
ಬಾಗಲಕೋಟೆ, ನವೆಂಬರ್ 16: ರೈತರು ಕಬ್ಬಿಗೆ ಯೋಗ್ಯ ಬೆಲೆಗಾಗಿ ನಿರಂತರ ಹದಿನೈದು ದಿನ ಪ್ರತಿಭಟನೆ (Farmers’ Protest) ಮಾಡಿದ್ದರು. ಆದರೆ ನವೆಂಬರ್ 13 ರಂದು ಪ್ರತಿಭಟನಾನಿರತರು ಗೋದಾವರಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಈ ವೇಳೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಇಡಲಾಗಿತ್ತು. ಅಷ್ಟೇ ಅಲ್ಲದೆ ಕಲ್ಲು ತೂರಾಟ ಕೂಡ ನಡೆದಿತ್ತು. ಸದ್ಯ ಈ ಎಲ್ಲಾ ಪ್ರಕರಣಕ್ಕೆ ಸಂಬಧಿಸಿದಂತೆ ಒಟ್ಟು ಮೂರು ಪ್ರತ್ಯೇಕ ಎಫ್‌ಐಆರ್ (FIR) ದಾಖಲಾಗಿವೆ.
ಮುಧೋಳ ಈ ವರ್ಷ ಕಬ್ಬಿಗೆ ಯೋಗ್ಯ ಬೆಲೆ ಹೋರಾಟದಿಂದ ರಾಜ್ಯದ ಗಮನ ಸೆಳೆದ ನಗರ. ನಿರಂತರ ಹದಿನೈದು ದಿನಗಳ ಕಾಲ ನಡೆದ ಹೋರಾಟ ನವೆಂಬರ್ 13 ರಂದು ವಿಕೋಪಕ್ಕೆ ತಿರುಗಿತ್ತು. ಮುಧೋಳ ನಗರದಲ್ಲಿ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ಮಾಡಿದ ರೈತರು ಸಂಜೆ ಗೋದಾವರಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಲು ಹೊರಟಿದ್ದರು. ಈ ವೇಳೆ ನಡೆಯಬಾರದ ಘಟನೆ ನಡೆದು ಹೋಗಿತ್ತು. ಉದ್ರಿಕ್ತರು ಸಂಗಾನಟ್ಟಿ ಬಳಿ ಎರಡು ಟ್ರೇಲರ್ನ ಟ್ರ್ಯಾಕ್ಟರ್ ತಳ್ಳಿ ಬೆಂಕಿ ಹಚ್ಚಿದ್ದರು. ನಂತರ ಗೋದಾವರಿ ಕಾರ್ಖಾನೆ ಆವರಣದಲ್ಲಿನ 20ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಐದು ಬೈಕ್ ಬೆಂಕಿಗಾಹುತಿಯಾಗಿದ್ದವು.
ಇದನ್ನೂ ಓದಿ: ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣ; 10 ಜನ ಪೊಲೀಸರ ವಶಕ್ಕೆ
ಇನ್ನು ಘಟನೆ ವೇಳೆ ಕಲ್ಲು ತೂರಾಟ ನಡೆದಿತ್ತು. ಇದೇ ವೇಳೆ ಎಎಸ್ಪಿ ಮಹಾಂತೇಶ್ವರ ಜಿದ್ದಿ ಅವರ ಕಾಲು ಮುರಿದಿತ್ತು. ಈ ಹಿನ್ನೆಲೆ ಘಟನೆಗೆ ಸಂಬಂಧಿಸಿದಂತೆ ಮಹಾಲಿಂಗಪುರ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ. ಅದರಲ್ಲೂ ಕಾರ್ಖಾನೆ ಪರ ಬಂದ ಐವರ ವಿರುದ್ಧ ಪೊಲೀಸ್ ಅಧಿಕಾರಿಗಳ ಕೊಲೆ ಯತ್ನ ಎಂದು ಎಫ್‌ಐಆರ್ ದಾಖಲಾಗಿದೆ.
ಹಾಗಾದರೆ ದಾಖಲಾಗಿರುವ ಎಫ್‌ಐಆರ್ 1ರಲ್ಲಿ ಏನಿದೆ ಅಂತ ನೋಡುವುದಾದರೆ, ಸಮೀರವಾಡಿ ಕಾರ್ಖಾನೆ ಪರವಾಗಿ ಬಂದಿದ್ದ 5 ಜನರು ಪೊಲೀಸ್ ಅಧಿಕಾರಿಗಳ ಕೊಲೆಗೆ ಯತ್ನಿಸಿರುವುದಾಗಿ ಮಹಾಲಿಂಗಪುರ ಪಿಎಸ್ಐ ಕಿರಣ ಸತ್ತಿಗೇರಿ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಕರ್ತವ್ಯನಿರತ ಎಎಸ್ಪಿ ಮಹಾಂತೇಶ್ವರ ಜಿದ್ದಿ, ಬನಹಟ್ಟಿ ಸಿಪಿಐ ಹೆಚ್ ಆರ್ ಪಾಟಿಲ್, ತೇರದಾಳ ಪಿಎಸ್ ಶಿವಾನಂದ ಸಿಂಗನ್ನವರ ಕರ್ತವ್ಯ ನಿರ್ವಹಣೆ ವೇಳೆ ತಳ್ಳಾಟ, ನೂಕಾಟ ಮಾಡಿ ಕಲ್ಲು ತೂರಾಟ ನಡೆಸಿ, ಕೊಲೆ ಮಾಡಲು ಯತ್ನಿಸಿದ್ದಾಗಿ ಪ್ರಭು ತಂಬೂರಿ, ಯಂಕಪ್ಪ ಕೇದಾರಿ, ವಿಠಲ ಹೊಸಮನಿ, ದಸ್ತಗಿರಿ ಸಾಬ್ ನದಾಫ್, ಶಿವಲಿಂಗ ಶಿಂಧೆ ಸೇರಿದಂತೆ 150 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾರ್ಖಾನೆ ಬೆಂಬಲಕ್ಕೆ ಬಂದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕಲ್ಲು ತೂರಾಟ, ಪೊಲೀಸರಿಗೆ ಗಾಯ, ಪೊಲೀಸ್ ವಾಹನ ಜಖಂಗೊಳಿಸಿದ ಆರೋಪ ಹಿನ್ನೆಲೆ ಕಾರ್ಖಾನೆ ಪರವಾಗಿದ್ದ ಗುಂಪಿನ 5 ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.
ಎಫ್‌ಐಆರ್ 2ರಲ್ಲಿ ಹೋರಾಟದ ಮುಂದಾಳತ್ವ ವಹಿಸಿದ್ದ ರೈತರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಸುಭಾಷ್ ಶಿರಬೂರ, ಈರಪ್ಪ ಹಂಚಿನಾಳ, ಮುತ್ತಪ್ಪ ಕೋಮಾರ, ಹನುಮಂತ ಗೌಡ ಪಾಟಿಲ್, ದುಂಡಪ್ಪ ಯರಗಟ್ಟಿ, ಬಸಪ್ಪ ಸಂಗಣ್ಣವರ, ಸುರೇಶ್ ಚಿಂಚಲಿ, ಸದಾಶಿವ ಸಕರೆಡ್ಡಿ, ರಾಚಪ್ಪ ಕಲ್ಲೊಳ್ಳಿ, ಗಂಗಾಧರ ಮೇಟಿ, ಮಹೇಶ್ ಗೌಡ ಪಾಟಿಲ್, ಹನುಮಂತ ನಬಾಬ್ ಸೇರಿದಂತೆ ಸೇರಿದಂತೆ 17 ಜನರ ವಿರುದ್ಧ ತೇರದಾಳ ಪಿಎಸ್ಐ ಶಿವಾನಂದ ಸಿಂಗನ್ನವರ ದೂರಿನ ಮೇರೆಗೆ ಸಾರ್ವಜನಿಕ ಆಸ್ತಿ ಹಾನಿಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ಎಫ್‌ಐಆರ್ 3 ಪ್ರಕಾರ ಕಾರ್ಖಾನೆ ಸಿಬ್ಬಂದಿಯಿಂದ ಒಂದು ಎಫ್‌ಐಆರ್ ಆಗಿದೆ. 100 ರಿಂದ150 ಅಪರಿಚಿತರ ವಿರುದ್ಧ ಕಾರ್ಖಾನೆ ಸಿಬ್ಬಂದಿ ಮಲ್ಲಿಕಾರ್ಜುನ ಗುಗ್ಗರಿ ಎಂಬುವರಿಂದ ಎಫ್‌ಐಆರ್ ದಾಖಲಿಸಲಾಗಿದೆ. ಬಿಎನ್ ಎಸ್ 189(2),191(2),191(3),324(4),324(5),190 ಕಾರ್ಖಾನೆ ಆವರಣದೊಳಗೆ ನುಗ್ಗಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ ಬೈಕ್ಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ಮಾಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಮುಧೋಳದಲ್ಲಿ ರೈತರ ಹೋರಾಟ ಸುಖಾಂತ್ಯ: ರಿಕವರಿ ಪರಿಗಣಿಸದೆ ಟನ್ ಕಬ್ಬಿಗೆ 3300 ರೂ. ದರಕ್ಕೆ ಒಪ್ಪಿಗೆ
ಕಿಡಿಗೇಡಿಗಳ ಕೃತ್ಯ ಎಂದು ಸಕ್ಕರೆ ಸಚಿವರು, ಬಾಗಲಕೋಟೆ ಉಸ್ತುವಾರಿ ಸಚಿವರು ಹೇಳಿದ್ದಾರೆ. ಹಾಗಾದರೆ ರೈತ ಮುಖಂಡರ ಮೇಲೆ ಏಕೆ ಎಫ್‌ಐಆರ್ ಮಾಡಿದರು. ರೈತರು ಕಿಡಿಗೇಡಿಗಳಾ ಎಂದು ರೈತರು ಗರಂ ಆಗಿದ್ದಾರೆ. ಕೇಸ್ ಹಿನ್ನೆಲೆ ಮುಧೋಳ ಜಿಎಪ್ ಬಿಸಿಐಬಿಯಲ್ಲಿ ಸಭೆ ಮಾಡಿದ ರೈತರು, ಆರೋಪ ತಳ್ಳಿ ಹಾಕಿದ್ದಾರೆ.
ಈ ವೇಳೆ ಮಾತಾಡಿದ ರೈತ ಮುಖಂಡ ಬಸವಂತಪ್ಪ ಕಾಂಬಳೆ, ಈಗಾಗಲೇ 11 ಜನರನ್ನ ಅರೆಸ್ಟ್ ಮಾಡಿದ್ದಾರೆ. ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು. ಮುಧೋಳ ಕಬ್ಬು ಹೋರಾಟ ಇಡೀ ರಾಜ್ಯಕ್ಕೆ ಮಾದರಿ ಹೋರಾಟದ ಉದಾಹರಣೆ ಇದೆ. ಮುಧೋಳ ಹೋರಾಟ ಪ್ರಾರಂಭವಾದರೆ ರಾಜಕಾರಣಿಗಳಿಗೆ ಜ್ವರ ಬರುತ್ತೆ. ಆ ದೃಷ್ಟಿಯಿಂದ ರಾಜಕಾರಣಿಗಳ ತಂತ್ರಗಾರಿಕೆ ಇರಬಹುದು. ಕಾರ್ಖಾನೆ ಮಾಲೀಕರು ಬಹಳಷ್ಟು ಹಿಂಸೆ ಮಾಡಿದ್ದಾರೆ. ಜನ ಒಪ್ಪುವುದಿಲ್ಲ. ಕಲ್ಲು ಹೊಡೆಯುವರು ನಾವಲ್ಲ, ಬೆಂಕಿ ಹಚ್ಚುವವರು ನಾವಲ್ಲ. ರೈತರಿಗೆ ನ್ಯಾಯ ಕೊಡಿಸುವ ಹೋರಾಟ ಇದು. ಸಚಿವರು ಜಿಲ್ಲಾಡಳಿತದೊಂದಿಗೆ ಸಂಧಾನ ಮಾಡಿ ಬಗೆಹರಿಸಿದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ ರೈತರ ಹೋರಾಟ ವಿಕೋಪಕ್ಕೆ ತಿರುಗಿ ಎಫ್‌ಐಆರ್ ದಾಖಲಾಗುವ ಹಂತಕ್ಕೆ ಬಂದಿದೆ. ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಮುಂದೆ ರೈತರು ಯಾವ ಹೆಜ್ಜೆ ಇಡಲಿದ್ದಾರೆ ಎಂಬುದು ಸದ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.