ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ದೂಧ ಸಾಗರ ಬಳಿಯ ಹೆದ್ದಾರಿ ಬಿರುಕು
ಕರ್ನಾಟಕ-ಗೋವಾ ಗಡಿಯ ದಾರಬಾಂಡೊರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಮೀಟರ್‌ಗೂ ಹೆಚ್ಚು ಬಿರುಕು ಕಾಣಿಸಿದೆ. ದೂಧ್ ಸಾಗರದ ಬಳಿ ಇರುವ ಈ ಬಿರುಕಿನಿಂದ ಭೂಕುಸಿತದ ಆತಂಕವಿದೆ. ಗೋವಾ ಪೊಲೀಸರು ಸಂಚಾರಕ್ಕೆ ನಿಯಂತ್ರಣ ಹೇರಿದ್ದಾರೆ. ಪಿಡಬ್ಲ್ಯುಡಿ ಕಾಂಕ್ರೀಟ್ ಫಿಲ್ಲಿಂಗ್ ಕಾರ್ಯ ನಡೆಸುತ್ತಿದೆ. ಸಾವಿರಾರು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ, ಹೀಗಾಗಿ ಈ ಸಮಸ್ಯೆಯನ್ನು ಬೇಗನೆ ಪರಿಹರಿಸುವುದು ಅತ್ಯಗತ್ಯ.
ಕಾರವಾರ, ಜುಲೈ 04: ಕರ್ನಾಟಕ-ಗೋವಾ (Karnataka-Goa) ಗಡಿಯಲ್ಲಿ ದಕ್ಷಿಣ ಗೋವಾದ ದಾರಬಾಂಡೊರಾ ತಾಲೂಕು ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ಬಿರುಕು ಬಿಟ್ಟಿದೆ. ದೂಧ್ ಸಾಗರದ ಬಳಿಯ ದೇವಾಲಯದ ಕೆಳಗೆ ಇರುವ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ಸುಮಾರು 50 ಮೀಟರ್‌ನಷ್ಟು ಬಿರುಕು ಬಿಟ್ಟಿದೆ. ಇದರಿಂದ, ಯಾವುದೇ ಕ್ಷಣದಲ್ಲಿ ಈ ಪ್ರದೇಶದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ, ಗೋವಾ ಪೊಲೀಸರು ರಸ್ತೆ ಮಧ್ಯದವರೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಗೋವಾ ಪಿಡಬ್ಲ್ಯುಡಿ ವತಿಯಿಂದ ಬಿರುಕು ಬಿಟ್ಟ ರಸ್ತೆಯ ಮೇಲೆ ಕಾಂಕ್ರೀಟ್ ಫಿಲ್ಲಿಂಗ್ ಅಳವಡಿಸಲಾಗುತ್ತಿದೆ. ಕಾಂಕ್ರೀಟ್ ಹಾಕಿದ ಬಳಿಕ ಬ್ಯಾರಿಕೇಡ್, ಪ್ಲಾಸ್ಟಿಕ್ ಕಂಬ ಹಾಗೂ ಟೇಪ್ ಅಳವಡಿಸಿ ಒಂದು ಬದಿಯಿಂದ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಗೋವಾದಿಂದ ಕರ್ನಾಟಕಕ್ಕೆ ದಿನಕ್ಕೆ ಸಾವಿರಾರು ಲಘು ಹಾಗೂ ಘನ ವಾಹನಗಳು ಇಲ್ಲಿ ಸಂಚರಿಸುತ್ತವೆ. ಒಂದು ವೇಳೆ ಈ ಭಾಗದಲ್ಲಿ ಕುಸಿತವಾದರೇ ಅರ್ಧ ಹೆದ್ದಾರಿ ಪ್ರಪಾತಕ್ಕೆ ಉರುಳುವ ಸಾಧ್ಯತೆ ಇದೆ.