ಬಾಗಲಕೋಟೆ ವಿಜಯಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ: ನಾಲ್ವರು ಸಾವು

ಜಮಖಂಡಿಯ ಸಿದ್ದಾಪುರ ಗ್ರಾಮದ ಬಳಿ ಬಾಗಲಕೋಟೆ–ವಿಜಯಪುರ ಹೆದ್ದಾರಿಯಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹಿಂಬದಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ 1 ಗಂಟೆಯ ಸುಮಾರಿಗೆ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಸಿದ್ದಾಪುರದವರೇ ಎಂಬುದು ಗೊತ್ತಾಗಿದೆ. ಜಮಖಂಡಿ ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಗಲಕೋಟೆ ವಿಜಯಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ: ನಾಲ್ವರು ಸಾವು
ಅಪಘಾತದ ತೀವ್ರತೆಗೆ ಟ್ರ್ಯಾಕ್ಟರ್ ಹಿಂಬದಿ ನುಜ್ಜುಗುಜ್ಜಾಗಿರುವುದು
Updated By: Ganapathi Sharma

Updated on: Dec 03, 2025 | 9:39 AM

ಬಾಗಲಕೋಟೆ, ಡಿಸೆಂಬರ್ 3: ಬಾಗಲಕೋಟೆ (Bagalkote) ಜಿಲ್ಲೆಯ ಜಮಖಂಡಿ (Jamkhandi) ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ಮಂಗಳವಾರ ತಡರಾತ್ರಿ 1 ಗಂಟೆಯ ಸುಮಾರಿಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹಿಂಬದಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಒಬ್ಬ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ.

ಮೃತರನ್ನು ವಿಶ್ವನಾಥ ಕಂಬಾರ (17), ಗಣೇಶ್ ಅರಳಿಮಟ್ಟಿ (20), ಈಶು ಕಂಬಾರ, ಪ್ರವೀಣ ಶೇಡಬಾಳ (22) ಮತ್ತು ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟ ಪ್ರಜ್ವಲ್ ಶೇಡಬಾಳ (17) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರು ಹಾಗೂ ಗಾಯಾಳುಗಳು ಎಲ್ಲರೂ ಸಿದ್ದಾಪುರ ಗ್ರಾಮದವರೇ ಎಂದು ತಿಳಿದುಬಂದಿದೆ.

ಈ ದುರ್ಘಟನೆ ಬಾಗಲಕೋಟೆ–ವಿಜಯಪುರ ಹೆದ್ದಾರಿಯ ಸಿದ್ದಾಪುರ ಗ್ರಾಮದ ಬಳಿ ಸಂಭವಿಸಿದ್ದು, ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟ್ರ್ಯಾಕ್ಟರ್ ಚಾಲಕನದ್ದು ಯಾವುದೇ ತಪ್ಪಿಲ್ಲ ಎಂದು ಹೇಳಲಾಗುತ್ತಿದೆ. ಕಬ್ಬಿನ ಲೋಡ್ ಹಿಂಭಾಗ ಟ್ರ್ಯಾಕ್ಟರ್ ಚಾಲಕ ರಿಫ್ಲೆಕ್ಟರ್ ಕೂಡ ಅಳವಡಿಸಿದ್ದ. ಆದಾಗ್ಯೂ ವೇಗವಾಗಿ ಬಂದ ಕಾರು ಟ್ರ್ಯಾಕ್ಟರ್ ಹಿಂಭಾಗಕ್ಕೆ ಡಿಕ್ಕಿಯಾಗಿದೆ.

ಇದನ್ನೂ ಓದಿ: ಶ್ರೀನಿವಾಸಪುರ ಬಳಿ ಭೀಕರ ಬಸ್​​ ಅಪಘಾತ: ಮಹಿಳೆ ಸಾವು, ಹಲವರಿಗೆ ಗಾಯ

ಮತ್ತೊಂದೆಡೆ, ಕಾರು ಚಾಲಕ ಹಾಗೂ ಇತರರು ಮದ್ಯಪಾನ ಮಾಡಿದ ಸಂಶಯ ಕೂಡ ವ್ಯಕ್ತವಾಗಿದೆ. ಆದಾಗ್ಯೂ, ಘಟನೆ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಮಾಹಿತಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:49 am, Wed, 3 December 25