ಘಟಪ್ರಭಾ ನದಿಯಲ್ಲಿ ಮತ್ತಷ್ಟು ಹೆಚ್ಚಿದ ನೀರಿನ ಪ್ರಮಾಣ: ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ಬಳಿಯ ಸೇತುವೆ ಜಲಾವೃತ
ಕ್ಷಣ ಕ್ಷಣಕ್ಕೂ ನೀರು ಏರುತ್ತಿದ್ದು, ಘಟಪ್ರಭಾ ನದಿ ಅಕ್ಕಪಕ್ಕದ ಕಬ್ಬು, ಹೆಸರು ಬೆಳೆ ಜಲಾವೃತವಾಗಿದ್ದು, ಅನ್ನದಾತರಿಗೆ ಸಂಕಷ್ಟ ಎದುರಾಗಿದೆ. ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾದರೆ ಮಿರ್ಜಿ ಗ್ರಾಮಕ್ಕೆ ಪ್ರವಾಹ ಭೀತಿ ಎದುರಾಗಲಿದೆ.
ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಘಟಪ್ರಭಾ ನದಿ (Ghataprabha River) ಬೊರ್ಗರೆದು ಹರಿಯುತ್ತಿದೆ. ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮದ ಘಟಪ್ರಭಾ ಸೇತುವೆ ಜಲಾವೃತವಾಗಿದೆ. ಒಂದು ವರ್ಷದ ಹಿಂದೆ ನೂತನ ಸೇತುವೆ ಕಟ್ಟಿಸಿದ್ದು ಸದ್ಯ ಜಲಾವೃತವಾಗಿದೆ. ಸೇತುವೆ ಮೇಲೆ ಐದು ಅಡಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಚನಾಳ, ಒಂಟಗೋಡಿ, ಮಿರ್ಜಿ ಗ್ರಾಮದಿಂದ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಸಂಪರ್ಕ ಬಂದ್ ಆಗಿದೆ. ಮಿರ್ಜಿ ಒಂಟಗೋಡಿ, ಚನಾಳ ಗ್ರಾಮಸ್ಥರು ಮಹಾಲಿಂಗಪುರ ಪಟ್ಟಣಕ್ಕೆ ಹೋಗಬೇಕಾದರೆ 40 ಕಿಮೀ ಸುತ್ತುವರೆದು ಪ್ರಯಾಣ ಮಾಡುವ ಪರಿಸ್ಥಿತಿ ಎದುರಾಗಿದೆ.
ಕ್ಷಣ ಕ್ಷಣಕ್ಕೂ ನೀರು ಏರುತ್ತಿದ್ದು, ಘಟಪ್ರಭಾ ನದಿ ಅಕ್ಕಪಕ್ಕದ ಕಬ್ಬು, ಹೆಸರು ಬೆಳೆ ಜಲಾವೃತವಾಗಿದ್ದು, ಅನ್ನದಾತರಿಗೆ ಸಂಕಷ್ಟ ಎದುರಾಗಿದೆ. ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾದರೆ ಮಿರ್ಜಿ ಗ್ರಾಮಕ್ಕೆ ಪ್ರವಾಹ ಭೀತಿ ಎದುರಾಗಲಿದೆ. 2019,20 ರಲ್ಲಿ ಪ್ರವಾಹದಿಂದ ಮಿರ್ಜಿ ಗ್ರಾಮ ಜಲಾವೃತವಾಗಿತ್ತು. ಮನೆಗಳು ಜಲಾವೃತವಾಗಿ ಈ ಹಿಂದೆ ಮಿರ್ಜಿ ಗ್ರಾಮಸ್ಥರು ಸಾಕಷ್ಟು ನೊಂದಿದ್ದರು. ಇದೀಗ ಪುನಃ ಪ್ರವಾಹ ಆತಂಕ ಉಂಟಾಗಿದೆ.
ಕೃಷ್ಣಾ ನದಿಯಲ್ಲಿ ಮತ್ತೆ ಹೆಚ್ಚಿದ ನೀರಿನ ಹರಿವು:
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಹಿನ್ನೆಲೆ ಕೃಷ್ಣಾ ನದಿಯಲ್ಲಿ ಮತ್ತೆ ನೀರಿನ ಹರಿವು ಹೆಚ್ಚಾಗಿದೆ. ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ ಕೃಷ್ಣಾ ನದಿಗೆ 1 ಲಕ್ಷ 59 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ಹಿಪ್ಪರಗಿ ಜಲಾಶಯಕ್ಕೆ 1 ಲಕ್ಷ 60 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಬಾಗಲಕೋಟೆ ಜಿಲ್ಲೆ ಕೃಷ್ಣಾ ತೀರದಲ್ಲಿ ಆತಂಕ ಹೆಚ್ಚಿದ್ದು, ನೀರಿನ ಹರಿವು 2 ಲಕ್ಷ 50 ಸಾವಿರ ದಾಟಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗುತ್ತದೆ. ಸದ್ಯ 1 ಲಕ್ಷ 59 ಸಾವಿರ ಕ್ಯೂಸೆಕ್ ನೀರು ಹರಿದು ಬರ್ತಿದೆ.
ಮಲಪ್ರಭಾ ನದಿಗೆ 3 ರಿಂದ ಐದು ಸಾವಿರ ಕ್ಯೂಸೆಕ್ ನೀರು ಬಿಡುವ ಹಿನ್ನೆಲೆ ಗ್ರಾಮ ಪಂಚಾಯಿತಿಯಿಂದ ಡಂಗುರ ಸಾರುವ ಮೂಲಕ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಯ ಹುನಗುಂದ ತಾಲ್ಲೂಕಿನ ಖೈರವಾಡಗಿ ಗ್ರಾಮದಲ್ಲಿ ಮೈಕ್ ಮೂಲಕ ಸುರಕ್ಷತೆಯಿಂದಿರಲು ಸೂಚನೆ ನೀಡಲಾಗಿದೆ. ನದಿ ತೀರದ ಜನರು ಮೋಟರ್ ಪಂಪ್ ಶೆಟ್ ತೆರವುಗೊಳಿಸಲು, ಜಾನುವಾರುಗಳನ್ನು ಸುರಕ್ಷತೆಯಿಂದ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:00 am, Fri, 12 August 22