
ಬಾಗಲಕೋಟೆ, ನವೆಂಬರ್ 13: ಪ್ರತಿ ಟನ್ ಕಬ್ಬಿಗೆ 3,500 ರೂ. ಘೋಷಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು (Sugarcane Farmers Protest) ನಡೆಸಿರುವ ಹೋರಾಟ ಮತ್ತಷ್ಟು ತೀವ್ರ ಸ್ವರೂಪಕ್ಕೆ ತಿರುಗಿದೆ. ಜಿಲ್ಲೆಯ ಮುಧೋಳ ತಾಲೂಕಿನ ಸೈದಾಪುರ ಗ್ರಾಮದ ಸಮೀರವಾಡಿಯ ಗೋದಾವರಿ ಕಾರ್ಖಾನೆ ಬಳಿ ಸಾಲಾಗಿ ನಿಲ್ಲಿಸಿದ್ದ 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ (fire) ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಧಗಧಗಿಸಿದ್ದ ಕಬ್ಬಿನ ಜ್ವಾಲೆ ತಣ್ಣಗಾಗುತ್ತಿದ್ದಂತೆ ಬಾಗಲಕೋಟೆಯ ಮುಧೋಳದಲ್ಲಿ ಕಬ್ಬು ಕಿಡಿ ಹೊತ್ತಿಕೊಂಡಿತ್ತು. ಸರ್ಕಾರ ನಿಗದಿ ಪಡಿಸಿದ 3300 ರೂಪಾಯಿಗೆ ವಿರೋಧ ವ್ಯಕ್ತಪಡಿಸಿದ್ದ ಮುಧೋಳ ರೈತರು ಕಳೆದೊಂದು ವಾರದಿಂದ ಪ್ರತಿಭಟನೆ ನಡೆಸಿದ್ದರು. ಇಂದು ಮುಧೋಳ ಪಟ್ಟಣವನ್ನ ಬಂದ್ ಮಾಡಿದ್ದರು. ಸಕ್ಕರೆ ಕಾರ್ಖಾನೆ ಮಾಲೀಕರೇ ಮಾತುಕತೆ ಬರಬೇಕು. ಪ್ರತಿ ಟನ್ ಕಬ್ಬಿಗೆ 3 ಸಾವಿರದ 500 ರೂಪಾಯಿ ನೀಡಬೇಕು ಅಂತಾ ಪಟ್ಟು ಹಿಡಿದಿದ್ದರು. ಆದರೆ ಇಂದು ಆಕ್ರೋಶದ ಕಟ್ಟೆ ಹೊಡೆದಿದೆ.
ಇದನ್ನೂ ಓದಿ: ಕಬ್ಬಿನ ಜಾಲ್ವೆ: ಕಬ್ಬು ತುಂಬಿದ ಟ್ರಾಕ್ಟರ್ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ
ನಮ್ಮ ಜೊತೆಗೆ ಕಾರ್ಖಾನೆ ಮಾಲೀಕರು ಮಾತುಕತೆಗೆ ಬಂದಿಲ್ಲ ಅಂತಾ ಕೆಲ ರೈತರು ಸಿಟ್ಟಾಗಿದ್ದರು. ಸಮೀರವಾಡಿ ಬಳಿಯ ಗೋದಾವರಿ ಕಾರ್ಖಾನೆ ಮೆರವಣಿಗೆ ಹೊರಟಿದ್ದರು. ಬೆಳಗ್ಗೆಯಿಂದಲೇ ಟ್ರ್ಯಾಕ್ಟರ್ ರ‍್ಯಾಲಿ ಮಾಡಿದ್ದರು. ಸಮೀರವಾಡಿಯ ಗೋಧಾವರಿ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಲು ಹೊರಟಿದ್ದರು. ಆಗ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನ ಕಂಡು ಅದನ್ನ ನೆಲಕ್ಕುರುಳಿಸಿ ಬೆಂಕಿ ಹಚ್ಚಿದ್ದಾರೆ.
ಘಟನೆ ಬಗ್ಗೆ ಟಿವಿ9 ಜೊತೆ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಮಾತನಾಡಿದ್ದು, ಇದು ರೈತರು ಮಾಡಿರುವ ಕೆಲಸ ಅಲ್ಲ. ಕೆಲ ಕಿಡಿಗೇಡಿಗಳು ಮಾಡಿರುವ ಕೆಲಸ. ಜಿಲ್ಲಾ ಸಚಿವರು ಮೂರು ದಿನದಿಂದ ಮುಧೋಳದಲ್ಲಿದ್ದಾರೆ. ರೈತರು-ಕಾರ್ಖಾನೆಗಳ ಜೊತೆ ಮಾತುಕತೆ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲೂ ಕೂಡ ರೈತರು ಹೀಗೆ ಮಾಡಿಲ್ಲ, ಹಾಗಾಗಿ ಇದು ರೈತರ ಹೆಸರಲ್ಲಿ ಕಿಡಿಗೇಡಿಗಳು ಮಾಡಿದ್ದು ಎಂದಿದ್ದಾರೆ.
ಇದನ್ನೂ ಓದಿ: ರೈತರ ಕಷ್ಟ ಗೊತ್ತೇನ್ರೀ? ಎಸಿ ರೂಮಲ್ಲಿ ಕುಳಿತುಕೊಂಡು ರೈತರ ಕಷ್ಟ ಕೇಳೋ ರಾಜಕಾರಣಿಗಳಿಗೆ ವಿದ್ಯಾರ್ಥಿನಿ ಖಡಕ್ ಪ್ರಶ್ನೆ
ಪೊಲೀಸರ ತನಿಖೆಯಿಂದ ಎಲ್ಲವೂ ಹೊರಗೆ ಬರಲಿದೆ. ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳುತ್ತಾರೆ. ಕಬ್ಬು ಬೆಳೆಗಾರರಿಗೆ ಸರ್ಕಾರ ಹೆಚ್ಚಿನ ಹಣ ಕೊಟ್ಟಿದೆ. ಇದಕ್ಕಿಂತ ಮೇಲೆ ಸರ್ಕಾರ ಇನ್ನೇನು ಮಾಡೋಕಾಗಲ್ಲ. ಇಡೀ ರಾಜ್ಯದ ಕಬ್ಬು ಬೆಳೆಗಾರರೇ ಒಪ್ಪಿಕೊಂಡಿದ್ದಾರೆ. ಮುಧೋಳ ಕಬ್ಬು ಬೆಳೆಗಾರರು ಸರ್ಕಾರದ ನಿರ್ಧಾರ ಒಪ್ಪವಂತೆ ಕಬ್ಬು ಬೆಳೆಗಾರರಿಗೆ ಮನವಿ ಮಾಡಿದರು.
ಸರ್ಕಾರ ಏನ್ಮಾಡಬೇಕು ಎಲ್ಲ ಮಾಡಿದೆ. ಯಾರದ್ದೋ ಮನಸ್ಸಿನಲ್ಲಿ ಅಸೂಯೆ ಇರಬೇಕು. ರೈತರಾದವರು ಯಾರೂ ಕೂಡ ಈ ರೀತಿ ಮಾಡುವುದಿಲ್ಲ. ಇತಿಹಾಸದಲ್ಲಿ ಯಾವ ಸರ್ಕಾರ ಕೊಡದ ದರ ನಾವು ಕೊಟ್ಟಿದ್ದೇವೆ. ರಾಜ್ಯದಲ್ಲಿ ಇಡೀ ರೈತ ಸಂಕುಲ ತುಂಬಾ ಸಂತೋಷದಿಂದ ಇದೆ. ಆದರೆ, ಇದು ಕೆಲವು ಕಿಡಿಗೇಡಿಗಳು ಮಾಡಿರುವ ಕೆಲಸ ಎಂದು ಅವರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ದೂರವಾಣಿ ಮೂಲಕ ಬಾಗಲಕೋಟೆ ಡಿಸಿ, ಎಸ್‌ಪಿರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರ ಜೊತೆಯೂ ಫೋನ್‌ನಲ್ಲಿ ಚರ್ಚೆ ಮಾಡಿದ್ದು, ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸಿಎಂ ಸೂಚಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:16 pm, Thu, 13 November 25