ಡಿಪಾಜಿಟ್​ ಇಟ್ಟಿದ್ದ 1.5 ಕೋಟಿ ರೂ ಎಗರಿಸಿದ ಬ್ಯಾಂಕ್ ಅಧ್ಯಕ್ಷ: ನ್ಯಾಯಕ್ಕಾಗಿ ಎಸ್​ಪಿ ಕಚೇರಿ ಮೆಟ್ಟಿಲೇರಿದ ಜನರು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 24, 2023 | 8:52 PM

ಬ್ಯಾಂಕ್​ನಲ್ಲಿ ಡಿಪಾಜಿಟ್​ ಇಟ್ಟಿದ್ದ ಒಂದುವರೆ ಕೋಟಿ ರೂ. ಅನ್ನು ಬ್ಯಾಂಕ್ ಅಧ್ಯಕ್ಷ ವಂಚನೆ ಮಾಡಿರುವಂತಹ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ವಿಪರ್ಯಾಸ ಅಂದರೆ ಆತನ ಮೇಲೆ ದೂರು ದೂಖಲಾಗಿ ಕೋರ್ಟ್​ ವಾರೆಂಟ್ ಬಂದರೂ ಇಂದಿಗೂ ಪೊಲೀಸರು ಬಂಧಿಸಿಲ್ಲ. ಇದರಿಂದ ಮೋಸ ಹೋದವರು ಎಸ್​.ಪಿ. ಮೊರೆಹೋಗಿದ್ದಾರೆ.​

ಡಿಪಾಜಿಟ್​ ಇಟ್ಟಿದ್ದ 1.5 ಕೋಟಿ ರೂ ಎಗರಿಸಿದ ಬ್ಯಾಂಕ್ ಅಧ್ಯಕ್ಷ: ನ್ಯಾಯಕ್ಕಾಗಿ ಎಸ್​ಪಿ ಕಚೇರಿ ಮೆಟ್ಟಿಲೇರಿದ ಜನರು
ಎಸ್ ಪಿ ಕಚೇರಿ
Follow us on

ಬಾಗಲಕೋಟೆ, ಆಗಸ್ಟ್​ 24: ಅವರು ಸಣ್ಣ ಪುಟ್ಟ ಕೆಲಸ ಮಾಡುವವರು. ಕೂಲಿ ನಾಲಿ ಮಾಡಿ ಬಂದ ಅಲ್ಪ ಹಣದಲ್ಲೇ ಭವಿಷ್ಯಕ್ಕಾಗಿ ಹಣ ಕೂಡಿಡುವಂತವರು. ಇನ್ನು ಕೆಲವರು ಕೆಲಸ ಇಲ್ಲದ ಕಾರಣ ಅದೊಂದು ಬ್ಯಾಂಕ್​ನಲ್ಲಿ ತಾವೇ ಡಿಪಾಜಿಟ್ ಇಟ್ಟು ಕೆಲಸಕ್ಕೆ ಸೇರಿದವರು. ಆದರೆ ಇಲ್ಲಿ ಈ ಎರಡು ವರ್ಗದ ಜನರನ್ನು
ಬ್ಯಾಂಕ್ ಅಧ್ಯಕ್ಷ ಮರಳು ಮಾಡಿ ವಂಚನೆ (Cheating) ಮಾಡಿದ್ದಾನೆ. ಬ್ಯಾಂಕ್​ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಡಿಪಾಜಿಟ್ ಇಟ್ಟವರು ಸೇರಿ ತಿರುಪತಿ ನಾಮ ಹಾಕಿ ಎಸ್ಕೇಪ್ ಆಗಿದ್ದಾನೆ. ವಿಪರ್ಯಾಸ ಅಂದರೆ ಆತನ ಮೇಲೆ ದೂರು ದೂಖಲಾಗಿ ಕೋರ್ಟ್​ ವಾರೆಂಟ್ ಬಂದರೂ ಇಂದಿಗೂ ಆತನನ್ನು ಪೊಲೀಸರು ಬಂಧಿಸಿಲ್ಲ. ಇದರಿಂದ ಮೋಸ ಹೋದವರು ಎಸ್​. ಪಿ. ಮೊರೆಹೋಗಿದ್ದಾರೆ.

ಎಲ್ಲಿವರೆಗೂ ಮೋಸ ಹೋಗುವವರು ಇರುತ್ತಾರೋ ಅಲ್ಲಿವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಮಾತಿದೆ. ಆದರೆ ಇಲ್ಲಿ ಇವರೆಲ್ಲ ಅದೊಬ್ಬ ನನ್ನು ನಂಬಿ ಮೋಸ ಹೋಗಿದ್ದಾರೆ. ಈತನೇ ಇವರಿಗೆ ಬರೊಬ್ಬರಿ ಒಂದುವರೆ ಕೋಟಿ ವಂಚನೆ ಮಾಡಿ ಮಕ್ಮಲ್ ಟೋಪಿ ಹಾಕಿದ್ದಾನೆ. ಆತನ ಹೆಸರು ಚಂದ್ರಶೇಖರ ತೆಲಗಿ. ಸಿಬಿಟಿ ಕಸ್ಟಮರ್ ಬೆನೆಪಿಟ್ ಟ್ರೇಡಿಂಗ್ ಹೆಸರಲ್ಲಿ ಸಹಕಾರಿ ಬ್ಯಾಂಕ್ ಆರಂಭಿಸಿ ಡಿಪಾಜಿಟ್
ಮಾಡಿದವರ ಹಣ ಎಗರಿಸಿ ಎಸ್ಕೇಪ್ ಆಗಿದ್ದಾನೆ.

ಚಂದ್ರಶೇಖರ ತೆಲಗಿ ಬ್ಯಾಂಕ್​ನಲ್ಲಿ ವಿವಿಧ ಹುದ್ದೆ ಕೆಲಸ ಕೊಡುವಾಗಲೂ ವಂಚನೆ ಪ್ಲಾನ್ ಮಾಡಿದ್ದ. ಬ್ಯಾಂಕ್​ನಲ್ಲಿ ದುಡ್ಡು ಇಟ್ಟರೆ ಒಳ್ಳೆಯ ಬಡ್ಡಿ ಹಾಗೂ ಕೆಲಸ ಅಂತ ಹೇಳಿ ಬ್ಯಾಂಕ್​ ಸಿಬ್ಬಂದಿ ಕಡೆಯಿಂದಲೂ ದುಡ್ಡು ಡಿಪಾಜಿಟ್ ಕಟ್ಟಿಸಿಕೊಂಡಿದ್ದಾನೆ. ಜೊತೆಗೆ ಗ್ರಾಹಕರ ಹಣ ಎಲ್ಲ ಸೇರಿ ಒಂದುವರೆ ಕೋಟಿ ರೂ. ಹಣ ಬಾಚಿಕೊಂಡು ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಚಂದ್ರಯಾನದ ಬಗ್ಗೆ ಅಪಹಾಸ್ಯ; ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

ಚೆಕ್ ಬೌನ್ಸ್ ಕೇಸ್​ಗಳು ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಾಗಿ ಇದುವರೆಗೂ 50-60 ಬಾರಿ ಅರೆಸ್ಟ್​ ವಾರೆಂಟ್ ಜಾರಿ ಮಾಡಲಾಗಿದೆ. ಆದರೆ ಘಟನೆ ನಡೆದು ಏಳು ವರ್ಷ ಆದರೂ ಆರೋಪಿಯನ್ನು ನವನಗರ ಪೊಲೀಸರು ಅರೆಸ್ಟ್ ಮಾಡಿಲ್ಲ. ಇದರಿಂದ ಎಸ್. ಪಿ. ಕಚೇರಿಗೆ ಬಂದು ಮನವಿ ಕೊಟ್ಟ ಇವರು ಆದಷ್ಟು ಬೇಗ ಆತನನ್ನು ಹಿಡಿದು ನಮಗೆ ನ್ಯಾಯ ಕೊಡಿಸಿ ಅಂತಿದ್ದಾರೆ.

ಚಂದ್ರಶೇಖರ ತೆಲಗಿ ಬಾಗಲಕೋಟೆಯ ನವನಗರದಲ್ಲಿ ಸಿಬಿಟಿ ಹೆಸರಲ್ಲಿ 2014 ರಲ್ಲಿ ಬ್ಯಾಂಕ್ ಆರಂಭ ಮಾಡಿದ್ದ. ಬ್ಯಾಂಕ್​ನಲ್ಲಿ ಡಿಪಾಜಿಟ್, ಪಿಗ್ಮಿ ಸೇರಿದಂತೆ ವಿವಿಧ ಪ್ರಕ್ರಿಯೆ ನಡೆಯುತ್ತಿದ್ವು. ಆದರೆ ಸಹಕಾರಿ ಬ್ಯಾಂಕ್ ಶುರುವಾಗಿ ಕೇವಲ ಎರಡೇ ವರ್ಷದಲ್ಲಿ ಈತನ ಅಸಲಿ ಬಣ್ಣ ಬಯಲಾಗಿದೆ. ಬಡ ಕೂಲಿ ಕಾರ್ಮಿಕರು, ಮಧ್ಯಮರ್ಗದವರಿಂದ ಸಾವಿರದಿಂದ ಹಿಡಿದು ಲಕ್ಷಾಂತರ ರೂಪಾಯಿ ಕಟ್ಟಿಸಿಕೊಂಡು ಎಸ್ಕೇಪ್ ಆಗಿದ್ದಾನೆ.

ಚಂದ್ರಶೇಖರ ತೆಲಗಿ ವಿಜಯಪುರ ಮೂಲದವನೆಂದು ತಿಳಿದು ಬಂದಿದೆ. ಇನ್ನು ಚೀಟಿಂಗ್ ಮಾಡಿದ ಹಿನ್ನೆಲೆ ಬಾಗಲಕೋಟೆಯ ನವನಗರ ಠಾಣೆಯಲ್ಲಿ 2016ರಲ್ಲೇ ಎಫ್​.ಐ.ಆರ್ ಆಗಿತ್ತು. ಜೊತೆಗೆ ಚೆಕ್ ಬೌನ್ಸ್ ಕೇಸ್, ಗ್ರಾಹಕರ ಕೋರ್ಟ್ ಬಾಗಲಕೋಟೆ ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿ ಇದುವರೆಗೂ ಈತನನ್ನು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸುವಂತೆ 50-60 ಸಾರಿ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.

ಇದನ್ನೂ ಓದಿ: ಮುಚಖಂಡಿ ಕೆರೆಗೆ ಮತ್ತೆ ನೀರು ತುಂಬಿಸಲು ಕಾಂಗ್ರೆಸ್​ ಒಲವು: ಈಗಲಾದರೂ ತುಂಬುತ್ತಾ ಐತಿಹಾಸಿಕ ಕೆರೆ?

ಆದರೆ ಇದುವರೆಗೂ ಈತನನ್ನು ನವನಗರ ಪೊಲೀಸರು ಅರೆಸ್ಟ್ ಮಾಡಿ ಕೋರ್ಟ್​ಗೆ ಹಾಜರುಪಡಿಸುವ ಕಾರ್ಯ ಮಾಡಿಲ್ಲ. ಇದರಿಂದ ಇಂದಿಗೂ ಹಣ ಕಳೆದುಕೊಂಡವರ ಅಲೆದಾಟ ಗೋಳಾಟ ತಪ್ಪಿಲ್ಲ. ಇನ್ನು ಈ ಬಗ್ಗೆ ಈ ಹಿಂದೆಯೂ ಅನೇಕ ಬಾರಿ ಎಸ್ ಪಿ ಅವರಿಗೆ, ಬೆಳಗಾವಿ ಡಿಐಜಿ ಸೇರಿದಂತೆ ಎಲ್ಲ ಪ್ರಮುಖ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ವಂಚಕನನ್ನು ಬಂಧಿಸಿಲ್ಲ.

ಇನ್ನು ಈ ಬಗ್ಗೆ ಎಸ್ ಪಿ ಅವರನ್ನು ಕೇಳಿದರೆ, ಚಂದ್ರಶೇಖರ ತೆಲಗಿ ಹಾಗೂ ಸಹಚರರ ಮೇಲೆ ಕೇಸ್​ ಆಗಿದೆ.ಆತನನ್ನು ಹುಡುಕಾಡೋದಕ್ಕೆ ಪ್ರಯತ್ನ ಮಾಡುತ್ತಿದ್ದು.ಈಗ ಮತ್ತೆ ನಮ್ಮ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.ಆದಷ್ಟು ಬೇಗ ಆತನನ್ನು ಹಿಡಿದು ಕೋರ್ಟ್ ಗೆ ಹಾಜರುಪಡಿಸುತ್ತೇವೆ ಅಂದರು.

ಭವಿಷ್ಯದ ಒಳಿತಿಗಾಗಿ ಹಣ ಉಳಿಸೋಕೆ ಹೋದವರು, ವರ್ತಮಾನದಲ್ಲಿ ದಿನನಿತ್ಯ ಪರದಾಡುವಂತಾಗಿದೆ. ಪೊಲೀಸರು ಆದಷ್ಟು ಬೇಗ ಈತನನ್ನು ಅರೆಸ್ಟ್ ಮಾಡಿ ಕೋರ್ಟ್ ಗೆ ಹಾಜರುಪಡಿಸಬೇಕಾಗಿದೆ. ಕೋರ್ಟ್ ನಲ್ಲಿ ಆರೋಪಿ ವಿಚಾರಣೆ ಬಳಿಕ ನಮಗೆ ನ್ಯಾಯ ಸಿಗುವ ಭರವಸೆ ಇವರದ್ದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:52 pm, Thu, 24 August 23