ಬಾಗಲಕೋಟೆ: ಮನೆ ಬಾಗಿಲೆದುರು ಹಚ್ಚಿದ್ದ ದೀಪದಿಂದ ಅವಘಡ; 7 ಜನರಿಗೆ ಗಾಯ, ಮನೆ ಸುಟ್ಟು ಕರಕಲು!

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಾಗಲಕೋಟೆಯ ಗದ್ದನಕೇರಿ ಕ್ರಾಸ್ ಬಳಿಯ ಮನೆಯೊಂದರ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಅವಾಂತರವೊಂದು ಸಂಭವಿಸಿದೆ. ದೀಪದಿಂದ ಹೊತ್ತಿದ ಬೆಂಕಿ ಇಡೀ ಮನೆಯನ್ನು ಸುಟ್ಟು ಕರಕಲು ಮಾಡಿದೆ. 7 ಜನರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಬೆಂಕಿ ನಂದಿಸಲಾಗಿದೆ.

ಬಾಗಲಕೋಟೆ: ಮನೆ ಬಾಗಿಲೆದುರು ಹಚ್ಚಿದ್ದ ದೀಪದಿಂದ ಅವಘಡ; 7 ಜನರಿಗೆ ಗಾಯ, ಮನೆ ಸುಟ್ಟು ಕರಕಲು!
ದೀಪದಿಂದ ಹೊತ್ತಿದ ಬೆಂಕಿ
Updated By: ಗಂಗಾಧರ​ ಬ. ಸಾಬೋಜಿ

Updated on: Oct 19, 2025 | 7:38 AM

ಬಾಗಲಕೋಟೆ, ಅಕ್ಟೋಬರ್​​ 19: ದೇಶಾದ್ಯಂತ ದೀಪಾವಳಿ (Deepavali) ಹಬ್ಬದ ಸಂಭ್ರಮ ಮನೆ ಮಾಡಿದೆ.  ಆದರೆ ಈ ವೇಳೆ ಇತ್ತ ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್​​​ನಲ್ಲಿರುವ ಮನೆಯೊಂದರ ಬಾಗಿಲು ಎದುರು ಹಚ್ಚಿದ್ದ ದೀಪದಿಂದ ಅವಾಂತರ ಸಂಭವಿಸಿದೆ. ಪರಿಣಾಮ ಬೆಂಕಿಯ (Fire) ಜಳ ತಗುಲಿ ಏಳು ಜನರಿಗೆ ಗಾಯಗಳಾಗಿವೆ. ಅದೃಷ್ಟವಶಾತ್​​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳುಗಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಡೆದದ್ದೇನು? 

ಉಮೇಶ್ ಮೇಟಿ​​ ಎಂಬುವವರ ಕಟ್ಟಡಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇದೇ ಕಟ್ಟಡದಲ್ಲಿ ರಾಜೇಂದ್ರ ತಪಶೆಟ್ಟಿ ಕುಟುಂಬ ಸೇರಿ ಮತ್ತೊಂದು ಕುಟುಂಬ ಬಾಡಿಗೆಗೆ ಇದ್ದರು. ರಾಜೇಂದ್ರ ತಪಶೆಟ್ಟಿ ಕುಟುಂಬಸ್ಥರು ಮನೆ ಎದುರು ದೀಪ ಹಚ್ಚಿದ್ದರು. ಆ ದೀಪದ ಬೆಂಕಿ ಮನೆ ಎದುರಿಗೆ ಬಿದ್ದ ಆಯಿಲ್​​ಗೆ ತಗುಲಿ ಬೆಂಕಿ ಹೊತ್ತಿದೆ. ಮನೆ ಮುಂದಿನ ಎರಡು ಬೈಕ್ ಸುಟ್ಟು, ಮನೆಗೂ ಬೆಂಕಿ ಪ್ರವೇಶಿಸಿದೆ. ಅಡುಗೆ ಮನೆಯ ಸಿಲಿಂಡರ್ ಕೂಡ ಸೋರಿ ಮತ್ತಷ್ಟು ಬೆಂಕಿಯ ತೀವ್ರತೆ ಹೆಚ್ಚಾದೆ. ನೋಡನೋಡುತ್ತಿದ್ದಂತೆ ಮನೆ ಸುಟ್ಟು ಕರಕಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ: ನಿವೃತ್ತ ಯೋಧನಿಗೆ ಗಂಭೀರ ಗಾಯ, ಮನೆಯ ಮೇಲ್ಛಾವಣಿ, ಗೋಡೆ ಕುಸಿತ

ರಾಜೇಂದ್ರ ತಪಶೆಟ್ಟಿ ಬೋರ್ ವೆಲ್​​​ ಕೆಲಸ ಮಾಡುತ್ತಿದ್ದರು. ಈ‌ ಹಿನ್ನೆಲೆ ಮನೆ ಎದುರು ಬೋರ್ ವೆಲ್​​​ ವಾಹನಗಳ ಆಯಿಲ್, ಗ್ರೀಸ್ ಬಿದ್ದಿತ್ತು. ದೀಪದ ಬೆಂಕಿ ಆಯಿಲ್, ಗ್ರೀಸ್​​ಗೆ ತಗುಲಿ ನಂತರ ಬೈಕ್ ಮತ್ತು ಮನೆಗೂ ವ್ಯಾಪಿಸಿದೆ. ಈ ವೇಳೆ ಹೊರಗಡೆ ಓಡಿ ಬಂದು ರಾಜೇಂದ್ರ ತಪಶೆಟ್ಟಿ ಕುಟುಂಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.

ಇದನ್ನೂ ಓದಿ: ಬೆಂಗಳೂರು: ಕೃಷ್ಣ ಜನ್ಮಾಷ್ಟಮಿಯಂದೇ ಅಗ್ನಿ ಅವಘಡ, ಐವರು ಸಾವು

ಈ ವೇಳೆ ತಪಶೆಟ್ಟಿ ಕುಟುಂಬ ಮನೆಯಿಂದ ಹೊರಗೆ ಓಡಿಬಂದು ಬಚಾವ್ ಆಗಿದ್ದಾರೆ. ಆದರೆ ಅದೇ ಕಟ್ಟಡದ ಮೇಲ್ಮಹಡಿಯಲ್ಲಿ ವಾಸವಿದ್ದ ಮತ್ತೊಂದು ಕುಟುಂಬದ ಜನರು ಬೆಂಕಿಯ ಜಳ‌ ತಗುಲಿ ಗಾಯಗೊಂಡಿದ್ದಾರೆ. ಮನೆಯಲ್ಲಿನ ವಸ್ತುಗಳು ಸುಟ್ಟು ‌ಕರಕಲಾಗಿವೆ. ಸ್ಥಳಕ್ಕೆ ಬಾಗಲಕೋಟೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ಶಮನ ಮಾಡಿದ್ದಾರೆ. ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.