
ಬಾಗಲಕೋಟೆ, ಅಕ್ಟೋಬರ್ 18: ಕರ್ನಾಟಕದಲ್ಲಿ ಸದ್ಯ ದಸರಾ ನವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದೆ. ದಸರಾ ಪ್ರಯುಕ್ತ ಜನರು ದಾಂಡಿಯಾ ನೃತ್ಯದಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಸಂಭ್ರಮದ ಮಧ್ಯೆ ಜಿಲ್ಲೆಯ ಮುಧೋಳದ ವಿನಾಯಕ ನಗರದಲ್ಲಿ ಚಾಕು ಇರಿದು ಯುವಕನನ್ನ ಕೊಲೆ ಮಾಡಿರುವ ಘಟನೆ ನಡೆದಿದೆ. ಶ್ರೀನಿವಾಸ ಕದರಿ ಎಂಬುವವನಿಂದ ನಿತಿನ್ ನಿಂಬಾಳ್ಕರ್(25)ನ ಹತ್ಯೆ ಮಾಡಲಾಗಿದೆ. ಸಂಜು ಎಂಬುವವನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಧೋಳ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
ದಸರಾ ಪ್ರಯುಕ್ತ ವಿನಾಯಕ ನಗರದಲ್ಲಿ ದಾಂಡಿಯಾ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಶ್ರೀನಿವಾಸ್ ಕದರಿ ಎಂಬ 22 ವರ್ಷದ ಯುವಕ ಬಂದಿದ್ದಾನೆ. ಈತ ಮದ್ಯ ಹಾಗೂ ಗಾಂಜಾ ಮತ್ತಿನಲ್ಲಿ ತೇಲಾಡುತ್ತಿದ್ದ ಎನ್ನಲಾಗಿದೆ. ದಾಂಡಿಯಾ ನೃತ್ಯ ಮಾಡುತ್ತಿದ್ದ ಯುವತಿಯರನ್ನು ಚುಡಾಯಿಸುತ್ತಿದ್ದ. ಅಲ್ಲದೇ ಪೂಜೆ ಮಾಡುತ್ತಿದ್ದ ಯುವಕರೊಂದಿಗೂ ಕಿರಿಕ್ ಮಾಡಿದ್ದಾನೆ.
ಆಗ ಅಲ್ಲಿದ್ದ ನಿತಿನ್ ನಿಂಬಾಳ್ಕರ್, ‘ಇಲ್ಲಿಂದ ಹೋಗು’ ಎಂದು ಶ್ರೀನಿವಾಸ್ಗೆ ಎಚ್ಚರಿಕೆ ನೀಡಿದ್ದಾನೆ. ಆದರೂ ಮತ್ತೆ ಹಾಗೆ ಮಾಡಿದ್ದು, ನಿತಿನ್ ಒಂದೇಟು ಹೊಡೆದು ಕಳಿಸಿದ್ದಾನೆ. ಅಲ್ಲಿಂದ ತನ್ನ ಏರಿಯಾಗೆ ಹೋದ ಶ್ರೀನಿವಾಸ್, ಸ್ನೇಹಿತರಾದ ಸಂಪತ್ ಮತ್ತು ಪ್ರದೀಪ್‌ನನ್ನು ಕರೆದುಕೊಂಡು ಬಂದು ಪುನಃ ನಿತಿನ್ ಜೊತೆ ಜಗಳ ಮಾಡಿದ್ದಾರೆ. ನೋಡನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ತಿರುಗಿದ್ದು, ಚಾಕುವಿನಿಂದ ನಿತಿನ್ ಎದೆ, ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: ಅಡುಗೆ ವಿಚಾರಕ್ಕೆ ಗಂಡ-ಹೆಂಡತಿ ಮಧ್ಯೆ ಜಗಳ: ಗಲಾಟೆ ಬಿಡಿಸಲು ಹೋದವ ಬರ್ಬರ ಹತ್ಯೆ
ಇನ್ನು ಜಗಳ ಬಿಡಿಸಲು ಬಂದ ನಿತಿನ್ ಚಿಕ್ಕಪ್ಪ ಸಂಜಯ್ ನಿಂಬಾಳ್ಕರ್ಗೂ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ದಾಂಡಿಯಾ ಸಂಭ್ರಮದ ವೇಳೆ ನೆತ್ತರು ಹರಿದಿದ್ದು, ಸೂತಕದ ವಾತಾವರಣ ನಿರ್ಮಾಣವಾಗಿದೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಿತಿನ್ ಕಳೆದುಕೊಂಡ ಕುಟುಂಬಸ್ಥರು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಎಸ್ಪಿ ಸಿದ್ದಾರ್ಥ್ ಗೋಯೆಲ್ ಪ್ರತಿಕ್ರಿಯಿಸಿದ್ದು, ‘ದಾಂಡಿಯಾ ಪೂಜೆ ವಿಚಾರದಲ್ಲಿ ಗಲಾಟೆ ನಡೆದು ಓರ್ವನ ಕೊಲೆಯಾಗಿದೆ. ನಿತಿನ್ ನಿಂಬಾಳ್ಕರ್ ಮೃತಪಟ್ಟಿದ್ದಾನೆ. ಆತನ ಚಿಕ್ಕಪ್ಪ ಸಂಜಯ್ ನಿಂಬಾಳ್ಕರ್‌ಗೆ ಚಾಕು ಇರಿಯಲಾಗಿದೆ. ಹಳೇ ದ್ವೇಷ ಇದೆಯೋ ಅಥವಾ ನಿನ್ನೆ ನಡೆದ ಘಟನೆಯಿಂದ ಆಗಿದೆಯೋ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ’ ಅವರು ತಿಳಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.