ಪ್ರವಾಹಕ್ಕೆ ಸಿಲುಕಿ ತತ್ತರಿಸಿದ ಜನರಲ್ಲಿ ಮಂದಹಾಸ, ಭರವಸೆ ಮೂಡಿಸಿತು ಹಿಂಗಾರು ಬೆಳೆ

ಪ್ರವಾಹಕ್ಕೆ ಸಿಲುಕಿ ತತ್ತರಿಸಿದ ಜನರಲ್ಲಿ ಮಂದಹಾಸ, ಭರವಸೆ ಮೂಡಿಸಿತು ಹಿಂಗಾರು ಬೆಳೆ

ಬಾಗಲಕೋಟೆ: ಅವರೆಲ್ಲ ಈ ಬಾರಿ ಬಂದ ಪ್ರವಾಹಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದರು. ಬೆಳೆದಿದ್ದ ಬೆಳೆ ನೀರು ಪಾಲಾಗಿತ್ತು. ಈ ವರ್ಷ ಭೂತಾಯಿ ನಮಗೇನು ಕೊಡಲೇ ಇಲ್ಲ ಅಂತಾ ಕೂತಿದ್ದ ರೈತರಿಗೆ ಹಿಂಗಾರು ಬೆಳೆ ಭರವಸೆ ಮೂಡಿಸಿದೆ .

ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದ ಸುತ್ತಮುತ್ತ ಹಚ್ಚಹಸಿರ ದರ್ಶನ. ಹಸಿರು ಸೀರೆ ಉಟ್ಟಂತೆ ಕಾಣ್ತಿರೋ ಭೂತಾಯಿ. ಬೆಳೆದು ನಿಂತಿರೋ ಕಡಲೆ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಂಗಾಲಾಗಿದ್ದ ಅನ್ನದಾತನ ಬದುಕಿನಲ್ಲಿ ಭರವಸೆ ಮೂಡಿಸಿದೆ . ಅಂದಹಾಗೆ.. ಹಿಂದೆಂದೂ ಕಂಡು ಕೇಳರಿಯದ ಪ್ರವಾಹಕ್ಕೆ ಬಾಗಲಕೋಟೆ ಜಿಲ್ಲೆ ನಲುಗಿ ಹೋಗಿತ್ತು. ಕೃಷ್ಣೆ, ಮಲಪ್ರಭೆ, ಘಟಪ್ರಭೆಯ ಅಬ್ಬರಕ್ಕೆ ಬೆಳೆಗಳೆಲ್ಲಾ ಕೊಚ್ಚಿ ಹೋಗಿದ್ದವು. ಈರುಳ್ಳಿ, ಮೆಕ್ಕೆಜೋಳ, ಶೇಂಗಾ ನೀರು ಪಾಲಾಗಿದ್ದವು. ಇದ್ರಿಂದ ರೈತರ ಬದುಕೇ ಬೀದಿಗೆ ಬಂದಿತ್ತು. ಆದ್ರೀಗ ಹಿಂಗಾರು ರೈತರ ಕೈಹಿಡಿದಿದೆ. ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಕಡಲೆ, ಜೋಳ ಹುಲುಸಾಗಿ ಬೆಳೆದಿದ್ದು ರೈತನ ಮೊಗದಲ್ಲಿ ನಗು ಅರಳುವಂತೆ ಮಾಡಿದೆ.

ಇನ್ನು ತೇವಾಂಶ ಹಾಗೂ ಚಳಿಯಿಂದಲೇ ಬೆಳೆಯುವ ಕಡಲೆ ರೈತರ ಕೈ ಹಿಡಿಯೋ ಲಕ್ಷಣ ಕಾಣ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಬರೋಬ್ಬರಿ 1 ಲಕ್ಷ ಹೆಕ್ಟೇರ್​ನಲ್ಲಿ ಕಡಲೆ ಬೆಳೆದಿದ್ದಾರೆ. ಆದ್ರೆ ಬೆಳೆ ಬೆಳೆಯುವಾಗ ಇರೋ ಬೆಲೆ ಬೆಳೆ ಕೈಗೆ ಬಂದಾಗ ಇರೋದಿಲ್ಲ ಅನ್ನೋದು ರೈತರ ಆತಂಕವಾಗಿದೆ. ಹೀಗಾಗಿ ಈ ಬಾರಿ ಖರೀದಿ ಕೇಂದ್ರ ತೆರೆಯಬೇಕು ಅಂತಾ ಆಗ್ರಹಿಸುತ್ತಿದ್ದಾರೆ .

ಒಟ್ನಲ್ಲಿ ಪ್ರವಾಹದಿಂದ ನೊಂದು ಬೆಂದ ಹೋಗಿದ್ದ ರೈತರಿಗೆ ಹಿಂಗಾರು ಬೆಳೆ ಕೈಹಿಡಿದಿದೆ. ಆದ್ರೆ ಮಾರುಕಟ್ಟೆಯಲ್ಲಿ ಬೆಲೆಯೂ ಚೆನ್ನಾಗಿ ಸಿಕ್ರೆ ರೈತರ ಬದುಕು ಹಸನಾಗಲಿದೆ.

Click on your DTH Provider to Add TV9 Kannada