ನೂ ಓದಿ: ಕಲಾವಿದರಿಗೆ ಲಾಕ್ಡೌನ್ ಪ್ಯಾಕೇಜ್: ಯಕ್ಷಗಾನದ ಯುವ ಕಲಾವಿದರಿಗೆ ಅನ್ಯಾಯ ತಪ್ಪಿಸಲು ವಯೋಮಿತಿಯನ್ನು 25ಕ್ಕೆ ಇಳಿಸಲು ಮನವಿ
ಮೂಡಬಿದಿರೆಯಲ್ಲಿ ವೇದಿಕೆಯಲ್ಲಿ ಕುಣಿಯುವಾಗಲೇ ಕುಸಿದು ಬಿದ್ದ ಯಕ್ಷಗಾನ ಕಲಾವಿದ