ಬಾಗಲಕೋಟೆ, ಅಕ್ಟೋಬರ್ 15: ಈಗ ಪ್ರತಿ ಮನೆಯಲ್ಲೂ ಹಳ್ಳಿ ಹಳ್ಳಿಯಲ್ಲೂ ಸಿಲಿಂಡರ್ ಗ್ಯಾಸ್ ಮೇಲೆ ಅಡುಗೆ ಬೇಯುತ್ತದೆ. ರೊಟ್ಟಿ (roti) ತಟ್ಟುವ ಬದಲು ಚಪಾತಿಯಂತೆ ಲಟ್ಟಿಸುವ ರೂಢಿ ಶುರುವಾಗಿದೆ. ರೊಟ್ಟಿ ತಟ್ಟುವ ಶಬ್ದ ಕೂಡ ಅಪರೂಪವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅದೊಂದು ಗ್ರಾಮದಲ್ಲಿ ರೊಟ್ಟಿ ಬಡಿಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಣ್ಣಿನ ಮಡಿಕೆಯಲ್ಲಿ ಪಲ್ಯೆ ಕುದಿಸಲಾಗಿತ್ತು. ಇಷ್ಟೆಲ್ಲ ಮಾಡಿರುವವರು ಬೇರೆ ಯಾರು ಅಲ್ಲ ಶಾಲಾ ಕಾಲೇಜು ವಿದ್ಯಾರ್ಥಿನಿಯರು.
ಜಿಲ್ಲೆಯ ಮುಧೋಳ ತಾಲ್ಲೂಕಿನ ಕೋಡಿಹಾಳ ಗ್ರಾಮದ ತ್ರಿಪುರವಾಸಿನಿ ಚಕ್ರೇಶ್ವರಿ ಜಾತ್ರೆ ಹಾಗೂ ಸಿದ್ದಶ್ರಿ ಉತ್ಸವ ನವರಾತ್ರಿ ಹಿನ್ನೆಲೆ ರಾಜ್ಯಮಟ್ಟದ ರೊಟ್ಟಿ ಬಡಿಯುವ ವಿಶೇಷ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಬಾಗಲಕೋಟೆ, ಬೆಳಗಾವಿ, ವಿಜಯಪುರ ಸೇರಿದಂತೆ ವಿವಿಧ ಕಡೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಇದರಲ್ಲಿ ಭಾಗಿಯಾಗಿದ್ದರು. ಜೋಳ, ಗೋವಿನಜೋಳ, ರಾಗಿ, ಸಜ್ಜೆ ರೊಟ್ಟಿಯನ್ನು ಬಡಿದರು. ಜೊತೆಗೆ ಮಣ್ಣಿನ ಗಡಿಗೆಯಲ್ಲಿ ಬದನೆ, ಹೆಸರುಕಾಳು, ಬಟಾಟಿ, ಬೆಂಡಿ, ಚವಳೆಕಾಯಿ ಪಲ್ಯೆ ಸೇರಿದಂತೆ ವಿವಿಧ ಪಲ್ಯೆ ಮಾಡಿ ಮೆಚ್ಚುಗೆ ಗಳಿಸಿದರು.
ಕೋಣಮಣಿಗೆ ಮೇಲೆ ರೊಟ್ಟಿ ತಟ್ಟಿ ಒಲೆ ಮೇಲಿನ ತವೆಯಲ್ಲಿ ರೊಟ್ಟಿ ಬೇಯಿಸಿದರು. ನಾವು ಮನೆಯಲ್ಲಿ ಅವ್ವ ಮಾಡಿದ ರೊಟ್ಟಿ ತಿಂದು ಶಾಲೆ-ಕಾಲೇಜಿಗೆ ದಿನಾಲು ಹೋಗ್ತಿವಿ. ಆದರೆ ಇದೊಂದು ಅನುಭವವೇ ಬೇರೆ ಇದೆ. ಇದರಿಂದ ನಮಗೆ ನಮ್ಮ ಆಹಾರ ಸಂಸ್ಕೃತಿ, ಮಾಡುವ ಮೂಲ ಪದ್ದತಿಗೆ ಎಷ್ಟು ಮಹತ್ವ ಇದೆ ಎಂದು ತಿಳಿಯುವುದಕ್ಕೆ ಸಾಧ್ಯ ಆಯಿತು ಎಂದು ಹರ್ಷಪಟ್ಟರು.
ಇದನ್ನೂ ಓದಿ: ಬಾಗಲಕೋಟೆ: ನದಿ ಒತ್ತುವರಿ: ಹರಿಯುವ ದಿಕ್ಕನ್ನೇ ಬದಲಿಸಿದ ಮಲಪ್ರಭೆ
ಈ ಸ್ಪರ್ಧೆಯಲ್ಲಿ ಎಂಟನೇ ತರಗತಿಯಿಂದ ಹಿಡಿದು ಪಿಯುಸಿ ವಿದ್ಯಾರ್ಥಿನಿಯರಿಗೆ ಅವಕಾಶವಿತ್ತು. ಇಬ್ಬರು ವಿದ್ಯಾರ್ಥಿನಿಯರ ಒಂದು ಜೋಡಿಯಂತೆ 42 ಜೋಡಿ ರೊಟ್ಟಿ ಬಡಿಯುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ವಿದ್ಯಾರ್ಥಿನಿಯರು ಬಡಿದ ರೊಟ್ಟಿ, ಪಲ್ಯೆ, ತರಕಾರಿ ಸೊಪ್ಪು, ಕಾಳು, ಮುದ್ದೆ, ಹೋಳಿಗೆ ನೋಡಿದರೆ ಬಾಯಿ ಚಪ್ಪರಿಸುತ್ತದೆ. ಚಕ್ರೇಶ್ವರಿ ಜಾತ್ರೆಗೆ ಬಂದ ಭಕ್ತರಿಗೆ ಇದೇ ಆಹಾರವನ್ನು ಪ್ರಸಾದವನ್ನಾಗಿ ನೀಡಲಾಗ್ತಿತ್ತು.
ಸ್ಪರ್ಧೆಯಲ್ಲಿ ಮೊದಲ ಬಹುಮಾನ 7 ಸಾವಿರ, ದ್ವಿತೀಯ 5 ಸಾವಿರ, ತೃತೀಯ 3 ಸಾವಿರ, ನಾಲ್ಕನೇ ಬಹುಮಾನ 2 ಸಾವಿರ, ಐದನೇ ಬಹುಮಾನವಾಗಿ 1 ಸಾವಿರ ರೂ ನಿಗದಿ ಮಾಡಲಾಗಿತ್ತು. ಒಂದು ಜೋಡಿ ಒಟ್ಟು ಹದಿನೈದು ರೊಟ್ಟಿ ಬಡಿದು ಯಾವುದಾದರೂ ಒಂದು ತರಹದ ಪಲ್ಯೆ ಮಾಡಬೇಕು. ರೊಟ್ಟಿ ದುಂಡಗೆ ಇರಬೇಕು, ಹರಿದಿರಬಾರದು, ರೊಟ್ಟಿಗೆ ಎಳ್ಳು ಲೇಪಿಸಿರಬೇಕು. ಪಲ್ಯೆ ರುಚಿಯಾಗಿರಬೇಕು ಉಪ್ಪು ಕಾರ ಎಲ್ಲವೂ ಹದವಾಗಿರಬೇಕೆಂಬುದು ನಿಯಮವಾಗಿತ್ತು.
ಇದನ್ನೂ ಓದಿ: ಬರ ಎಫೆಕ್ಟ್; ಬಾಗಲಕೋಟೆಯಲ್ಲಿ ಜೋಳ, ರೊಟ್ಟಿ ರೇಟ್ ಡಬಲ್
ಉತ್ಸವಕ್ಕೆ ಬಂದಿದ್ದ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಹಾಗೂ ಇತರೆ ಅಥಿತಿಗಳು ರೊಟ್ಟಿ ನೋಡಿ, ರುಚಿ ಸವಿದು ನೀಡಿದ ನಿರ್ಣಯ ಪ್ರಕಾರ ಸ್ಥಾನ ಆಯ್ಕೆ ಮಾಡಲಾಗುತ್ತದೆ. ಚಕ್ರೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ರನ್ನಬೆಳಗಲಿ ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಚೋಪಡೆಯವರು ರೊಟ್ಟಿ ಸ್ಪರ್ಧೆ ನೇತೃತ್ವವಹಿಸಿದ್ದರು.
ಶಿಕ್ಷಕ ಬಾಲೃಷ್ಣ ಚೋಪಡೆಯವರು ಕಳೆದ ಒಂಬತ್ತು ವರ್ಷದಿಂದ ವಿದ್ಯಾರ್ಥಿನಿಯರಿಗೆ ರೊಟ್ಟಿ ಬಡಿಯುವ ಸ್ಪರ್ಧೆ ಆಯೋಜನೆ ಮಾಡುತ್ತಾ ಬಂದಿದ್ದು, ಇದು ಅವರ ನೇತೃತ್ವದಲ್ಲಿ ರೊಟ್ಟಿ ಬಡಿಯುವ ದಶಮಾನೋತ್ಸವ ಸ್ಪರ್ಧೆ ಆಗಿದೆ. ವಿದ್ಯಾರ್ಥಿನಿಯರಿಗೆ ಉತ್ತರ ಕರ್ನಾಟಕ ಆಹಾರ ಸಂಸ್ಕೃತಿ ಪರಿಚಯ. ಖುದ್ದಾಗಿ ವಿದ್ಯಾರ್ಥಿನಿಯರಿಂದಲೇ ರೊಟ್ಟಿ ಬಡಿಸಿ ಅನುಭವ ಮೂಡಿಸುವ ಪ್ರಯತ್ನ. ಉತ್ತರ ಕರ್ನಾಟಕ ಆಹಾರ ಸಂಸ್ಕೃತಿ ಅಡುಗೆ ಪದ್ದತಿ ಉಳಿಸಿ ಬೆಳೆಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ಒಟ್ಟಿನಲ್ಲಿ ಊಟ ಅದೇ ಆದರೂ ಅದನ್ನು ಮಾಡುವ ವಿಧಾನ ಇಂದು ಬದಲಾಗುತ್ತಿದೆ. ಇಂತಹ ವೇಳೆಯಲ್ಲಿ ಮೂಲ ಪದ್ದತಿಯಲ್ಲಿ ರೊಟ್ಟಿ, ಪಲ್ಯೆ ಮಾಡುವ ಪರಿಚಯವನ್ನು ವಿದ್ಯಾರ್ಥಿಗಳಿಗೆ ಸ್ಪರ್ಧೆ ಮೂಲಕ ಮಾಡಿಸಿದ್ದು ಶ್ಲಾಘನೀಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:39 pm, Sun, 15 October 23