ಬಾಗಲಕೋಟೆ, ಸೆಪ್ಟೆಂಬರ್ 1: ಬಾಗಲಕೋಟೆ (Bagalkote) ಜಿಲ್ಲೆ ಇಳಕಲ್ ತಾಲ್ಲೂಕಿನ ಚಿನಕಾಳ ಗ್ರಾಮ ಪಂಚಾಯಿತಿ (Chinakala Gram Panchayat) ಇತರೆ ಗ್ರಾ. ಪಂ. ಗಳಂತೆ ಅಲ್ಲ. ಇಲ್ಲಿ ಮಹಿಳೆಯೊಬ್ಬರು ಗ್ರಾ ಪಂ ಅಧ್ಯಕ್ಷೆಯಾಗಿದ್ದು, ಅವರ ಗಂಡನ ಕೈಯಲ್ಲಿ ಇಡೀ ಪಂಚಾಯಿತಿಯ ರಿಮೋಟ್ ಕಂಟ್ರೋಲ್ ಸ್ಥಾಪಿತವಾಗಿದೆ. ಗ್ರಾ ಪಂ ಅಧ್ಯಕ್ಷೆಯ ಗಂಡನ (Husband) ಅಂಧಾ ದರ್ಬಾರ್ ಯಾವುದೇ ಎಗ್ಗುಸಿಗ್ಗು ಇಲ್ಲದೆ ಢಾಳಾಗಿ ನಡೆದಿದೆ. ಈತ ಪ್ರಸ್ತುತ ಏನು ಮಾಡಿದ್ದಾನೆ ಅಂದರೆ ಇಡೀ ಊರಿನ ತುಂಬೆಲ್ಲಾ ಸಾವಿರಾರು ರೂ ಖರ್ಚು ಮಾಡಿ 6 ಸಿಸಿಟಿವಿ ಕ್ಯಾಮೆರಾ (CCTV footage) ಅಳವಡಿಸಿದ್ದಾನೆ. ಇದಕ್ಕೆ ಆತ ಸ್ವಂತ ಹಣವನ್ನೇ ಬಳಸಿದ್ದಾನೆ. ಆದರೆ ಇದು ಅಷ್ಟಕ್ಕೇ ನಿಂತಿಲ್ಲ. ಹಣ ತಾನು ಖರ್ಚು ಮಾಡಿರುವುದಾಗಿ ಹೇಳಿ ಈತ ಅಷ್ಟೂ ಕ್ಯಾಮರಾ ವಿಡಿಯೋ ಫೀಡ್ ಅನ್ನು ತನ್ನ ಮೊಬೈಲಿಗೆ ಬರುವಂತೆ ಲಿಂಕ್ ಮಾಡಿಕೊಂಡಿದ್ದಾನೆ.
ಊರಿನಲ್ಲಿ ಏನೇ ನಡೆಯಲಿ ಅದಷ್ಟೂ ಈತನೇ ಖರ್ಚು ಮಾಡಿ, ಹಾಕಿಸಿರುವ ಸಿಸಿ ಕ್ಯಾಮೆರಾಗಳ ಮೂಲಕ ಆತನ ಮೊಬೈಲಿಗೆ ಹೋಗಿ ಬೀಳುತ್ತಿದೆ! ಈತ ತನ್ನ ಮೊಬೈಲ್ ಗೆ ಲಿಂಕ್ ಮಾಡಿಸಿಕೊಂಡು ಒಣ ಕಾರುಬಾರು ನಡೆಸುತ್ತಿರುವುದು ಊರಿನ ದೌರ್ಭಾಗ್ಯವೇ ಸರಿ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಸದರಿ ಅಧ್ಯಕ್ಷೆಯ ಪತಿರಾಯ ಗ್ರಾ ಪಂ ನಲ್ಲಿರುವ ಸಿಸಿ ಕ್ಯಾಮೆರಾ ಫೀಡ್ ಕೂಡ ತನ್ನ ಮೊಬೈಲಿಗೆ ಲಿಂಕ್ ಮಾಡಿಸಿಕೊಂಡಿದ್ದಾನೆ.
ಇದನ್ನೂ ಓದಿ: ಒಬಾಮಾ- ದಲೈಲಾಮಾ ಡಿಸೆಂಬರ್ನಲ್ಲಿ ಹಲ್ಲೆಗೆರೆ ಭೂತಾಯಿ ಟ್ರಸ್ಟ್ ಅಂತಾರಾಷ್ಟ್ರೀಯ ಯೋಗ ಕೇಂದ್ರಕ್ಕೆ ಭೇಟಿ
ಮೊಬೈಲ್ ಲಿಂಕ್ ಮೂಲಕ ಪಂಚಾಯಿತಿಗೆ ಯಾರು ಬಂದರು, ಯಾರು ಹೋದರು, ಯಾಕೆ ಬಂದರು ಎಂದೆಲ್ಲ ಗ್ರಾ ಪಂ ಸಿಬ್ಬಂದಿಗೆ ಹತ್ತಾರು ಪ್ರಶ್ನೆ ಹಾಕಿ ತಲೆ ತಿನ್ನುತ್ತಿದ್ದಾನೆ. ರತ್ನವ್ವ ತಿಪ್ಪಣ್ಣವರ ಚಿಕನಾಳ ಗ್ರಾಪಂ ಅಧ್ಯಕ್ಷೆಯ ಪತಿ ತಿಪ್ಪಣ್ಣ ತಿಪ್ಪಣ್ಣವರ ಅಂಧಾ ದರ್ಬಾರ್ ಸದ್ಯಕ್ಕೆ ಹೀಗೆ ಸಾಗಿದೆ. ಊರಿನ ಮರ್ಯಾದೆ ಬೀದಿಗೆ ಬಿದ್ದಿದೆ. ಅಧ್ಯಕ್ಷೆಯ ಪತಿ ಆಟಕ್ಕೆ ಸಹ ಸದಸ್ಯರು ಹಾಗೂ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ನಿ ಹೆಸರಿಗೆ ಮಾತ್ರ ಅಧ್ಯಕ್ಷೆಯಾಗಿದ್ದರೆ, ಪತಿ ತಿಪ್ಪಣ್ಣನದ್ದೇ ಆಡಳಿತ ನಡೆದಿರುವುದು ಎಂದು ಗ್ರಾಮಸ್ಥರು ಚಿಂತಾಕ್ರಾಂತರಾಗಿದ್ದಾರೆ.
ನನ್ನ ಪತಿ ನನ್ನ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ- ಟಿವಿ 9ಗೆ ಗ್ರಾ ಪಂ ಅಧ್ಯಕ್ಷೆ ಸ್ಪಷ್ಟನೆ
ಚಿಕನಾಳ ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷೆಯ ಪತಿ ಸಿಸಿ ಕ್ಯಾಮೆರಾ ಅಳವಡಿಕೆ ಪ್ರಕರಣದಲ್ಲಿ ಟಿವಿ 9ಗೆ ಗ್ರಾ ಪಂ ಅಧ್ಯಕ್ಷೆ ಸ್ಪಷ್ಟನೆ ನೀಡಿದ್ದಾರೆ. ಸುಮ್ಮನೆ ನಮಗೆ ಆಗದವರು ಇಂತಹ ಸುದ್ದಿ ಹಬ್ಬಿಸಿದ್ದಾರೆ ಎಂದ ಪತಿ ತಿಪ್ಪಣ್ಣ ತಿಪ್ಪಣ್ಣವರ ಸ್ಪಷ್ಟನೆ ನೀಡಿದ್ದಾರೆ. ಊರಲ್ಲಿ ಇತ್ತೀಚೆಗೆ ಕುರಿಗಳ ಕಳ್ಳತನ ನಡೆದಿತ್ತು. ಊರ ದೇವಸ್ಥಾನ ಬಳಿ ಕೆಲವರು ಇಸ್ಪೀಟ್ ಆಟ ಆಡುತ್ತಿದ್ದರು. ಗ್ರಾ ಪಂ ಸಿಬ್ಬಂದಿ ಪಂಚಾಯಿತಿಗೆ ತಡವಾಗಿ ಬರುತ್ತಿದ್ದರು. ಇದೆಲ್ಲ ತಡೆಯೋದಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿದ್ದೇವೆ. ಅದರ ದೃಶ್ಯಾವಳಿ ಆನ್ ಲೈನ್ ಲಿಂಕ್ ಚೆಕ್ ಮಾಡೋದಕ್ಕೆ ಅಂತ ಕೆಲ ದಿನ ಮೋಬೈಲ್ ನಲ್ಲಿ ಇಟ್ಟುಕೊಂಡಿದ್ದೆವು. ಅದನ್ನು ಈಗ ತೆಗೆಯಲಾಗಿದೆ. ಊರ ಒಳಿತಿಗಾಗಿ ೨೩ ಸಾವಿರ ರೂ ಖರ್ಚು ಮಾಡಿ ಸಿಸಿ ಕ್ಯಾಮೆರಾ ಹಾಕಲಾಗಿದೆ. ಹಾಕಿದ ಮೇಲೆ ಕಳ್ಳತನ ಹಾಗೂ ಇಸ್ಪೀಟ್ ಆಟ ಆಡೋದು ಬಂದ್ ಆಗಿದೆ. ನನ್ನ ಪತಿ ನನ್ನ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ನಾನು ಸಾಮಾಜಿಕ ಕಾರ್ಯದ ಒಂದು ಭಾಗವಾಗಿ ಸಿಸಿ ಕ್ಯಾಮೆರಾ ಅಳವಡಿಸಿದ್ದೇನೆ. ಇದರಲ್ಲಿ ಬೇರೆ ಯಾವ ಉದ್ದೇಶವಿಲ್ಲ ಎಂದ ಅಧ್ಯಕ್ಷೆ ರತ್ನಾ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:51 am, Fri, 1 September 23