ಚಾಮರಾಜನಗರದ ಗ್ರಾಮೀಣ ಮಹಿಳೆ ವರ್ಷಾ ಜೀವನವನ್ನೇ ಬದಲಿಸಿತು ಮೋದಿ ಮನ್ ಕೀ ಬಾತ್
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಎಷ್ಟೋ ಮಂದಿಗೆ ಪ್ರೇರಣೆಯಾಗಿದೆ. ಮನ್ ಕೀ ಬಾತ್ನಿಂದಲೇ ಪ್ರೇರಣೆಗೊಂಡ ಚಾಮರಾಜನಗರದ ಮಹಿಳೆಯೊಬ್ಬರು ಕಸದಿಂದ ರಸ ಮಾಡಿದ್ದಾರೆ. ಯಶಸ್ವಿ ಉದ್ಯಮಿಯಾಗಿದ್ದಾರೆ. ಅಷ್ಟಕ್ಕೂ ಈ ಮಹಿಳೆ ಆರಂಭಿಸಿರುವ ಉದ್ಯಮವಾದರೂ ಯಾವುದು? ಇಲ್ಲಿದೆ ಓದಿ
ಚಾಮರಾಜನಗರ ನ.26: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮ ಜಗತ್ಪ್ರಸಿದ್ಧಿ. ಈ ಮನ್ ಕೀ ಬಾತ್ ಕಾರ್ಯಕ್ರಮ ಕೇಳಿ ಚಾಮರಾಜನಗರ (Chamrajnagar) ಜಿಲ್ಲೆಯ ವರ್ಷಾ ಎಂಬುವರು ಸ್ವಂತ ಉದ್ಯೋಗ ಆರಂಭಿಸಿದ್ದಾರೆ. ತಮ್ಮ ಮನ್ ಕೀ ಬಾತ್ ಕೇಳಿ ಸ್ವ ಉದ್ಯೋಗ ಆರಂಭಿಸಿರುವ ವರ್ಷಾ ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ನ.26) ತಮ್ಮ 107ನೇ ಮನ್ ಕಿ ಬಾತ್ (Mann Ki Baat) ಕಾರ್ಯಕ್ರದಲ್ಲಿ ಸ್ಮರಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ಮಹಿಳೆ ಆರಂಭಿಸಿರುವ ಉದ್ಯಮವಾದರೂ ಯಾವುದು? ಇವರ ಯಶಸ್ಸಿನ ಸಿಕ್ರೆಟ್ ಅನ್ನೋದು ಏನು ಅಂತ ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.
ಬಾಳೆ ದಿಂಡಿನಿಂದ ರಸವಾಯ್ತು ಬದುಕು
ರೈತರು ಬಾಳೆಗೊನೆ ಕೊಯ್ದು ನಂತರ ಬಾಳೆ ದಿಂಡು ಅನುಪಯುಕ್ತ ಎಂದು ಬಿಸಾಡುತ್ತಾರೆ. ಆದರೆ ಈ ಅನುಪಯುಕ್ತ ಬಾಳೆ ದಿಂಡಿನಿಂದ ಮ್ಯಾಟ್, ಫ್ಲೋರ್ ಮ್ಯಾಟ್, ಚಾಪೆ, ಬ್ಯಾಗ್, ಪರ್ಸ್ಗಳನ್ನು ತಯಾರಿಸಬಹುದು ಎಂಬುದನ್ನು ವರ್ಷಾ ಅವರು ತೋರಿಸಿಕೊಟ್ಟಿದ್ದಾರೆ. ಹೌದು ಇದು ಯುವ ಉದ್ಯಮಿಯೊಬ್ಬರ ಯಶೋಗಾಥೆ ಅಂದ್ರೆ ಅತಿಶಯೋಕ್ತಿಯಲ್ಲ. ಚಾಮರಾಜಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಆಲಹಳ್ಳಿ ಗ್ರಾಮದ ವರ್ಷಾ ಎಂಟೆಕ್ ಪದವೀಧರೆ. ಇವರು ಯಾವುದೇ ಉದ್ಯೋಗಕ್ಕೆ ಸೇರದೆ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎಂಬ ಛಲ ಹೊಂದಿದ್ದ ಅವರಿಗೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟವಿರಲಿಲ್ಲ.
ಸ್ವ ಉದ್ಯಮ ಪ್ರಾರಂಭಿಸಬೇಕು, ತಮ್ಮ ಕೈಲಾದಷ್ಟು ಮಹಿಳೆಯರಿಗೆ ಉದ್ಯೋಗ ನೀಡಬೇಕು ಆ ಮೂಲಕ ಸ್ತ್ರೀ ಸಬಲೀಕರಣಕ್ಕೆ ಕೈ ಜೋಡಿಸಬೇಕು ಎಂದು ಕನಸು ಹೊತ್ತಿದ್ದ ವರ್ಷಾ ಅವರು ಯೂಟ್ಯೂಬ್ನಲ್ಲಿ ಸರ್ಚ್ ಮಾಡುತ್ತಿದ್ದರು. 2019ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ನಲ್ಲಿ ಪ್ರಸ್ತಾಪಿಸಿದ್ದ ವಿಚಾರವೊಂದು ಗಮನ ಸೆಳೆದಿದೆ. ಅನುಪಯುಕ್ತ ಬಾಳೆ ದಿಂಡಿನಿಂದ ಹಲವು ರೀತಿಯ ಉಪಯುಕ್ತ ವಸ್ತುಗಳನ್ನು ತಯಾರಿಸಬಹುದು ಎಂದು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಕಾರ್ಖಾನೆಯನ್ನು ಪ್ರಧಾನಿ ಮೋದಿಯವರು ಉದಾಹರಿಸಿದರು.
ಇದರಿಂದ ಪ್ರೇರಣೆಗೊಂಡ ವರ್ಷಾ ಅವರು ತಾವೇಕೆ ಪ್ರಯತ್ನಿಸಿಸಬಾರದು ಎಂದು ಯೂಟ್ಯೂಬ್ನಲ್ಲಿ ಸರ್ಚ್ ಮಾಡಿದಾಗ ತಮಿಳುನಾಡಿನ ಕೊಯಮತ್ತೂರಿನಲ್ಲಿ ತಾಯಾರಗುವ ಬಾಳೆ ದಿಂಡಿನ ಉತ್ಪನ್ನಗಳ ಬಗ್ಗೆ ಮತ್ತಷ್ಟು ತಿಳಿದುಕೊಂಡರು. ವರ್ಷಾ ಅವರ ಕುಟುಂಬ ಮೂಲತಃ ವ್ಯವಸಾಯವನ್ನೇ ನೆಚ್ಚಿಕೊಂಡಿದೆ. ಇವರ ಕುಟುಂಬ ಕೂಡ ಬಾಳೆ ಹಣ್ಣು ಬೆಳೆಯುತ್ತಿದ್ದು, ಇವರ ಕೃಷಿಗೆ ಈ ಉದ್ಯಮ ಪೂರಕವಾಗಿದೆ ಎಂದು ಇದರಲ್ಲಿ ಕೈ ಹಾಕಿದರು. ಬಳಿಕ ಕೊಯಮತ್ತೂರಿನಿಂದ 3 ಲಕ್ಷ ರೂ.ಗೆ ಯಂತ್ರೋಪಕರಣಗಳನ್ನ ಖರೀದಿಸಿ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಬಾಳೆ ದಿಂಡು ಉತ್ಪನ್ನಗಳ ತಯಾರಿಕಾ ಉದ್ಯಮ ಆರಂಭಿಸಿದರು.
ಇದನ್ನೂ ಓದಿ: ಪಿಎಂ ಮನ್ ಕೀ ಬಾತ್ನಲ್ಲಿ ಹೊಯ್ಸಳರ ದೇವಸ್ಥಾನ, ಜಿ20, ಚಂದ್ರಯಾನ ಪ್ರಸ್ತಾಪಿಸಿದ ನರೇಂದ್ರ ಮೋದಿ
ವರ್ಷ ಅವರು ಬಾಳೆ ದಿಂಡನ್ನು ಅಕ್ಕ-ಪಕ್ಕದ ರೈತರಿಂದ ಖರೀದಿಸಲು ಆರಂಭಿಸಿದರು. ಪ್ರತಿ ಬಾಳೆ ದಿಂಡುಗೆ 8 ರಿಂದ 10 ರೂ. ನೀಡಿ ಖರೀದಿಸುತ್ತಿದ್ದಾರೆ. ಹೀಗೆ ಸಂಗ್ರಹಿಸಿದ ಬಾಳೆ ದಿಂಡುಗಳಿಂದ ನಾರು ತೆಗೆದು ಅದರಿಂದ ಕೈಚೀಲ, ಯೋಗಾ ಮ್ಯಾಟ್, ಚಾಪೆ ಹಾಗೂ ಇತ್ಯಾದಿ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಬಾಳೆ ದಿಂಡಿನಲ್ಲಿರುವ ರಸದಲ್ಲಿ ಪೊಟ್ಯಾಷಿಯಂ ಅಂಶ ಇರುವುದರಿಂದ ಅದನ್ನು ಬೀಸಾಡದೆ ರಾಸಾಯನಿಕ ಗೊಬ್ಬರದ ಬದಲು ಬಾಳೆ ದಿಂಡಿನ ರಸ ಹಾಗೂ ದಿಂಡಿನಿಂದ ನಾರು ತೆಗೆದ ನಂತರ ಉಳಿಯುವ ಕೊನೆಗೆ ಉಳಿಯುವ ವೇಸ್ಟ್ನಿಂದ ಸಾವಯವ ಗೊಬ್ಬರ ತಯಾರಿಸಿ ಅದನ್ನೇ ತಮ್ಮ ಜಮೀನಿಗೆ ಬಳಸುತ್ತಿದ್ದಾರೆ.
ವರ್ಷಾ ಅವರ ಘಟಕದಲ್ಲಿ ಪ್ರಾರಂಭದಲ್ಲಿ ಮೂವರು ಮಹಿಳೆಯರು ಕೆಲಸ ಮಾಡುತ್ತಿದ್ದರು. ಇದೀಗ 8 ಜನ ಗ್ರಾಮೀಣ ಮಹಿಳೆಯರು ಇವರ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ವರ್ಷಾ ಅವರು ಚಾಮರಾಜನಗರದ ಮೂರು ಅಂಗಡಿಗಳಿಗೆ ಈ ಉತ್ಪನ್ನಗಳನ್ನು ಸಪ್ಲೈ ಮಾಡುತ್ತಾರೆ. ಅಲ್ಲದೆ ಮೇಳಗಳಿದ್ದರೇ ಅಲ್ಲಿಯೂ ಸ್ಟಾಲ್ ಹಾಕಿ ಮಾರುತ್ತಾರೆ. ಇವರ ಉತ್ಪನ್ನಗಳಿಗೆ ಚಾಮರಾಜನಗರ ಕೆವಿಕೆ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೆ ಆರ್ಗ್ಯಾನಿಕ್ ಶಾಪ್, ಗೂಗಲ್, ಫ್ಲಿಪ್‌ಕಾರ್ಟ್, ಅಮೆಜಾನ್ನಂತಹ ಆನ್ಲೈನ್ ಮಾರುಕಟ್ಟೆಯಲ್ಲೂ ಇವರ ಉತ್ಪನ್ನಗಳು ಮಾರಾಟವಾಗುತ್ತಿವೆ.
ಇವರು ತಯಾರಿಸುತ್ತಿರುವ ಬಾಳೆದಿಂಡಿನ ಚಾಪೆಗಳನ್ನು ಕೊಯಮತ್ತೂರಿನ ಕಂಪನಿಯೊಂದು ಖರೀದಿಸುತ್ತಿದ್ದು, ಬಾಳೆದಿಂಡಿನಿಂದ ತಯಾರಿಸಲಾದ ವಸ್ತುಗಳು ಪರಿಸರ ಸ್ನೇಹಿ ಆಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಮೈಸೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿರುವ ಪತಿ ಶ್ರೀಕಂಠಸ್ವಾಮಿ ಅವರು ರಜಾ ದಿನಗಳಲ್ಲಿ ಬಾಳೆ ದಿಂಡಿನ ಉತ್ಪನ್ನಗಳನ್ನು ತಯಾರಿಸುವ ಕೆಲಸದಲ್ಲಿ ನಿರತರವಾಗಿ ತಮ್ಮ ಪತ್ನಿಯ ಕಾರ್ಯಕ್ಕೆ ಸಾಥ್ ನೀಡುತ್ತಿದ್ದಾರೆ.
ಸಣ್ಣದಾಗಿ ಆರಂಭಗೊಂಡ ಉದ್ಯಮ ಬೆಳೆಯುತ್ತಾ ಸಾಗಿದೆ. ಮುಂದೆಯೂ ಕೂಡ ಸುತ್ತಮುತ್ತಲಿನ ಗ್ರಾಮದ ಮಹಿಳೆಯರಿಗೆ ಉದ್ಯೋಗ ಒದಗಿಸಿಕೊಡಬೇಕೆಂಬುದು ವರ್ಷಾ ಅವರ ಕನಸಾಗಿದೆ. ಇದಕ್ಕೆ ಅವರ ಕುಟುಂಬ ಕೂಡ ಸಾಥ್ ಕೊಡುತ್ತಿದೆ. ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ವಿದ್ಯಾವಂತ ಮಹಿಳೆಯೊಬ್ಬರು ಯಶಸ್ವಿ ಉದ್ಯಮಿಯಾಗಲು ನಿಜಕ್ಕೂ ಪ್ರೇರಣೆ ನೀಡಿದೆ ಎಂದರೆ ತಪ್ಪಾಗಲಾರದು.
ಒಟ್ಟಿನಲ್ಲಿ ಯೂಟ್ಯೂಬ್ನಲ್ಲಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಇವರು ಉದ್ಯಮಿಯಾಗಿ ಬೆಳೆಯುವ ಆಸೆ ಚಿಗುರುಡೆಸಿತ್ತು. ಈ ಆಸೆ ಕನಸು ಬೆಳೆದು ಇಂದು ಅನೇಕ ಮಹಿಳೆಯರಿಗೆ ಉದ್ಯೋಗ ನೀಡುವ ಜೊತೆಗೆ ಸ್ವಯಂ ಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ವರ್ಷಾ ಮಾದರಿಯಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Sun, 26 November 23