ಬಾಗಲಕೋಟೆ, ಫೆ.25: ಕಂಚಿನ ಕಂಠದ ಮೂಲಕ ನೆರೆದ ಜನರನ್ನು ರಂಜಿಸುವ ಇವರ ಹೆಸರು ವೆಂಕಪ್ಪ ಸಂಬಾಜಿ ಸುಗತೇಕರ್(Venkappa Ambaji Sugatekar). ಮೂಲತಃ ಬಾಗಲಕೋಟೆ ನವನಗರ ನಿವಾಸಿಯಾಗಿರುವ ವೆಂಕಪ್ಪ ಅವರು, ಗೊಂದಲಿ ಪದ ಕಟ್ಟುವಲ್ಲಿ ನಿಸ್ಸಿಮರು. ವಂಶಪಾರಂಪರಿಕವಾಗಿ ಬಂದಿರುವ ಗೊಂದಲಿ ವೃತ್ತಿಯನ್ನು ಕಳೆದ 73 ವರ್ಷಗಳಿಂದ ಮಾಡುತ್ತಿದ್ದಾರೆ. 150 ಕ್ಕೂ ಹೆಚ್ಚು ಕಥೆಗಳನ್ನ ಹೇಳುವ, ಸಾವಿರಕ್ಕೂ ಅಧಿಕ ಹಾಡುಗಳನ್ನ ನಿರರ್ಗಳವಾಗಿ ಹಾಡಿರುವ 81 ವರ್ಷದ ವೆಂಕಪ್ಪರನ್ನು ಮನ್ ಕಿ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಗುಣಗಾನ ಮಾಡಿದ್ದಾರೆ. ಹೀಗಾಗಿ ವೆಂಕಪ್ಪನವರ ಮನೆಯಲ್ಲಿ ಸಂಭ್ರಮ ಹೆಚ್ಚುವಂತೆ ಮಾಡಿದೆ. ಇಡೀ ಕುಟುಂಬಸ್ಥರು ವೆಂಕಪ್ಪರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.
ಭಾರತದ ಸಂಸ್ಕೃತಿ, ಗಾಯನಗಳಿಗೆ ಲಕ್ಷಾಂತರ ಜನ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಬಾಗಲಕೋಟೆ ನಿವಾಸಿಯಾದ ವೆಂಕಪ್ಪ ಅಂಬಾಜಿ ಸುಗತೇಕರ್ ಅವರು ಸಾವಿರಕ್ಕೂ ಅಧಿಕ ಜನಪದ (ಗೊಂದಲಿ) ಹಾಡುಗಳನ್ನು ಹಾಡಿ ಜನಪ್ರಿಯರಾಗಿದ್ದಾರೆ. ಹಾಗೆಯೇ, ಸಾವಿರಾರು ಜನರಿಗೆ ಇವರು ಒಂದು ರೂಪಾಯಿಯನ್ನೂ ಪಡೆಯದೆ ಜನಪದ ಹಾಡುಗಳನ್ನು ಹಾಡುವುದನ್ನು ಕಲಿಸಿದ್ದಾರೆ. ಇವರ ಸೇವೆ ಶ್ಲಾಘನೀಯವಾಗಿದೆ” ಎಂದು ಮೋದಿ ಹೊಗಳಿದ್ದಾರೆ.
ತಮ್ಮ 81 ನೇ ವಯಸ್ಸಿನಲ್ಲೂ ಇಂದಿಗೂ ವೆಂಕಪ್ಪನವರು ಹಾಡೋಕೆ ನಿಂತರೆ ನೋಡುಗರನ್ನ ಮಂತ್ರ ಮುಗ್ಧರನ್ನಾಗಿಸುತ್ತಾರೆ. ದಾಸರ ಪದ, ಸಂತ ಶಿಶುನಾಳರ ಪದ, ವಚನ ಸಾಹಿತ್ಯ, ದೇವಿಯ ಪದಗಳು ಹೀಗೆ ಹಲವು ಪ್ರಕಾರದ ಹಾಡುಗಳನ್ನು ಗೊಂದಲಿ ಪದದ ಶೈಲಿ ಮೂಲಕ ಹಾಡಿ ಸಮಾಜದಲ್ಲಿನ ಗೊಂದಲಗಳನ್ನು ಹಾಡಿನ ಮೂಲಕ ವಿವರಿಸುತ್ತಾರೆ. 73 ವರ್ಷಗಳ ಸವೆಸಿದ್ದ ವೆಂಕಪ್ಪನವರಿಗೆ ಈಗಾಗಲೇ ಜನಪದ ವಿವಿಯಿಂದ ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.
ಇದನ್ನೂ ಓದಿ:ಮೋದಿ ಮೆಚ್ಚುಗೆಗೆ ಬಾಗಲಕೋಟೆಯ ಪದಗಾರ ವೆಂಕಪ್ಪ ಸುಗತೇಕರ್ ಫುಲ್ ಖುಷ್
ವಿಶೇಷ ಅಂದರೆ ವೆಂಕಪ್ಪನವರು ಶಾಲೆಗೆ ಹೋಗಿಲ್ಲ. ಬಡ ಕುಟುಂಬದಲ್ಲಿ ಬೆಳೆದ ವೆಂಕಪ್ಪನವರಿಗೆ ಗೊಂದಲಿ ಪದ ತಮ್ಮ ತಂದೆ ಮತ್ತು ತಾತನಿಂದ ಬಂದ ಬಳುವಳಿಯಾಗಿದೆ. ಹೀಗಾಗಿ ಓದಲು, ಬರೆಯಲು ಬಾರದ ವೆಂಕಪ್ಪನವರಿಗೆ ಜ್ಞಾಪಕ ಶಕ್ತಿಯೇ ಆಧಾರವಾಗಿದ್ದು, ಸಾವಿರಕ್ಕೂ ಅಧಿಕ ಹಾಡುಗಳನ್ನ ಚಾಚು ತಪ್ಪದೇ ಬಾಯಿ ಪಾಟದ ಮೂಲಕವೇ ಹಾಡಿ ಎಲ್ಲರ ಮೆಚ್ಚುಗೆ ಗಳಿಸುತ್ತಾರೆ. ಆಕಾಶವಾಣಿ, ದೂರದರ್ಶನ ಸೇರಿದಂತೆ ರಾಜ್ಯ, ಹೊರರಾಜ್ಯಗಳಲ್ಲೂ ಕಾರ್ಯಕ್ರಮ ನೀಡಿರುವ ಶ್ರೇಯ ಇವರಿಗೆ ಸಲ್ಲುತ್ತದೆ.
ಇದು ಕೇವಲ ವೆಂಕಪ್ಪನವರ ಕಾಲಕ್ಕೆ ಮುಗಿಯದೇ ಅವರ ಮಕ್ಕಳು, ಮೊಮ್ಮಕ್ಕಳಿಗೂ ವಿಸ್ತರಿಸಿದ್ದು ವಿಶೇಷವಾಗಿದೆ. ಅವರ ಮಕ್ಕಳು ಸಹ ಪದವಿಧರರಿದ್ದರೂ ಸರ್ಕಾರಿ ಕೆಲಸಕ್ಕಿಂತ ಮೂಲ ಗೊಂದಲಿ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡು, ತಂದೆಯ ಜೊತೆಗೆ ತಮ್ಮ ಪರಂಪರೆಯನ್ನ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ, ಒಂದಿನವೂ ಶಾಲೆಗೆ ಹೋಗದೇ, ಮೇಷ್ಟ್ರ ಪಾಠ ಕೇಳದೇ, ಎಂಬಿಬಿಎಸ್ ಸಹ ಓದದೇ, ತಮ್ಮ ವಂಶಪಾರಂಪರಿಕವಾಗಿ ಬಂದ ವೃತ್ತಿಯನ್ನೇ ಗೌರವಿಸಿ, ಶ್ರದ್ಧಾ ಭಕ್ತಿಯಿಂದ ಕಳೆದ 73 ವರ್ಷಗಳಿಂದ ಮುತ್ತಿನಂತ ಹಾಡು ಕಟ್ಟಿ, ಜನರನ್ನ ರಂಜಿಸುತ್ತಾ ಬಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:01 pm, Sun, 25 February 24