Karnataka Rains: ಮಳೆ ಆರ್ಭಟ, ಅವಧಿಗೂ ಮೊದಲೇ ಡ್ಯಾಂಗಳು ಭರ್ತಿ, ಇಂದು ಕೂಡ ಶಾಲೆಗಳಿಗೆ ರಜೆ
ಕರ್ನಾಟಕದಲ್ಲಿ ಭಾರಿ ಮಳೆಯಿಂದಾಗಿ ಹಲವು ಅಣೆಕಟ್ಟೆಗಳು ತುಂಬಿ ಹರಿಯುತ್ತಿವೆ. ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಕಂಪ್ಲಿ-ಗಂಗಾವತಿ ಸೇತುವೆ ಮುಳುಗಡೆ ಭೀತಿ ಎದುರಾಗಿದೆ. ಉತ್ತರ ಕನ್ನಡದಲ್ಲಿ ಗುಡ್ಡ ಕುಸಿದಿದೆ. ಜೊತೆಗೆ ರಾಜ್ಯದ ಕೆಲವೆಡೆ ಇಂದು ಕೂಡ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಜುಲೈ 05: ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿದೆ (rain). ಪರಿಣಾಮ ಹಲವು ಅಣೆಕಟ್ಟೆಗಳು ವಾಡಿಕೆ ಅವಧಿಗಿಂತ ಮೊದಲೇ ಭರ್ತಿಯಾಗಿವೆ. ನದಿಗಳು ಮೈದುಂಬಿ ಹರಿಯುತ್ತಿವೆ. ಜುಲೈ 10ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಎರಡು ದಿನಗಳ ಕಾಲ ರಾಜ್ಯದಾದ್ಯಂತ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಮುಂಜಾಗ್ರತ ಕ್ರಮವಾಗಿ ಇಂದು ಕೂಡ ಕೆಲ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ (holiday) ನೀಡಲಾಗಿದೆ.
ಎಲ್ಲೆಲ್ಲಿ ರಜೆ?
ಮಳೆ ಅಬ್ಬರ ಮುಂದುವರಿದ ಹಿನ್ನೆಲೆ ಚಿಕ್ಕಮಗಳೂರು, ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಅಂಗನವಾಡಿಗಳಿಗೆ ಇವತ್ತು ರಜೆ ಘೋಷಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ರಿಂದ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ದೂಧ ಸಾಗರ ಬಳಿಯ ಹೆದ್ದಾರಿ ಬಿರುಕು
ಶಿವಮೊಗ್ಗ ಜಿಲ್ಲೆಯ ಹಲವೆಡೆ ಕೂಡ ಮಳೆ ಆರ್ಭಟ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ಸಾಗರ, ಹೊಸನಗರ ತಾಲೂಕಿನ ಶಾಲಾ, ಕಾಲೇಜುಗಳಿಗೆ ಆಯಾ ತಾಲೂಕಿನ ತಹಶೀಲ್ದಾರ್ ರಜೆ ಘೋಷಿಸಿದ್ದಾರೆ.
ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆ ಭೀತಿ
ತುಂಗಭದ್ರಾ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಇದ್ರಿಂದಾಗಿ ನದಿಪಾತ್ರದಲ್ಲಿ ಆತಂಕ ಎದುರಾಗಿದೆ. ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆಯಾಗುವ ಹಂತಕ್ಕೆ ತಲುಪಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ, ಹರಿಹರ ತಾಲೂಕು ವ್ಯಾಪ್ತಿಯಲ್ಲಿ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹರಿಹರೇಶ್ವರ ದೇವಸ್ಥಾನದ ಪಾದ ಗಟ್ಟೆಯ ಗೋಪುರದ ಬಳಿ ನದಿಯ ವೈಭವ ವೀಕ್ಷಣೆಗೆ ಜನ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಟಿಬಿ ಡ್ಯಾಂನಿಂದ ತುಂಗಭದ್ರಾ ನದಿಗೆ 80,000 ಕ್ಯೂಸೆಕ್ಸ್ ನೀರು ಹೊರಹರಿವು, ಮುಳುಗಡೆ ಭೀತಿಯಲ್ಲಿ ಕಂಪ್ಲಿ ಸೇತುವೆ
ಇನ್ನು ಅಬ್ಬರದ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಕದ್ರಾ ಡ್ಯಾಂ ಭರ್ತಿಯಾಗಿದೆ. ಕಾಳಿ ನದಿಗೆ 33 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಭಾರಿ ಮಳೆಗೆ ಕಾರವಾರದ ಕದ್ರಾ ಬಳಿ ಕುಸಿದ ಗುಡ್ಡ
ಭಾರಿ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೊಡಸಳ್ಳಿ-ಕದ್ರಾ ಜಲಾಶಯ ಮಾರ್ಗದಲ್ಲಿ ಗುಡ್ಡ ಕುಸಿದಿದೆ. ಸುಮಾರು 30 ಮೀಟರ್‌ನಷ್ಟು ಮಣ್ಣು, ಮರಗಳು ರಸ್ತೆ ಮೇಲೆ ಬಿದ್ದಿವೆ. ಇಡೀ ರಸ್ತೆ ಸಂಪೂರ್ಣ ಬಂದ್ ಆಗಿದೆ. ಸದ್ಯಕ್ಕೆ ಮಣ್ಣು ತೆರವು ಮಾಡದಂತೆ GSI ತಜ್ಞರು ಎಚ್ಚರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








