ಬಾಗಲಕೋಟೆ: ಬಾದಾಮಿ ಬನಶಂಕರಿ ಬುಟ್ಟಿ ರೊಟ್ಟಿ ತಿಂದಿದ್ದೀರಾ? ಉತ್ತರ ಕರ್ನಾಟಕ ಶೈಲಿ ಊಟ ಮಿಸ್ ಮಾಡಬೇಡಿ

| Updated By: preethi shettigar

Updated on: Nov 05, 2021 | 9:35 AM

ಬನಶಂಕರಿ ತೀರ್ಥ ಹೊಂಡದ ಮೇಲೆ ಇಂಪಾದ ಗಾಳಿಯೊಂದಿಗೆ ಖಡಕ್ ಸಜ್ಜೆ ರೊಟ್ಟಿ, ಬಿಳಿಜೋಳ ರೊಟ್ಟಿ, ಕೆಂಪು ಚಟ್ನಿ, ಮೊಸರು, ಮೊಳಕೆಯೊಡೆದ ಹೆಸರುಕಾಳು ಪಲ್ಯದ ಊಟ ಸವಿಯುವ ಮಜಾನೆ ಬೇರೆ. ಕೇವಲ 30 ರೂಪಾಯಿಗೆ ಎರಡು ರೊಟ್ಟಿ, ಎರಡು ತರಹದ ಪಲ್ಯೆ,ಕೆಂಪು ಚಟ್ನಿ, ಮೊಸರನ್ನು ಇಲ್ಲಿ ಕೊಡುತ್ತಾರೆ.

ಬಾಗಲಕೋಟೆ: ಬಾದಾಮಿ ಬನಶಂಕರಿ ಬುಟ್ಟಿ ರೊಟ್ಟಿ ತಿಂದಿದ್ದೀರಾ? ಉತ್ತರ ಕರ್ನಾಟಕ ಶೈಲಿ ಊಟ ಮಿಸ್ ಮಾಡಬೇಡಿ
ಬನಶಂಕರಿ ಬುಟ್ಟಿ ರೊಟ್ಟಿ
Follow us on

ಬಾಗಲಕೋಟೆ: ಯಾವುದೇ ಪ್ರವಾಸಿ ತಾಣಕ್ಕೆ ಹೋದರೆ ಅಲ್ಲಿನ ದೃಶ್ಯ ಕಣ್ಣಿಗೆ ಹಬ್ಬ ನೀಡುತ್ತದೆ. ಮನಸ್ಸಿಗೆ ಮುದ ನೀಡುತ್ತದೆ. ಇದರ ಜೊತೆಗೆ ಅಲ್ಲಿಯ ಊಟ-ಉಪಹಾರ ಕೂಡ ಅಷ್ಟೇ ಸಂತೋಷ ನೀಡುತ್ತದೆ. ಇನ್ನು ಬಾಗಲಕೋಟೆ ಜಿಲ್ಲೆ ಐತಿಹಾಸಿಕ ಬಾದಾಮಿ ಬನಶಂಕರಿ ದೇಗುಲಕ್ಕೆ ಬಂದರೆ ಇಲ್ಲಿನ ಊಟ ನಾಲಿಗೆಯಲ್ಲಿ ನೀರು ತರಿಸುತ್ತದೆ. ಹೌದು ಬನಶಂಕರಿ ಹೊಂಡದ ಪ್ರಾಂಗಣದಲ್ಲಿ ಅಗ್ಗದ ದರದಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲಿ ಭಕ್ತರಿಗೆ ಊಟೋಪಚಾರ ಮಾಡುತ್ತಾರೆ.

ಬಾದಾಮಿ ಚಾಲುಕ್ಯರ ಕಾಲದ ಐತಿಹಾಸಿಕ ಬನಶಂಕರಿ ದೇಗುಲ ದರ್ಶನಕ್ಕೆ ಹಲವು ಭಾಗದಿಂದ ಭಕ್ತರು ಬರುತ್ತಾರೆ. ಬನಶಂಕರಿ ಸುತ್ತಮುತ್ತಲಿನ ಗ್ರಾಮಗಳಾದ ನಂದಿಕೇಶ್ವರ, ಢಾಣಕ್ ಶಿರೂರು ಗ್ರಾಮದಿಂದ ಮಹಿಳೆಯರು ರೊಟ್ಟಿ ಊಟ ಮಾರಾಟ ಮಾಡುತ್ತಾರೆ. ಭಕ್ತರು ದರ್ಶನ ಪಡೆದ ಬಳಿಕ ದೇಗುಲದ ಹೊರಗೆ ಬರುವುದನ್ನೇ ಕಾಯುತ್ತಾರೆ. ಬರುವ ಭಕ್ತರಿಗೆ ಯಪ್ಪಾ, ಯವ್ವಾ ಎಂದು ಆತ್ಮೀಯವಾಗಿ ಮಾತನಾಡಿಸುತ್ತಾ ಊಟ ಮಾಡುತ್ತಿರಾ ಎಂದು ಕೇಳಿ ಅವರಿಗೆ ಪ್ರೀತಿಪೂರ್ವಕವಾಗಿ ಊಟ ಬಡಿಸುತ್ತಾರೆ.

ಬನಶಂಕರಿ ತೀರ್ಥ ಹೊಂಡದ ಮೇಲೆ ಇಂಪಾದ ಗಾಳಿಯೊಂದಿಗೆ ಖಡಕ್ ಸಜ್ಜೆ ರೊಟ್ಟಿ, ಬಿಳಿಜೋಳ ರೊಟ್ಟಿ, ಕೆಂಪು ಚಟ್ನಿ, ಮೊಸರು, ಮೊಳಕೆಯೊಡೆದ ಹೆಸರುಕಾಳು ಪಲ್ಯದ ಊಟ ಸವಿಯುವ ಮಜಾನೆ ಬೇರೆ. ಕೇವಲ 30 ರೂಪಾಯಿಗೆ ಎರಡು ರೊಟ್ಟಿ, ಎರಡು ತರಹದ ಪಲ್ಯೆ,ಕೆಂಪು ಚಟ್ನಿ, ಮೊಸರನ್ನು ಇಲ್ಲಿ ಕೊಡುತ್ತಾರೆ.

ಹೌದು ಬನಶಂಕರಿ ದೇವಸ್ಥಾನಕ್ಕೆ ಹೋದರೆ ಸಾಕು ಮಹಿಳೆಯರು ಬುಟ್ಟಿ ಹೊತ್ತು ಸಂಚರಿಸುತ್ತಿರುತ್ತಾರೆ. ಕಡಿಮೆ ದರದಲ್ಲಿ ಪ್ರವಾಸಿಗರ ಹಸಿವು ನೀಗಿಸುವ ಇವರು ಆಧುನಿಕ ಅನ್ನಪೂರ್ಣೇಶ್ವರಿ ಎಂದು ಖ್ಯಾತಿ ಪಡೆದುಕೊಂಡಿದ್ದಾರೆ. ಬೆಳಿಗ್ಗೆ 5 ಗಂಟೆಗೆ ಎದ್ದು ರೊಟ್ಟಿ, ಊಟಕ್ಕೆ ಬೇಕಾದ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡು ಬರುತ್ತಾರೆ. ತಲೆ ಮೇಲೆ ಬುಟ್ಟಿ ಹೊತ್ತುಕೊಂಡು ಬನಶಂಕರಿ ದೇಗುಲ ಸುತ್ತಮುತ್ತಲು ಈ ಆಧುನಿಕ ಅನ್ನಪೂರ್ಣೇಶ್ವರಿಯರು ಕಾಣಸಿಗುತ್ತಾರೆ.

ಕಳೆದ ಎರಡು ವರ್ಷಗಳಿಂದ ಕೊವಿಡ್​ನಿಂದಾಗಿ ದೇಗುಲ ಬಂದ್ ಆಗಿ ವ್ಯಾಪಾರ ಇರಲಿಲ್ಲ. ಈಗ ಶ್ರಾವಣ ಮಾಸದಿಂದ ಒಂದಿಷ್ಟು ವ್ಯಾಪಾರ ಹೆಚ್ಚಾಗಿದೆ. ದಿನಾಲೂ ಈಗ ಏನಿಲ್ಲವೆಂದರೂ 500 ರೂಪಾಯಿಯಾದರೂ ವ್ಯಾಪಾರ ಆಗುತ್ತದೆ ತಾಯಿ ಬನಶಂಕರಿ ದೇವಿ ನಂಬಿಕೊಂಡು ರೊಟ್ಟಿ ಊಟದ ವ್ಯಾಪಾರ ಮಾಡುತ್ತಿದ್ದೇವೆ ಎಂದು ಢಾಣಕ್ ಶಿರೂರು ಮಹಿಳೆ ನೀಲವ್ವ ಹೇಳಿದ್ದಾರೆ.

ದೇಗುಲ ದರ್ಶನಕ್ಕೆ ಬರುವ ಭಕ್ತರಿಗೆ ಕಡಿಮೆ ದರದಲ್ಲಿ ಊಟ ಕೊಡುತ್ತಾರೆ. ಹೋಟೆಲ್​ಗಳಲ್ಲಿ ಸಿಗದಂತಹ ಊಟ ಇವರ ಬಳಿ ಸಿಗುತ್ತದೆ. ಪಕ್ಕಾ ಮನೆಯ ಊಟ ಸಿಗುತ್ತಿದ್ದು, ಮನೆ ಮಂದಿ ತರಹ ಊಟೋಪಚಾರ ಮಾಡುತ್ತಾರೆ. ಬಾದಾಮಿ ಬನಶಂಕರಿಯಲ್ಲಿ ಆಧುನಿಕ ಅನ್ನಪೂರ್ಣೇಶ್ವರಿಯರು ರೊಟ್ಟಿ ಊಟವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಇವರ ಕೈಯಿಂದ ಊಟ ಸವಿದಿರುವವರು ಅದರ ರುಚಿ ಮರೆಯುವುದಕ್ಕೆ ಸಾಧ್ಯವಿಲ್ಲ. ಬೆಂಗಳೂರು ಭಾಗದಿಂದ ಬಂದವರು ಕೂಡ ಇಲ್ಲಿನ ಉತ್ತರ ಕರ್ನಾಟಕ ಊಟ ಸವಿಯುತ್ತಿದ್ದು, ಈ ಊಟ ತುಂಬಾ ರುಚಿಯಾಗಿದೆ. ಇದು ಒಳ್ಳೆಯ ಅನುಭವ ಎಂದು ಬೆಂಗಳೂರು ಮೂಲದ ರಮೇಶ್. ಪಿ ಅಭಿಪ್ರಾಯಪಟ್ಟಿದ್ದಾರೆ.

ವರದಿ: ರವಿ ಮೂಕಿ

ಇದನ್ನೂ ಓದಿ:

ಬಳ್ಳಾರಿ ಸ್ಪೇಷಲ್ ಮಸಾಲೆ ರೊಟ್ಟಿ; ಸರಳ ವಿಧಾನದ ಜತೆ ಮಾಡಿ ಸವಿಯಿರಿ

ಕನ್ನಡ ತಾಯಿಗೊಂದು ಆಲಯ; ಕದಂಬರ ಕಾಲದ ಭುವನೇಶ್ವರಿ ದೇವಾಲಯಕ್ಕಿದೆ ನೂರಾರು ವರ್ಷಗಳ ಇತಿಹಾಸ

Published On - 9:32 am, Fri, 5 November 21