
ಬಾಗಲಕೋಟೆ, ಜುಲೈ 5: ಒಂದು ಕಡೆ ಕಾಲೇಜಿನಲ್ಲಿ ಕಂಪ್ಯೂಟರ್ ಶಿಕ್ಷಣ. ಇನ್ನೊಂದೆಡೆ ಮನದಲ್ಲಿ ಹತ್ತಾರು ಕನಸು, ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಬಸ್ ಏರುತ್ತಿರುವ ವಿದ್ಯಾರ್ಥಿಗಳು. ಕಾಲೇಜು ಸಿಬ್ಬಂದಿಯಿಂದ ಸಂಭ್ರಮದ ಬೀಳ್ಕೊಡುಗೆ. ಇದೆಲ್ಲ ಕಂಡುಬಂದಿದ್ದು ಬಾಗಲಕೋಟೆ ಸರ್ಕಾರಿ ಪದವಿ (Bagalkote Government Degree College) ಕಾಲೇಜಿನಲ್ಲಿ. ಬಾಗಲಕೋಟೆ ಸರ್ಕಾರಿ ಪದವಿ ಕಾಲೇಜು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುತ್ತಿದೆ. ಯಾವುದೇ ಖಾಸಗಿ ಕಾಲೇಜಿಗೂ ಕಡಿಮೆಯಿಲ್ಲದಂತೆ ಸಾಧನೆ ಮಾಡುತ್ತಿದೆ. ಕಳೆದ ಐದಾರು ವರ್ಷದಿಂದ ಕಾಲೇಜಿನಿಂದ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದ (Campus Iterview) ಮೂಲಕ ಕೆಲಸ ಪಡೆದುಕೊಂಡಿದ್ದಾರೆ. ಇಲ್ಲಿ ಬರಿ ಬೋಧನೆ ಮಾತ್ರವಲ್ಲ ಬದುಕಿಗೆ ದಾರಿ ತೋರಲಾಗುತ್ತಿದೆ. ಯಾವುದೇ ಖಾಸಗಿ ಕಾಲೇಜಿಗೆ ಕಡಿಮೆಯಿಲ್ಲದಂತೆ ಕ್ಯಾಂಪಸ್ ಸಂದರ್ಶನ ನಡೆಸಲಾಗಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಕಲ್ಪಿಸಲಾಗುತ್ತಿದೆ.
ಈ ವರ್ಷ ಬರೊಬ್ಬರಿ 200 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದ ಮೂಲಕ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಪಡೆದಿದ್ದಾರೆ. ‘ಎಜಾಕಿ’ ಎಂಬ ಎರೊಸ್ಪೇಸ್ ಉತ್ಪನ್ನಗಳ ತಯಾರಿಕೆ ಕಂಪನಿಯಲ್ಲಿ 200 ಜನ ಉದ್ಯೋಗ ಪಡೆದಿದ್ದಾರೆ. ಅದರಲ್ಲಿ ಕಲಾ ವಿಭಾಗದ 80 ಜನ, ವಾಣಿಜ್ಯ ವಿಭಾಗದ 40, ವಿಜ್ಞಾನ ವಿಭಾಗದ 60, ಬಿಸಿಎ ಕಲಿತ 20 ಮಂದಿ ವಿದ್ಯಾರ್ಥಿಗಳಿದ್ದಾರೆ.
ಬೆಂಗಳೂರಿನ ‘ಎಜಾಕಿ’ ಕಂಪನಿ ಎರೊಸ್ಪೇಸ್ ಉತ್ಪನ್ನಗಳ ತಯಾರಿಕಾ ಘಟಕವಾಗಿದ್ದು, ಊಟ ವಸತಿ ನೀಡಿ ಪ್ರಾರಂಭಿಕ ಹಂತದಲ್ಲೇ 21 ಸಾವಿರ ವೇತನ ನೀಡಲಾಗುತ್ತಿದೆ. ಉದ್ಯೋಗಕ್ಕೆ ಹೊರಟ ವಿಧ್ಯಾರ್ಥಿಗಳನ್ನು ಕಾಲೇಜು ಸಿಬ್ಬಂದಿ ಸಂಭ್ರಮದಿಂದ ಬೀಳ್ಕೊಟ್ಟಿದ್ದಾರೆ.
ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ, ಬಿಕಾಮ್, ಬಿಎಸ್ಸಿ, ಬಿಸಿಎ, ಬಿಬಿಎ ಇದ್ದು ಒಟ್ಟು 3 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಷ್ಟೊಂದು ಮಂದಿ ವಿದ್ಯಾರ್ಥಿಗಳು ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಶಿಕ್ಷಣದ ಜೊತೆಗೆ ಉದ್ಯೋಗ ಕಲ್ಪಿಸುತ್ತಿರುವುದು ಈ ಕಾಲೇಜಿನ ಮತ್ತೊಂದು ಗರಿಮೆಯಾಗಿದೆ.
ಕಾಲೇಜು ಕ್ವೆಸ್, ಟಾಟಾ, ಮಹಿಂದ್ರಾ, ಎಜಾಕಿ ಸೇರಿದಂತೆ ಐದಾರು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಪ್ರತಿ ವರ್ಷ ಕ್ಯಾಂಪಸ್ ಸಂದರ್ಶನ ನಡೆಸಿ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಕಳುಹಿಸಿಕೊಡಲಾಗುತ್ತಿದೆ.
ಪದವಿ ಪ್ರಥಮ ವರ್ಷದಿಂದಲೇ ಉದ್ಯೋಗ ಕೌಶಲ್ಯ ತರಭೇತಿ ನೀಡಿ ಮಾನಸಿಕವಾಗಿ ದೈಹಿಕವಾಗಿ, ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಸಿದ್ದಪಡಿಸಲಾಗುತ್ತಿದೆ. ಇದರಿಂದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಯಾವುದೇ ಖಾಸಗಿ ಕಾಲೇಜಿಗೆ ಕಡಿಮೆಯಿಲ್ಲದಂತೆ ಉದ್ಯೋಗ ಅರ್ಹತೆ ಪಡೆದು ತಯಾರಾಗುತ್ತಿದ್ದಾರೆ.
ಇದನ್ನೂ ಓದಿ: ದೇಶದ ಮೊದಲ ಎಂಜಿನಿಯರಿಂಗ್ ಕಾಲೇಜು ಯಾವುದು ಗೊತ್ತಾ?
ಒಟ್ಟಿನಲ್ಲಿ ಉತ್ತಮ ಆಡಳಿತ ಮಂಡಳಿ ಇದ್ದು, ಯೋಗ್ಯ ಶಿಕ್ಷಣ ನೀಡಿದರೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಕೂಡ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಬಹುದು ಎಂಬುದಕ್ಕೆ ಈ ಕಾಲೇಜು ಸಾಕ್ಷಿಯಾಗಿದೆ.
Published On - 11:11 am, Sat, 5 July 25