ಕೊಲೆ ಮಾಡಿದ್ದೂ ಅವನೇ, ಪೊಲೀಸರಿಗೆ ಹೇಳಿದ್ದೂ ಅವನೇ! ಆ ರಾತ್ರಿ ತೋಟದ ಮನೆಯಲ್ಲಿ ನಡೆದಿದ್ದೇನು ಗೊತ್ತಾ?

ಬಾಗಲಕೋಟೆಯ ಜಮಖಂಡಿ ತಾಲ್ಲೂಕಿನ ಹಿರೆಪಡಸಲಗಿಯಲ್ಲಿ ಅನೈತಿಕ ಸಂಬಂಧದಿಂದ ಮಹಿಳೆ ಕೊಲೆಯಾಗಿದ್ದಾರೆ. 67 ವರ್ಷದ ಪ್ರಿಯಕರ, ಮಹಿಳೆ ಮತ್ತೊಬ್ಬರೊಂದಿಗೆ ಸಂಬಂಧ ಹೊಂದಿದ್ದಾಳೆಂಬ ವಿಚಾರಕ್ಕೆ ಆಕ್ರೋಶಗೊಂಡು ಜಗಳವಾಡಿ ಕೊಲೆ ಮಾಡಿದ್ದಾನೆ. ಘಟನೆ ನಂತರ ಕೊಲೆಯಾದ ಮಹಿಳೆಯ ಶವದ ಮುಂದೆ ಮೊಸಳೆ ಕಣ್ಣೀರು ಸುರಿಸಿ ಹೈಡ್ರಾಮಾ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ವೇಳೆ ಘಟನೆಯ ಕುರಿತ ಸತ್ಯ ಹೊರಬಂದಿದೆ.

ಕೊಲೆ ಮಾಡಿದ್ದೂ ಅವನೇ, ಪೊಲೀಸರಿಗೆ ಹೇಳಿದ್ದೂ ಅವನೇ! ಆ ರಾತ್ರಿ ತೋಟದ ಮನೆಯಲ್ಲಿ ನಡೆದಿದ್ದೇನು ಗೊತ್ತಾ?
ಕೊಲೆ ಮಾಡಿದ್ದೂ ಅವನೇ, ಪೊಲೀಸರಿಗೆ ಹೇಳಿದ್ದೂ ಅವನೇ!
Edited By:

Updated on: Jan 17, 2026 | 12:58 PM

ಬಾಗಲಕೋಟೆ,ಜನವರಿ 17: ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಪ್ರಿಯಕರನೇ ಮಹಿಳೆಯನ್ನು ಕೊಂದ ಘಟನೆ ಜನವರಿ 14ರ ರಾತ್ರಿ ಬಾಗಲಕೋಟೆಯ (Bagalakot) ಜಮಖಂಡಿ ತಾಲ್ಲೂಕಿನ ಹಿರೆಪಡಸಲಗಿ ಗ್ರಾಮದಲ್ಲಿ ನಡೆದಿದೆ. ತೋಟದ ಮನೆಯಲ್ಲಿ ಒಂಟಿ ಮಹಿಳೆಯೊಬ್ಬರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಾನೇ ಕೊಲೆ ಮಾಡಿದ್ದರೂ ಶವದ ಮುಂದೆ ಕಣ್ಣೀರು ಹಾಕಿ ಪ್ರಿಯಕರ ಹೈ ಡ್ರಾಮಾ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಆತ ಸತ್ಯ ಬಿಚ್ಚಿಟ್ಟಿದ್ದಾನೆ.

ಮೂರನೆ ವ್ಯಕ್ತಿಗಾಗಿ ನಡೀತಾ ಕೊಲೆ?

ಕೊಲೆಯಾದ ಮಹಿಳೆಯನ್ನು ಯಮನವ್ವ (40)ಎಂದು ಗುರುತಿಸಲಾಗಿದ್ದು, ಆರೋಪಿಯ ಹೆಸರು ಶ್ರೀಶೈಲ ಪಾಟೀಲ್ (67) ಎಂದು ಪೊಲೀಸರು ತಿಳಿಸಿದ್ದಾರೆ. ಯಮನವ್ವ ಸುಮಾರು 20 ವರ್ಷಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದಿದ್ದು, ಬಳಿಕ ಶ್ರೀಶೈಲ ಪಾಟೀಲ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಹೀಗಿರುವಾಗ ಇತ್ತೀಚೆಗೆ ಯಮನವ್ವ 27 ವರ್ಷದ ಯುವಕನೊಂದಿಗೆ ಸಂಪರ್ಕ ಹೊಂದಿದ್ದಾಳೆ ಎಂಬ ವಿಚಾರದಿಂದ ಶ್ರೀಶೈಲ  ಆಕ್ರೋಶಗೊಂಡಿದ್ದನು. ಇದೇ ವಿಷಯಕ್ಕೆ ರಾತ್ರಿ ಇಬ್ಬರ ನಡುವೆ ಆರಂಭವಾಗಿದ್ದ ಜಗಳ ತೀವ್ರ ಸ್ವರೂಪ ಪಡೆದಿತ್ತು.

ಕತ್ತು ಹಿಸುಕಿ ಕೊಂದು, ಶವದ ಮುಂದೆ ಕಣ್ಣೀರಿಟ್ಟ!

ಜಗಳದ ವೇಳೆ ಶ್ರೀಶೈಲ ಪಾಟಿಲ್ ಯಮನವ್ವಳ ಕಿವಿ ಭಾಗಕ್ಕೆ ಬಲವಾಗಿ ಹೊಡೆದಿದ್ದ. ಅಷ್ಟಕ್ಕೆ ಸುಮ್ಮನಾಗದ ಪ್ರಿಯಕರ, ಕತ್ತು ಹಿಸುಕಿ ಕೊಲೆಯೂ ಮಾಡಿದ್ದ. ಮಹಿಳೆಯ ಉಸಿರು ನಿಂತ ಮೇಲೆ ಭಯಕ್ಕೆ ಸ್ಥಳದಿಂದ ಕಾಲ್ಕಿತ್ತಿದ್ದ ಎಂದು ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.

ಇದನ್ನೂ ಓದಿ ಮಾರಿ ಹಬ್ಬಕ್ಕೆಂದು ಹೋದಾತ ಸಿಕ್ಕಿದ್ದು ಹೆಣವಾಗಿ: ಬರ್ಬರವಾಗಿ ಕೊಂದು ಶವ ಸುಟ್ಟರಾ ದುಷ್ಟರು?

ಮರುದಿನ ಬೆಳಿಗ್ಗೆ ಆತನೇ ಮನೆಯ ಬಾಗಿಲು ತೆರೆದು ಯಮನವ್ವ ಸಾವನ್ನಪ್ಪಿದ್ದಾಳೆ ಎಂದು ಇತರರಿಗೆ ಸುದ್ದಿ ತಿಳಿಸಿದ್ದ. ಆಕೆಗೆ ಹೃದಯಾಘಾತವಾಗಿದೆ ಎಂಬಂತೆ ನಾಟಕವಾಡಿ ಕಣ್ಣೀರು ಹಾಕಿದ್ದ ಆರೋಪಿ, ಬಳಿಕ ಸಾವಳಗಿ ಪೊಲೀಸರಿಗೂ ತಾನೇ ಮಾಹಿತಿ ನೀಡಿದ್ದ. ಆದರೆ ವಿಚಾರಣೆಯ ವೇಳೆ ಆರೋಪಿಯ ಮೊಸಳೆ ಕಣ್ಣೀರು ಬಯಲಾಗಿದ್ದು, ಸತ್ಯ ಒಪ್ಪಿಕೊಂಡಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:51 pm, Sat, 17 January 26