ಮಹಾರಾಷ್ಟ್ರ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆ: ಬಿಜೆಪಿ ನೇತೃತ್ವದ ಮಹಾಯುತಿಗೆ ಅಮೋಘ ಮುನ್ನಡೆ
Maharashtra urban local bodies election results 2025: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ್ದ ಬಿಜೆಪಿ ನೇತೃತ್ವದ ಮಹಾಯುತಿ ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಗೆಲುವು ಪಡೆಯುತ್ತಿದೆ. ಒಟ್ಟು 288 ಸ್ಥಳೀಯ ಸಂಸ್ಥೆಗಳಲ್ಲಿ 214ಯಲ್ಲಿ ಮಹಾಯುತಿ ಮುನ್ನಡೆ ಪಡೆದಿದೆ. 6,859 ಕ್ಷೇತ್ರಗಳಲ್ಲಿ ಮಹಾಯುತಿಗೆ ಹತ್ತಿರಹತ್ತಿರ 4,000 ಕ್ಷೇತ್ರಗಳಲ್ಲಿ ಮುನ್ನಡೆ ಸಿಕ್ಕಿದೆ.

ಮುಂಬೈ, ಡಿಸೆಂಬರ್ 21: ಮಹಾರಾಷ್ಟ್ರದ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಪಡೆದಿದೆ. ಒಟ್ಟು 246 ನಗರ ಪಾಲಿಕೆ ಹಾಗೂ 42 ನಗರ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ (Maharashtra Urban Local Bodies Elections) ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿವೆ. ಮಹಾಯುತಿ ಮೈತ್ರಿಕೂಟ (Mahayuti) 214 ಸ್ಥಳೀಯ ಸಂಸ್ಥೆಗಳಲ್ಲಿ ಮುನ್ನಡೆ ಹೊಂದಿದೆ. ವಿಪಕ್ಷಗಳ ಕೂಟವಾದ ಮಹಾ ವಿಕಾಸ್ ಆಘಾಡಿ (MVA) ಮುನ್ನಡೆ ಹೊಂದಿರುವುದು ಕೇವಲ 52 ಸ್ಥಳೀಯ ಸಂಸ್ಥೆಗಳಲ್ಲಿ.
ವಿವಿಧ ನಗರ ಸಂಸ್ಥೆಗಳಲ್ಲಿನ 6,859 ಕ್ಷೇತ್ರಗಳಿಗೆ ಡಿಸೆಂಬರ್ 2 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಇವತ್ತು ಮತ ಎಣಿಕೆ ನಡೆಯುತ್ತಿದ್ದು ಆರಂಭದಿಂದಲೂ ಬಿಜೆಪಿ ನೇತೃತ್ವದ ಮೈತ್ರಿಕೂಟ ಹೆಚ್ಚು ಮುನ್ನಡೆ ಕಾಯ್ದುಕೊಂಡಿದೆ. 6,859 ಸ್ಥಾನಗಳ ಪೈಕಿ 3,120 ಕ್ಷೇತ್ರಗಳಲ್ಲಿ ಬಿಜೆಪಿಯೊಂದೇ ಮುನ್ನಡೆಯಲ್ಲಿದೆ. ಅದರ ಮಿತ್ರ ಪಕ್ಷಗಳಾದ ಶಿವಸೇನೆ ಮತ್ತು ಎನ್ಸಿಪಿ ಕ್ರಮವಾಗಿ 600 ಮತ್ತು 200 ಸ್ಥಾನಗಳಲ್ಲಿ ಮುನ್ನಡೆ ಹೊಂದಿವೆ. ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮಹಾಯುತಿ ಮೇಲುಗೈ ಸಾಧಿಸಿದೆ.
ಇದನ್ನೂ ಓದಿ: ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ ಹೆಚ್ಚಳ; ಡಿ. 26ರಿಂದ ಹೊಸ ದರ ಜಾರಿ
ಇನ್ನು, ವಿಪಕ್ಷಗಳಾದ ಶಿವಸೇನಾ (ಉದ್ಭವ್ ಠಾಕ್ರೆ ಬಣ), ಕಾಂಗ್ರೆಸ್ ಹಾಗೂ ಎನ್ಸಿಪಿ (ಶರದ್ ಪವಾರ್ ಬಣ) ಕ್ರಮವಾಗಿ 145, 105 ಮತ್ತು 122 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾಗಿವೆ.
2024ರ ವಿಧಾನಸಭೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಮಹಾಯುತಿಯ ಸರ್ಕಾರವು ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದಕ್ಕೆ ಈ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರಲ್ಲ: FSSAI ಸ್ಪಷ್ಟನೆ
ಆದರೆ, ಮಹಾರಾಷ್ಟ್ರ ರಾಜ್ಯದಲ್ಲಿ ಕೃಷಿ ಕ್ಷೇತ್ರದಲ್ಲಿ ಬಿಕ್ಕಟ್ಟು ಉದ್ಭವಿಸಿದೆ ಎಂಬುದು, ಹಾಗೂ ಮಹಿಳೆಯರು ಮತ್ತು ರೈತರ ಕಲ್ಯಾಣ ಯೋಜನೆಗಳಿಗೆ ಸರ್ಕಾರದಿಂದ ಸರಿಯಾದ ರೀತಿಯಲ್ಲಿ ಸಹಾಯ ಧನ ಬಿಡುಗಡೆ ಆಗುತ್ತಿಲ್ಲ ಎನ್ನುವ ಆರೋಪಗಳು ಸರ್ಕಾರದ ಜನಪ್ರಿಯತೆಯನ್ನು ಕುಂದಿಸಿರಬಹುದು ಎನ್ನುವ ಭಾವನೆ ಇತ್ತು. ವಿಪಕ್ಷಗಳು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದವು. ಹೀಗಾಗಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಹಾ ವಿಕಾಸ್ ಆಘಾಡಿ ಪೂರಕ ಗೆಲುವನ್ನು ನಿರೀಕ್ಷಿಸಿತ್ತು. ಆದರೆ, ಈ ನಿರೀಕ್ಷೆ ಈಡೇರಿಲ್ಲ. ಮತದಾರರು ಮತ್ತೊಮ್ಮೆ ಮಯಾಯುತಿ ಕೈಹಿಡಿದಿರುವಂತೆ ಫಲಿತಾಂಶದ ಟ್ರೆಂಡ್ ಇದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




