
ಬಾಗಲಕೋಟೆ, ನವೆಂಬರ್ 16: ಜಿಲ್ಲೆಯ ರಬಕವಿ ಬನಹಟ್ಟಿಯ ಸಮೀರವಾಡಿ ಬಳಿಯಿರುವ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ (Sugarcane Farmers Protest) ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಜನ ರೈತರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಈ ನಡೆಯನ್ನು ವಿರೋಧಿಸಿ ರೈತರು ತುರ್ತು ಸಭೆಗೆ ಮುಂದಾಗಿದ್ದಾರೆ.
ಕಬ್ಬಿಗೆ ಯೋಗ್ಯ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ನಂತರ ಆಕ್ರೋಶ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಕಾರ್ಖಾನೆಗೆ ಮುತ್ತಿಗೆ ಹಾಕಲು ಹೊರಟಿದ್ದರು. ಈ ಸಂದರ್ಭದಲ್ಲಿ ಕಾರ್ಖಾನೆ ಆವರಣದಲ್ಲಿ ನಿಂತಿದ್ದ ಕಬ್ಬು ತುಂಬಿದ 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಸಂಬಂಧ ಸಿದ್ದಪ್ಪ ಬಳಗಾನೂರ, ಮಲ್ಲು ಮೆಟಗುಡ್ಡ, ರಾಜುಗೌಡ ಪಾಟೀಲ್, ಬಸು ನಾಯ್ಕರ್ ಸೇರಿದಂತೆ ಒಟ್ಟು 10 ಮಂದಿಯನ್ನು ಮಹಾಲಿಂಗಪುರ ಠಾಣೆಯ ಪೊಲೀಸರು ವಿಚಾರಣೆಗೆ ಕರೆದಿದ್ದು, ನಂತರ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ ಬಾಗಲಕೋಟೆಯಲ್ಲಿ ಕಬ್ಬು ಬೆಳೆಗಾರರ ರೋಷಾಗ್ನಿ: 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ
ರೈತರನ್ನು ವಶಕ್ಕೆ ಪಡೆದಿದ್ದನ್ನು ಖಂಡಿಸಿ ರೈತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಎಲ್‌ಬಿಸಿ ಐಬಿ ಆವರಣದಲ್ಲಿ ತುರ್ತು ಸಭೆ ಕರೆಯಲಾಗಿದ್ದು, ಮುಂದಿನ ಹೋರಾಟದ ತೀವ್ರತೆಯ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ ಕಣ್ಮುಂದೆ ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಸರ್ಕಾರ ನಿಗದಿ ಪಡಿಸಿದ 3300 ರೂಪಾಯಿ ಕಬ್ಬಿನ ಬೆಲೆಗೆ ವಿರೋಧ ವ್ಯಕ್ತಪಡಿಸಿದ್ದ ಮುಧೋಳ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರೇ ಮಾತುಕತೆಗೆ ಬರಬೇಕು. ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ದರು. ಅಷ್ಟೇ ಅಲ್ಲದೆ ಅ.13ರಂದು ಗೋದಾವರಿ ಸಕ್ಕರೆ ಕಾರ್ಖಾನೆಯ ಬಳಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಘಟನೆಗೆ ಪ್ರತಿಕ್ರಿಯಿಸಿದ್ದ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್, ಇಡೀ ರಾಜ್ಯದಲ್ಲಿ ಎಲ್ಲೂ ಕೂಡ ರೈತರು ಹೀಗೆ ಮಾಡಿಲ್ಲ, ಹಾಗಾಗಿ ಇದು ರೈತರ ಹೆಸರಲ್ಲಿ ಕಿಡಿಗೇಡಿಗಳು ಮಾಡಿದ್ದು ಎಂದಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:19 pm, Sun, 16 November 25