ಬಾಗಲಕೋಟೆ, ಏ.14: ಮುಂಗಾರು, ಹಿಂಗಾರು ಎರಡು ಮಳೆ ಕೈಕೊಟ್ಟು ಭೀಕರ ಬರ ಬಿದ್ದಿದೆ .ಇದರಿಂದ ರೈತರ ಬದುಕು ಅಧೋಗತಿಗೆ ತಲುಪಿದೆ. ಇನ್ನು ಜಿಲ್ಲೆಯಲ್ಲಿ ದಾಖಲೆ ಮಟ್ಟದ ಬಿಸಿಲು ಬಿದ್ದು, ಬದುಕು ಕೆಂಡದಂತಾಗಿದೆ. ಈ ವೇಳೆಯಲ್ಲಿ ಎರಡು ದಿನ ಸಂಜೆ ಸುರಿದ ಮಳೆ, ಬಿಸಿಲಿಂದ ಬೆಂದ ಜನರಿಗೆ ತಂಪೆರೆದಿದೆ. ಆದರೆ, ಅದೇ ವರುಣ ಕೆಲ ರೈತರಿಗೆ ಮಾರಕವಾಗಿದ್ದಾನೆ. ಹೌದು, ಬಾಗಲಕೋಟೆ(Bagalkote) ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಕೊಂಕಣಕೊಪ್ಪ ಗ್ರಾಮದ ಹನುಮಂತಪ್ಪ ಯರಗೊಪ್ಪ ಎಂಬ ರೈತ, ಒಂದು ಎಕರೆ ಏಳು ಗುಂಟೆ ಜಾಗದಲ್ಲಿ ಬಾಳೆ ಬೆಳೆದಿದ್ದಾರೆ. ಆದರೆ, ಎರಡು ದಿನ ಸುರಿದ ಮಳೆ, ಬೀಸಿದ ಭೀಕರ ಗಾಳಿಯಿಂದ ಬಾಳೆ ನೆಲಕ್ಕುರುಳಿದೆ.
ಬಾಳೆಗಿಡದಲ್ಲಿದ್ದ ಬಾಳೆಗೊನೆಗಳು ಧರೆಗೆ ಅಪ್ಪಳಿಸಿವೆ. ಇನ್ನೇನು 20 ರಿಂದ 25 ದಿನದಲ್ಲಿ ಫಸಲು ಬರುತ್ತಿತ್ತು. ಆದರೆ, ವರುಣನ ಹೊಡೆತಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಲಕ್ಷಾಂತರ ರೂ. ನಷ್ಟವಾಗಿದ್ದು, ರೈರನಿಗೆ ದಿಕ್ಕು ತೋಚದಂತಾಗಿದೆ. ಹನುಮಂತಪ್ಪ ಯರಗೊಪ್ಪ ಅವರು ಒಬ್ಬ ಬಡರೈತರಾಗಿದ್ದು, ಬನವಾಸಿಯಿಂದ ಯಾಲಕ್ಕಿ ಬಾಳೆಯನ್ನು ತಂದು ನೆಟ್ಟಿದ್ದಾರೆ. ಬಾಳೆ ತಂದು ನೆಟ್ಟು ಬೆಳೆಸೋದಕ್ಕೆ ಬರೊಬ್ಬರಿ ಮೂರು ಲಕ್ಷದಷ್ಟು ಹಣ ಖರ್ಚು ಮಾಡಿದ್ದಾರೆ. ಈಗಾಗಲೇ ಮುಂಗಾರು ಹಿಂಗಾರು ಮಳೆ ಕೈಕೊಟ್ಟು ಇತರೆ ಬೆಳೆ ಹಾಳಾಗಿದೆ. ಆದರೆ, ಯಾಲಕ್ಕಿ ಬಾಳೆಗೆ ಉತ್ತಮ ಬೆಲೆ ಸಿಗುತ್ತದೆ, ಇದನ್ನು ಯಾವುದೇ ಕಾರಣಕ್ಕೂ ಹಾಳಾಗಲು ಬಿಡಬಾರದು ಎಂದು ಇವರು ಶ್ರಮಪಟ್ಟಿದ್ದು ಅಷ್ಟಿಷ್ಟಲ್ಲ.
ಇದನ್ನೂ ಓದಿ:ರಾಜ್ಯದ ಕೆಲವೆಡೆ ಭಾರೀ ಮಳೆ; ಸಿಡಿಲು ಬಡಿದು ಓರ್ವ ಸಾವು
ತಮ್ಮ ಹೊಲದಲ್ಲಿ ಇದ್ದ ಬಾವಿಯಲ್ಲಿನ ಅಲ್ಪ, ಸ್ವಲ್ಪ ನೀರನ್ನು ಹನಿ-ನೀರಾವರಿ ಮೂಲಕ ಬಾಳೆಗೆ ಸರಬರಾಜು ಮಾಡಿ, ಬಾಳೆ ಬೆಳೆದಿದ್ದಾರೆ. ಗೊಬ್ಬರ, ಕ್ರಿಮಿನಾಶಕ, ಆಳು ಕಾಳು ಎಂದು ಮೂರು ಲಕ್ಷ ಹಣವನ್ನು ಖರ್ಚು ಮಾಡಿದ್ದಾರೆ. ಆದರೆ, ಇಷ್ಟು ದಿನ ಬರಬೇಕಾದ ಸಮಯದಲ್ಲಿ ಬಾರದ ಮಳೆ, ಬರಬಾರದ ವೇಳೆ ಬಂದು ರೈತನ ಬದುಕನ್ನು ಬರ್ಬಾದ್ ಮಾಡಿದೆ. ಇಲ್ಲಿ ಪ್ರತಿಶತ 80 ರಷ್ಟು ಬಾಳೆ ನೆಲಕ್ಕೆ ಉರುಳಿ ಹಾಳಾದರೆ, ಇನ್ನುಳಿದ 20ಪ್ರತಿಶತ ಬಾಳೆಯ ಗಿಡದ ಎಲೆಗಳು ಗಾಳಿಗೆ ಹರಿದು ಒಣಗುತ್ತಿವೆ. ಇವು ಕೂಡ ಹಾಳಾಗುತ್ತವೆ. ಆ ಮೂಲಕ ಇಡೀ ಒಂದು ಎಕರೆ ಏಳು ಗುಂಟೆ ನಾಶವಾಗಿದೆ. ಈ ಹಿನ್ನಲೆ ಸರಕಾರ ಈ ರೈತನಿಗೆ ಯೋಗ್ಯ ಪರಿಹಾರ ನೀಡಿ ಆಸರೆಯಾಗಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಇಷ್ಟು ದಿನ ಮಳೆ ಮಳೆ ಅಂತಿದ್ದ ರೈತರಿಗೆ ಮಳೆ ಕೆಲವರಿಗೆ ತಂಪು ನೀಡಿದರೆ, ಕೆಲ ರೈತರ ಬೆಳೆ ಹಾಳು ಮಾಡಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಏನೇ ಆಗಲಿ ಮೊದಲೆ ಬರದಿಂದ ಕಂಗೆಟ್ಟ ರೈತರಿಗೆ ತಡವಾಗಿ ಬಂದ ಮಳೆ, ಬರೆ ಎಳೆದಿದ್ದು ಸರಕಾರ ಸೂಕ್ತ ಪರಿಹಾರ ನೀಡುವ ಕಾರ್ಯ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ