ಬಾಗಲಕೋಟೆ: ಗ್ರಾಮ ಪಂಚಾಯಿತಿಗಳು ಅಂದರೆ ಗ್ರಾಮೀಣ ಭಾಗದ ಜನರ ಅಭಿವೃದ್ದಿಗಾಗಿ ಅವರ ಸಮಸ್ಯೆ ಸರಿಪಡಿಸೋದಕ್ಕೆ ಇದ್ದ ಸ್ಥಳೀಯ ಸಂಸ್ಥೆ. ಆದರೆ ಕೆಲವೊಂದು ಗ್ರಾಮಪಂಚಾಯಿತಿ ಸಿಬ್ಬಂದಿಯಿಂದ ಬೇಕಾಬಿಟ್ಟಿ ವರ್ತನೆ ನಡೆಯುತ್ತಲೇ ಇದೆ. ಇಂದಿಗೂ ತಮ್ಮ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಗ್ರಾ.ಪಂಗೆ ದಿನಾಲು ಅಲೆದಾಡಬೇಕಾಗಿದೆ. ಇಂತಹ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಕಂದಗಲ್ ಗ್ರಾಮಪಂಚಾಯಿತಿ. ಹೌದು ಇಲ್ಲಿ ಸಿಬ್ಬಂದಿ ಆಡಿದ್ದೇ ಆಟ ಮಾಡಿದ್ದೆ ಕಾರುಬಾರು ಎಂಬಂತಾಗಿದೆ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪಂಚಾಯಿತಿಗೆ ಬಂದರೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಎಂದೂ ಸಿಗೋದಿಲ್ಲ. ಇದರಿಂದ ಪಂಚಾಯಿತಿ ಯಾಕೆ ಬೇಕು ಎಂಬ ಪ್ರಶ್ನೆ ಎದುರಾಗಿದೆ.
ಗ್ರಾ.ಪಂ ಸಿಬ್ಬಂದಿಗಾಗಿ ಕಾದು ಕೂತ ಗ್ರಾಮೀಣ ಕೂಲಿಕಾರ ಮಹಿಳೆಯರು
ಗ್ರಾಮ ಪಂಚಾಯಿತಿ ಮೂಲಕ ಗ್ರಾಮೀಣ ಭಾಗದ ಜನರಿಗೆ ಎಮ್ಎನ್ಆರ್ಇಜಿ ಕೂಲಿ ಕೆಲಸ ಕೊಡಬೇಕು. ಆದರೆ ಕಂದಗಲ್ ಗ್ರಾ.ಪಂ ಸಿಬ್ಬಂದಿ ಕೆಲಸ ಕೇಳಿ ಗ್ರಾಮೀಣ ಕೂಲಿಕಾರರು ಪಂಚಾಯಿತಿಗೆ ಬಂದರೆ ಅವರಿಗೆ ಭೇಟಿಯೇ ಆಗೋದಿಲ್ಲವಂತೆ. ಇದರಿಂದ ಸಿಬ್ಬಂದಿಗಾಗಿ ಕಾದು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.
“ಬೆಳಿಗ್ಗೆಯಿಂದ ಕಾದು ಕೂತಿದ್ದೇವೆ, ಇದುವರೆಗೂ ಯಾರು ಬಂದಿಲ್ಲ. ಕಂದಗಲ್ ಗ್ರಾ.ಪಂ ಸಿಬ್ಬಂದಿ ಎಂದೂ ಸರಿಯಾಗಿ ಪಂಚಾಯಿತಿಗೆ ಬರೋದಿಲ್ಲ. ನಮಗೆ ಸಮಯಕ್ಕೆ ಸರಿಯಾಗಿ ಎಮ್ಎನ್ಆರ್ಇಜಿ ಕೆಲಸ ಕೂಡ ನೀಡುತ್ತಿಲ್ಲ” ಎಂದು ಗ್ರಾಮದ ಮಹಿಳೆ ನೀಲವ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾ.ಪಂ ಉಪಾಧ್ಯಕ್ಷನಿಗೆ ಕರೆ ಮಾಡಿದರೆ ಬೇಜವಾಬ್ದಾರಿ ಉತ್ತರ
ಇನ್ನು ಇಲ್ಲಿ ಗ್ರಾ.ಪಂ ಆಡಳಿತ ಮಂಡಳಿಯೂ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ ಎಂಬುದಕ್ಕೆ ಆಡಿಯೊ ಸಂಭಾಷಣೆ ಸಾಕ್ಷಿಯಾಗಿದೆ. ಗ್ರಾಮಸ್ಥರೊಬ್ಬರು ಪಂಚಾಯಿತಿಯಲ್ಲಿ ಯಾವುದೇ ಸಿಬ್ಬಂದಿಯಿಲ್ಲ ಎಂದು ಕರೆ ಮಾಡಿದರೆ ಉಪಾಧ್ಯಕ್ಷ ಅಮಾತೆಪ್ಪ ಯರದಾಳ, ಇಲ್ಲದಿದ್ದರೆ ನಾನೇನು ಮಾಡಬೇಕು ಎಂದು ಬೇಜವಾಬ್ದಾರಿ ಉತ್ತರ ನೀಡಿದ ಆಡಿಯೊ ಇವರ ಕಾರ್ಯವೈಖರಿ ಹೇಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕಂದಗಲ್ ಗ್ರಾ.ಪಂ ಸಿಬ್ಬಂದಿ ದಿವ್ಯ ನಿರ್ಲಕ್ಷ್ಯದ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಸರಿಯಾದ ಸಮಯಕ್ಕೆ ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ.