ಸಾವಯವ ಗೊಬ್ಬರ ಬಳಸಿ ಸಮೃದ್ಧ ಫಸಲು ತೆಗೆದ ರೈತ; 10 ಎಕರೆ ಜಮೀನಿನಲ್ಲಿ ನಾಲ್ಕು ರೀತಿಯ ಬೆಳೆ ಬೆಳೆದು ಯಶಸ್ವಿ
ಬಸವರಾಜ ಅವರ ಈ ಸಾವಯವ ಕೃಷಿ ಅಕ್ಕಪಕ್ಕದ ಗ್ರಾಮಗಳ ರೈತರಿಗೂ ಆಕರ್ಷಣೆ ಆಗಿದೆ. ಹೀಗಾಗಿ ಪ್ರತಿದಿನ ಬಸವರಾಜ ಅವರ ಜಮೀನಿಗೆ ರೈತರು ಭೇಟಿ ನೀಡಿ ಸಲಹೆ ಸೂಚನೆ ಪಡೆದುಕೊಳ್ಳುತ್ತಿದ್ದಾರೆ.
ಬಾಗಲಕೋಟೆ: ಅವರದ್ದು ಪಕ್ಕಾ ರೈತಾಪಿ ವರ್ಗ. ಆ ರೈತ(Farmer) ಓರ್ವ ಪ್ರಗತಿಪರ ರೈತ ಹಾಗೂ ರೈತ ಮುಖಂಡ. ಈ ಮೊದಲು ರಾಸಾಯನಿಕ ಬಳಸಿ ಕೃಷಿ ಮಾಡುತ್ತಿದ್ದರು. ಆದರೆ ಈಗ ಸಾವಯವ (Organic) ಗೊಬ್ಬರ ಬಳಸಿ ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. 10 ಎಕರೆ ಜಮೀನಿನಲ್ಲಿ ಕಬ್ಬು, ಬಾಳೆ, ಪೇರಲೆ, ದ್ರಾಕ್ಷಿ(Grapes) ಬೆಳೆದು ವರ್ಷಕ್ಕೆ 25-30 ಲಕ್ಷ ರೂಪಾಯಿ ಆದಾಯ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಇಷ್ಟಕ್ಕೆಲ್ಲಾ ಕಾರಣ ಸಾವಯವ ಗೊಬ್ಬರ ಎನ್ನುವುದು ಈ ರೈತನ ಅಚಲ ನಂಬಿಕೆಯಾಗಿದ್ದು, ಸದ್ಯ ಇದು ಇತರರಿಗೆ ಮಾದರಿಯಾಗಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತುಬಚಿ ಗ್ರಾಮದ ರೈತ ಜಾಗೂ ರೈತ ಮುಖಂಡ ಬಸವರಾಜ ಸಿಂಧೂರ ಅವರ ಹೊಲದಲ್ಲಿ ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಲಾಗಿದೆ. ಬಸವರಾಜ ಸಿಂಧೂರ, ತಮ್ಮ 10 ಎಕರೆ ಜಮೀನಿನಲ್ಲಿ ನಾಲ್ಕು ಬಗೆಯ ಬೆಳೆ ಬೆಳೆದು ವಾರ್ಷಿಕ 25 ರಿಂದ 30 ಲಕ್ಷದವರೆಗೂ ಆದಾಯ ಗಳಿಸುತ್ತಿದ್ದಾರೆ. 10 ಎಕರೆ ಜಮೀನಿನಲ್ಲಿ ದ್ರಾಕ್ಷಿ 4 ಎಕರೆ, 2 ಎಕರೆ ಪೇರಲೆ, 2 ಎಕರೆ ಕಬ್ಬು ಹಾಗೂ 2 ಎಕರೆ ಬಾಳೆ ಬೆಳೆ ಬೆಳೆದಿದ್ದಾರೆ.
ಇದ್ಯಾವುದಕ್ಕೂ ಬಸವರಾಜ ಅವರು ರಾಸಾಯನಿಕ ಗೊಬ್ಬರವನ್ನು ಬಳಸಿಲ್ಲ. ಸ್ವತಃ ಜಮೀನಿನಲ್ಲೇ ಸಾವಯವ ಗೊಬ್ಬರವನ್ನು ರೆಡಿ ಮಾಡಿ ಎಲ್ಲ ಬೆಳೆಗಳಿಗೂ ಸಿಂಪಡಣೆ ಮಾಡುತ್ತಾರೆ. ದ್ರಾಕ್ಷಿ, ಕಬ್ಬು, ಪೇರಲೆ, ಬಾಳೆ ಬೆಳೆಗಳ ಜೊತೆಗೆ ಜಮೀನಿನಲ್ಲೇ ಕೃಷಿಹೊಂಡ ನಿರ್ಮಾಣ ಮಾಡಿದ್ದು, ಅದರಿಂದಲೂ ಕೃಷಿಗೆ ನೀರಾವರಿ ಮಾಡುತ್ತಿದ್ದಾರೆ. ಕೃಷಿಯಲ್ಲಿ ಒಂದು ಬೆಳೆ ಕೈ ಬಿಟ್ಟರು, ಮತ್ತೊಂದು ಬೆಳೆ ಕೈಡಿಯುತ್ತಿದ್ದು ಬಸವರಾಜ ಸಿಂಧೂರ ಅವರು ವಾರ್ಷಿಕವಾಗಿ 25- 30 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ರೈತ ಕುಟುಂಬದಿಂದ ಬಂದಿರುವ ಇವರು, ಕಳೆದೆರಡು ವರ್ಷಗಳ ಹಿಂದೆ ಸಾಕಷ್ಟು ನಷ್ಟ ಅನುಭವಿಸಿದ್ದರು. ಇದಕ್ಕೆ ಕಾರಣ ರಾಸಾಯನಿಕ ರಸಗೊಬ್ಬರ, ಕ್ರಿಮಿನಾಶಕಗಳ ಸಿಂಪಡಣೆ. ರಾಸಾಯನಿಕ ಗೊಬ್ಬರದಿಂದ ಆದ ನಷ್ಟದಿಂದ ಬೇಜಾರ್ ಆದ ಸಿಂಧೂರ ಅವರು ಸಾವಯವ ಕೃಷಿ ಮಾಡುವ ಆಲೋಚನೆ ಮಾಡುತ್ತಾರೆ. ಅಲ್ಲದೇ ಸಾವಯವ ಕೃಷಿಯಿಂದ ಒಳ್ಳೆಯ ಬೆಳೆ ಬೆಳೆದಿರುವ ಸಿಂಧೂರ ಎಲ್ಲ ರೈತರು ರಾಸಾಯನಿಕ ಗೊಬ್ಬರ ಬಿಡುವಂತೆ ಸಲಹೆ ಮಾಡುತ್ತಿದ್ದಾರೆ. ಜೊತೆಗೆ ಸಾವಯವ ಕೃಷಿ ಮೊದಲಿಗೆ ಹೊಡೆತ ನೀಡುತ್ತದೆ. ಇದರಿಂದ ಝರ್ಜರಿತರಾಗದೇ ಮುನ್ನುಗ್ಗಿದರೆ ಭೂಮಿ ತಾಯಿ ಕೈ ಹಿಡಿಯೋದು ಗ್ಯಾರಂಟಿ ಎಂದು ರೈತ ಬಸವರಾಜ ಸಲಹೆ ನೀಡಿದ್ದಾರೆ.
ಇನ್ನು ಬಸವರಾಜ ಅವರ ಈ ಸಾವಯವ ಕೃಷಿ ಅಕ್ಕಪಕ್ಕದ ಗ್ರಾಮಗಳ ರೈತರಿಗೂ ಆಕರ್ಷಣೆ ಆಗಿದೆ. ಹೀಗಾಗಿ ಪ್ರತಿದಿನ ಬಸವರಾಜ ಅವರ ಜಮೀನಿಗೆ ರೈತರು ಭೇಟಿ ನೀಡಿ ಸಲಹೆ ಸೂಚನೆ ಪಡೆದುಕೊಳ್ಳುತ್ತಿದ್ದಾರೆ.
ಒಟ್ಟಾರೆ ರಾಸಾಯನಿಕ ಗೊಬ್ಬರ ಬಳಸಿ ಸಾಕಷ್ಟು ನಷ್ಟ ಅನುಭವಿಸಿದ್ದ ರೈತ ಬಸವರಾಜ ಅವರನ್ನು ಸಾವಯವ ಕೃಷಿ ಕೈ ಹಿಡಿದಿದೆ. ಹೀಗಾಗಿ ವಾರ್ಷಿಕವಾಗಿ ಬಸವರಾಜ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದು, ಇದು ಇನ್ನಿತರ ರೈತರಿಗೆ ಮಾದರಿಯಾಗಿದೆ.
ವರದಿ: ರವಿ ಮೂಕಿ
ಇದನ್ನೂ ಓದಿ: 71019 ಹೆಕ್ಟೆರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳದ ರೈತರು; ರಾಯಚೂರು ಜಿಲ್ಲೆಯಾದ್ಯಂತ ಭರ್ಜರಿ ಫಸಲು
ಸಾವಯವ ಕೃಷಿಯಲ್ಲಿ ರೈತನ ಅಮೋಘ ಸಾಧನೆ, ಕೃಷಿ & ಉಪಕಸುಬಿನ ಮೂಲಕ ಲಕ್ಷ ಲಕ್ಷ ಗಳಿಕೆ