ಬಾಗಲಕೋಟೆ: ಜಿಲ್ಲೆಯಲ್ಲಿ ಬಾಲಕಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ 16 ಗಂಟೆಗಳ ಬಳಿಕ ಮನೆಗೆ ಬಾಲಕಿ ವಾಪಸಾಗಿದ್ದಾಳೆ. ಕಿಡ್ನ್ಯಾಪರ್ಸ್ ಕಾರಿನಲ್ಲಿ ಬಂದು ಬಾಲಕಿಯನ್ನ ಮನೆಯ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಬಾಲಕಿ ಮನೆಗೆ ಬರುತ್ತಿದ್ದಂತೆ ಬಾಲಕಿಯನ್ನು ಎತ್ತಿ ಮುದ್ದಾಡಿದ ಪೋಷಕರು ಫುಲ್ ಖುಷ್ ಆಗಿದ್ದಾರೆ. ಮನೆಯಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿದೆ.
ಸದ್ಯ ಮನೆಗೆ ಸೇಫ್ ಆಗಿ ಬಂದ ಬಾಲಕಿ, ಕಾರಿನಲ್ಲಿ ನಾಲ್ಕು ಜನ ಬಂದಿದ್ರು, ಒಂದಿಷ್ಟು ಜನ ಹಿಂದಿ ಮಾತಾನಾಡ್ತಿದ್ರು, ಕನ್ನಡನೂ ಮಾತಾಡ್ತಿದ್ರು. ನನ್ನನ್ನ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡ ಹೋಗಿದ್ರು. ರಾತ್ರಿ ಕುಡಿಯೋಕೆ ಜ್ಯೂಸ್ ಕೊಟ್ಟಿದ್ರು ಎಂದು ಕೃತಿಕಾ ಮಾಹಿತಿ ನೀಡಿದ್ದಾಳೆ. ಇನ್ನು ಇದೇ ವೇಳೆ ಮಾತನಾಡಿದ ತಾಯಿ ಸುನಿತಾ, ನನ್ನ ಮಗಳು ಮರಳಿ ಬಂದಿದ್ದು ಸಂತಸ ತಂದಿದೆ. ಇಂತಹ ಪರಿಸ್ಥಿತಿ ಯಾವ ತಾಯಿಗೂ ಬರಬಾರದು. ಈಗ ನನಗೆ ನೆಮ್ಮದಿಯಾಗಿದೆ ಎಂದು ಕಣ್ಣೀರು ಹಾಕಿದ್ರು.
ಬಾಗಲಕೋಟೆ ನವನಗರದ 61ನೇ ಸೆಕ್ಟರ್‌ನಲ್ಲಿ ಬಾಲಕಿಯನ್ನ ಅಪಹರಿಸಿ, 50 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಲಾಗಿತ್ತು. ತಿಪ್ಪಣ್ಣ ಕೊಡಗಾನೂರು, ಸುನಿತಾ ದಂಪತಿಯ ಪುತ್ರಿ ಕೃತಿಕಾ ಟ್ಯೂಷನ್‌ಗೆ ಹೋಗಿದ್ದ ವೇಳೆ ಅಪಹರಣಕಾರರು ಕಿಡ್ನ್ಯಾಪ್ ಮಾಡಿದ್ದರು. ಘಟನೆ ಸಂಬಂಧ ಕೃತಿಕಾ ಮಾವ ಅನಿಲ್ ಬಾಡಗಂಡಿಯ ಮೇಲೆ ಅನುಮಾನ ವ್ಯಕ್ತವಾಗಿತ್ತು. ಅನಿಲ್, ಬಿಹಾರದ ನಾಲ್ವರು ಸಹಚರರೊಂದಿಗೆ ಸೇರಿ ಈ ಕೃತ್ಯ ಎಸಗಿರಬಹುದು ಎಂದು ಕುಟುಂಬಸ್ಥರು ಆರೋಪಿಸಿದ್ದರು. ಇತ್ತೀಚೆಗೆ ಅನಿಲ್ ಬಾಡಗಂಡಿ ಜೂಜಿನಿಂದ ಲಾಸ್ ಆಗಿದ್ದ. ಹೀಗಾಗಿ ಹಣಕ್ಕಾಗಿ ಮಾವನೇ ಕಿಡ್ನ್ಯಾಪ್ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಸದ್ಯ ಈ ಪ್ರಕರಣ ಸುಖಾಂತ್ಯ ಕಂಡಿದೆ. ಬಾಲಕಿ ಸೇಫ್ ಆಗಿ ಮನೆ ಸೇರಿದ್ದಾಳೆ.
ಇದನ್ನೂ ಓದಿ: 7 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ 50 ಲಕ್ಷ ರೂ.ಗೆ ಡಿಮ್ಯಾಂಡ್, ಬಾಲಕಿಯ ಜೂಜುಕೋರ ಮಾವನ ಮೇಲೆಯೇ ಅನುಮಾನ
Published On - 1:18 pm, Thu, 28 October 21