ಮನ್ ಕಿ ಬಾತ್ನಲ್ಲಿ ಬಾಗಲಕೋಟೆಯ ಗೊಂದಲಿ ಪದ ಹಾಡುಗಾರನ ಗುಣಗಾನ ಮಾಡಿದ ಮೋದಿ
ಪ್ರಧಾನಿ ನರೇಂದ್ರ ಮೋದಿಯವರು ಇಂದು (ಫೆ.25) ರಂದು 110ನೇ ಮನ್ ಕೀ ಬಾತ್ (ರೇಡಿಯೋ ಕಾರ್ಯಕ್ರಮ) ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಾಗಲಕೋಟೆಯ ಗೊಂದಲಿ ಪದ ಹಾಡುಗಾರ ವೆಂಕಪ್ಪ ಅಂಬಾಜಿ ಸುಗತೇಕರ್ ಅವರನ್ನು ಹೊಗಳಿದರು.
ಬಾಗಲಕೋಟೆ, ಫೆಬ್ರವರಿ 25: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇಂದು (ಫೆ.25) ರಂದು 110ನೇ ಮನ್ ಕೀ ಬಾತ್ (Mann Ki Baat) (ರೇಡಿಯೋ ಕಾರ್ಯಕ್ರಮ) ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಬಾಗಲಕೋಟೆಯ (Bagalakote) ಗೊಂದಲಿ ಪದ (Gondhali Pada) ಹಾಡುಗಾರ ವೆಂಕಪ್ಪ ಅಂಬಾಜಿ ಸುಗತೇಕರ್ (Venkappa Ambaji Sugtekr) ಅವರ ಗುಣಗಾನ ಮಾಡಿದರು.
“ಭಾರತದ ಸಂಸ್ಕೃತಿ, ಗಾಯನಗಳಿಗೆ ಲಕ್ಷಾಂತರ ಜನ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಬಾಗಲಕೋಟೆಯ ನವನಗರದ ನಿವಾಸಿಯಾಗಿರುವ ವೆಂಕಪ್ಪ ಅಂಬಾಜಿ ಸುಗತೇಕರ್ ಅವರು ಸಾವಿರಕ್ಕೂ ಅಧಿಕ ಜನಪದ (ಗೊಂದಲಿ) ಹಾಡುಗಳನ್ನು ಹಾಡಿ ಜನಪ್ರಿಯರಾಗಿದ್ದಾರೆ. ಹಾಗೆಯೇ, ಇವರು ಒಂದು ರೂಪಾಯಿಯನ್ನೂ ಪಡೆಯದೆ ಸಾವಿರಾರು ಜನರಿಗೆ ಜನಪದ ಹಾಡುಗಳನ್ನು ಹಾಡುವುದನ್ನು ಕಲಿಸಿದ್ದಾರೆ. ಇವರ ಸೇವೆ ಶ್ಲಾಘನೀಯವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ.
ಇದನ್ನೂ ಓದಿ: ಹಳ್ಳಿಗಳಲ್ಲಿರುವ ಪ್ರತಿಯೊಂದು ಮಹಿಳೆಯನ್ನೂ ಲಕ್ಷಾಧಿಪತಿಯನ್ನಾಗಿ ಮಾಡುವುದು ನಮ್ಮ ಧ್ಯೇಯ: ಮೋದಿ
81 ವರ್ಷರ ವೆಂಕಪ್ಪ ಸುಗತೇಕರ್ ಅವರು 150ಕ್ಕೂ ಹೆಚ್ಚು ಕಥೆ ಹೇಳುವ ಸಾವಿರಕ್ಕೂ ಅಧಿಕ ಗೊಂದಲಿ ಹಾಡುಗಳನ್ನು ಹಾಡಿದ್ದಾರೆ. ಕಳೆದ 71 ವರ್ಷಗಳಿಂದ ಗೊಂದಲಿ ಪದಗಳನ್ನು ಹಾಡುತ್ತಾ ಬಂದಿದ್ದಾರೆ. ವೆಂಕಪ್ಪ ಸುಗತೇಕರ್ ಅವರು ಶಾಲೆಯ ಮೆಟ್ಟಿಲು ಹತ್ತಿಲ್ಲ. ಆದರೆ ಈ ಕಲೆ ಅವರಿಗೆ ವಂಶ ಪಾರಂಪರ್ಯವಾಗಿ ಒಲಿದಿದೆ. ಗೊಂದಲಿ ಪದ ಸೇವೆಗೆ 2022ರಲ್ಲಿ ಜನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. 2012ರಲ್ಲಿ ರಾಜ್ಯ ಸರ್ಕಾರ “ರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಿದೆ. ವೆಂಕಪ್ಪ ಸುಗತೇಕರ್ ಅವರು ಆಕಾಶವಾಣಿ, ದೂರದರ್ಶನ ಸೇರಿದಂತೆ ರಾಜ್ಯ, ಅಂತರಾಜ್ಯದಲ್ಲಿ ಸಾವಿರಾರು ಕಾರ್ಯಕ್ರಮ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ