ಬಾಗಲಕೋಟೆ ವ್ಯಾಪಾರಿಗೆ ಅಂತಾರಾಜ್ಯ ಆನ್​ಲೈನ್ ಚೋರರಿಂದ 1 ಕೋಟಿ ರೂ. ಪಂಗನಾಮ

ಅಂತರರಾಜ್ಯ ಆನ್​ಲೈನ್ ಖದೀಮರು ಬಾಗಲಕೋಟೆಯ ವ್ಯಾಪಾರಿಯೊಬ್ಬರನ್ನು ನಂಬಿಸಿ ಅವರಿಂದ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಎಗರಿಸಿದ ಘಟನೆ ನಡೆದಿದೆ. ಸದ್ಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬ್ಯಾಂಕ್ ಖಾತೆಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬಾಗಲಕೋಟೆ ವ್ಯಾಪಾರಿಗೆ ಅಂತಾರಾಜ್ಯ ಆನ್​ಲೈನ್ ಚೋರರಿಂದ 1 ಕೋಟಿ ರೂ. ಪಂಗನಾಮ
ಬಾಗಲಕೋಟೆ ವ್ಯಾಪಾರಿಗೆ ಅಂತಾರಾಜ್ಯ ಆನ್​ಲೈನ್ ಚೋರರಿಂದ 1 ಕೋಟಿ ರೂ. ಪಂಗನಾಮ
Updated By: Ganapathi Sharma

Updated on: Nov 04, 2025 | 9:03 AM

ಬಾಗಲಕೋಟೆ, ನವೆಂಬರ್ 4: ಬಾಗಲಕೋಟೆಯಲ್ಲಿ (Bagalkot) ಆನ್ಲೈನ್ ಹೂಡಿಕೆ ವಂಚನೆ (Online Fraud) ಜಾಲಕ್ಕೆ ಸಿಲುಕಿದ ವ್ಯಾಪಾರಿಯೊಬ್ಬರು ಬರೋಬ್ಬರಿ 1.09 ಕೋಟಿ ರೂ. ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ತಾ ಟ್ರೇಡ್ 903 ಸ್ಟ್ರಾಟಜಿ ಹಬ್ ಎಂಬ ಹೆಸರಿನ ನಕಲಿ ಆನ್ಲೈನ್ ಗ್ರೂಪ್ ಮೂಲಕ ಅಂತಾರಾಜ್ಯ ಆನಲೈನ್ ಖದೀಮರು ವ್ಯಾಪಾರಿಯ ವಿಶ್ವಾಸ ಗಳಿಸಿದ್ದಾರೆ. ಆಮೇಲೆ, ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುತ್ತೇವೆ ಎಂಬ ಆಮಿಷವೊಡ್ಡಿ ಹೆಸರಿನಲ್ಲಿ ಹಣ ಎಗರಿಸಿದ್ದಾರೆ.

ಆಗಸ್ಟ್ 12 ರಂದು ನಕಲಿ ಇನ್ವೆಸ್ಟ್‌ಮೆಂಟ್ ಮಾರ್ಕೆಟ್ ಮೂಲಕ ಬಾಗಲಕೋಟೆ ಮೂಲದ ವ್ಯಾಪಾರಿಗೆ ಗಾಳ ಹಾಕಿದ್ದ ಆನ್​ಲೈನ್ ವಂಚಕರು, ಮೊದಲು ಗ್ರೂಪ್‌ಗೆ ಸೇರಿಸಿಕೊಂಡಿದ್ದರು. ಬಳಿಕ ಚಿಕ್ಕ ಮೊತ್ತದ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು. ಆನಂತರ ಲಾಭ ತೋರಿಸಿ ಹಂತ ಹಂತವಾಗಿ ಕೋಟಿ ರೂಪಾಯಿಗೂ ಹೆಚ್ಚಿನ ಹೂಡಿಕೆ ಮಾಡಿಸಿಕೊಂಡು ದೋಖಾ ಮಾಡಿದ್ದಾರೆ.

ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 27ರವರೆಗೆ ನಡೆದ ವಹಿವಾಟಿನಲ್ಲಿ ವ್ಯಾಪಾರಿಯಿಂದ 1,09,05,800 ರೂಪಾಯಿ ವಂಚಿಸಿರುವ ಆರೋಪ ಇದೆ. ಈ ಪೈಕಿ ಕೇವಲ 5 ಲಕ್ಷ ರೂ. ಮಾತ್ರ ಹಿಂದಿರುಗಿಸಿ, ಬಳಿಕ ಗ್ರೂಪ್‌ನ್ನು ಡಿಲೀಟ್ ಮಾಡಿ ಸಂಪರ್ಕ ಕಡಿತಗೊಳಿಸಿದ್ದಾರೆ.

ಆನ್​ಲೈನ್ ಹೂಡಿಕೆ ವಂಚನೆ: ಪೊಲೀಸರು ಹೇಳಿದ್ದೇನು?

ಘಟನೆಯ ಬಗ್ಗೆ ಬಾಗಲಕೋಟೆ ಎಸ್‌ಪಿ ಸಿದ್ಧಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ. ಸದ್ಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಂಚಕರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ವೃದ್ಧಾಪ್ಯದಲ್ಲಿ ಮಹಿಳೆಯರ ಚಪಲ: ಬೆಂಗಳೂರಲ್ಲಿ ವ್ಯಕ್ತಿ ಕಳೆದುಕೊಂಡಿದ್ದು ಲಕ್ಷ ಲಕ್ಷ ಹಣ

ಇತ್ತೀಚೆಗೆ ಕರ್ನಾಟಕದಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವುದು ಕಂಡುಬಂದಿದೆ. ನಕಲಿ ಇನ್ವೆಸ್ಟ್‌ಮೆಂಟ್ ಆ್ಯಪ್‌ಗಳು, ಟ್ರೇಡಿಂಗ್ ಗ್ರೂಪ್‌ಗಳು, ಬ್ಯಾಂಕ್ OTP, KYC ಅಪ್ಡೇಟ್, ಫೇಕ್ ಲಿಂಕ್, ಡಿಜಿಟಲ್ ಅರೆಸ್ಟ್ ಇತ್ಯಾದಿಗಳ ಮೂಲಕ ನಾಗರಿಕರಿಂದ ಲಕ್ಷಾಂತರ ರೂಪಾಯಿ ಎಗರಿಸುವ ಪ್ರಕರಣಗಳು ವರದಿಯಾಗುತ್ತಿವೆ. ಅಪರಿಚಿತ ಲಿಂಕ್‌ಗಳನ್ನು ತೆರೆಯದಂತೆ, ಅಪರಿಚಿತರನ್ನು ಹೆಚ್ಚು ವಿಶ್ವಾಸಕ್ಕೆ ತೆಗೆದುಕೊಂಡ ವ್ಯವಹಾರಗಳನ್ನು ನಡೆಸದಂತೆ ಸೈಬರ್ ಕ್ರೈಂ ಪೊಲೀಸರು ಜನರಿಗೆ ಸಲಹೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ