ಹಗಲಲ್ಲಿ ಕಬ್ಬು ಕಟಾವು, ರಾತ್ರಿ ವೇಳೆ ಮನೆ ಕಳ್ಳತನ: ಖತರ್ನಾಕ್​ ಗ್ಯಾಂಗ್​​ ಭೇದಿಸಿದ ಖಾಕಿ

ಹಗಲು ಕಬ್ಬು ಕಟಾವು ಮಾಡಿ, ರಾತ್ರಿ ಮನೆ ಕಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಐವರು ಖತರ್ನಾಕ್ ಗ್ಯಾಂಗ್ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಗುಳೇದಗುಡ್ಡ ಪೊಲೀಸರ ಯಶಸ್ವಿ ಕಾರ್ಯಾಚರಣೆಯಲ್ಲಿ 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಈ ಕಳ್ಳರು ಹಗಲು ಹೊತ್ತು ಸ್ಥಳ ಪರಿಶೀಲಿಸಿ, ರಾತ್ರಿ ಮನೆ ದರೋಡೆಗೆ ಇಳಿಯುತ್ತಿದ್ದರು ಎಂಬುದು ಬಯಲಾಗಿದೆ.

ಹಗಲಲ್ಲಿ ಕಬ್ಬು ಕಟಾವು, ರಾತ್ರಿ ವೇಳೆ ಮನೆ ಕಳ್ಳತನ: ಖತರ್ನಾಕ್​ ಗ್ಯಾಂಗ್​​ ಭೇದಿಸಿದ ಖಾಕಿ
ಆರೋಪಿಗಳು ವಾಸವಿದ್ದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ.
Edited By:

Updated on: Jan 25, 2026 | 8:36 PM

ಬಾಗಲಕೋಟೆ, ಜನವರಿ 25: ಕಬ್ಬು ಕಟಾವು ಮಾಡುವ ನೆಪದಲ್ಲಿ ಜಿಲ್ಲೆಗೆ ಎಂಟ್ರಿಕೊಟ್ಟು ಮನೆಗಳಲ್ಲಿ ಕಳ್ಳತನ ನಡೆಸುತ್ತಿದ್ದ ಮಹಾರಾಷ್ಟ್ರ ಮೂಲದ ಗ್ಯಾಂಗ್​​ನ ಬಾಗಲಕೋಟೆ ಪೊಲೀಸರು ಭೇದಿಸಿದ್ದಾರೆ. ಶಂಕರ್ ಪವಾರ್ (20), ಅಭಿ ಬೋಸ್ಲೆ(19), ಲಕ್ಷ್ಮೀ ಬೋಸ್ಲೆ (40), ಕರಣ ಪವಾರ್ (20) ಮತ್ತು ಮಮತಾ ಬೋಸ್ಲೆ(21) ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲ ಮಹಾರಾಷ್ಟದ ಪರಬಾನಿ ಜಿಲ್ಲೆ ಮಂಗರೂಲ ತಾಂಡಾದ ನಿವಾಸಿಗಳು ಎಂಬುದು ಗೊತ್ತಾಗಿದೆ.

ಕಬ್ಬು ಕಟಾವು ಕೆಲಸ ಮಾಡುವ ನೆಪದಲ್ಲಿ ಬಾಗಲಕೋಟೆಗೆ ಬಂದಿದ್ದ ಈ ತಂಡ ಹಗಲು ವೇಳೆ ಹೊಲದಲ್ಲಿ ಕೆಲಸ ಮಾಡಿದರೆ, ರಾತ್ರಿ ಕಳ್ಳತನಕ್ಕೆ ಇಳಿಯುತ್ತಿತ್ತು. ಜಾಕೆಟ್ ಮತ್ತು ಮಾಸ್ಕ್​​ ಹಾಕಿಕೊಂಡು ಕೈನಲ್ಲಿ ಬ್ಯಾಟರಿ, ರಾಡ್ ಹಿಡಿದು ಮನೆಗಳ್ಳತನ ಕೆಲಸ ಮಾಡ್ತಿತ್ತು. ಆರೋಪಿಗಳು ಕಳವು ಮಾಡುವ ದೃಶ್ಯಗಳು ಕೂಡ ಲಭ್ಯವಾಗಿದ್ದು, ಖತರ್ನಾಕ್​​ ಗ್ಯಾಂಗ್​​ನ ಹೆಡೆಮುರಿ ಕಟ್ಟುವಲ್ಲಿ ಗುಳೇದಗುಡ್ಡ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 6 ಲಕ್ಷದ 8 ಸಾವಿರ ಮೌಲ್ಯದ 25 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ಪಿಯುಸಿ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸಪ್ಪ ಅರೆಸ್ಟ್​​

ಪಕ್ಕಾ ಪ್ಲ್ಯಾನ್​​ ಮಾಡಿ ಕಳ್ಳತನ

ಈ ಖತರ್ನಾಕ್ ಕಳ್ಳರು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ಬಾದಾಮಿ, ಗದಗ ಜಿಲ್ಲೆ ಸೇರಿ ಒಟ್ಟು ಆರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಗುಳೇದಗುಡ್ಡ ಪಟ್ಟಣ, ಗುಳೇದಗುಡ್ಡ ತಾಲೂಕಿನ ಬೂದಿನಗಡ, ಹಂಸನೂರು, ಬಾದಾಮಿ ತಾಲೂಕಿನ ಮುಮರೆಡ್ಡಿಕೊಪ್ಪ, ಮುತ್ತಲಗೇರಿಯಲ್ಲಿ‌ ಕೈಚಳಕ ತೋರಿಸಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ. ಇನ್ನು ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಹಡಗಲಿ ಗ್ರಾಮದಲ್ಲಿಯೂ ಇವರು ಮನೆ ಕಳ್ಳತನಕ್ಕೆ ಯತ್ನಿಸಿದ್ದರು. ಆ ದೃಶ್ಯ ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪುರುಷರು ರಾತ್ರಿ ಕಳ್ಳತನ ಮಾಡಿ ಚಿನ್ನಾಭರಣ ತಂದ್ರೆ ಮಹಿಳೆಯರು ಅವುಗಳನ್ನು ಮರಾಟ ಮಾಡಿ ಹಣ ತರ್ತಿದ್ದರು. ಕಬ್ಬು ಕಟಾವು ಮಾಡುವ ಸ್ಥಳದ ಸುತ್ತಮುತ್ತಲಿನ ಊರು ತಿರುಗಾಡಿ ಯಾವ ಮನೆ ಕಳ್ಳತನ ಮಾಡಬೇಕು? ಹೇಗೆ? ಎಂದೆಲ್ಲ ಸ್ಕೆಚ್ ಹಾಕಿ ರಾತ್ರಿ ಎಂಟ್ರಿ ಕೊಡ್ತಿದ್ದರು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.