ಕೆ.ಎಸ್.ಈಶ್ವರಪ್ಪ ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿ, ನಮ್ಮ ರಾಜ್ಯದಲ್ಲಿ ಹೀಗೆಲ್ಲ ಆಗೋದಿಲ್ಲವೆಂದ ತೆಲಂಗಾಣ ಸಿಎಂ; ಹಿಜಾಬ್ ವಿವಾದದ ಬಗ್ಗೆಯೂ ಟೀಕೆ
ರಾಜ್ಯದ ವಿಧಾನಸಭೆಯಲ್ಲಿ ಮಾತನಾಡಿದ್ದ ಕೆಸಿಆರ್, ಹಿಜಾಬ್ ವಿವಾದವನ್ನು ಎತ್ತಾಡುವ ಮೂಲಕ ಕರ್ನಾಟಕ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದರು. ಯಾರೇನು ಉಡುಪು ಧರಿಸುತ್ತಾರೆ ಎಂಬುದಕ್ಕೂ, ಸರ್ಕಾರಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿದ್ದರು.
ಹೈದರಾಬಾದ್: ಇತ್ತೀಚೆಗೆ ಕರ್ನಾಟಕದಲ್ಲಿ ಬಿಜೆಪಿ ನಾಯಕ ಈಶ್ವರಪ್ಪ ತಮ್ಮ ಸಚಿವ ಸ್ಥಾನ ಕಳೆದುಕೊಂಡಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಈಶ್ವರಪ್ಪನವೇ ಕಾರಣ ಎಂಬ ಆರೋಪ ಕೇಳಿಬಂದಿದ್ದೇ ಅವರು ಸಚಿವ ಸ್ಥಾನ ಕಳೆದುಕೊಳ್ಳಲು ಕಾರಣ. ಹೀಗೆ ಈಶ್ವರಪ್ಪನವರು ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಇಲಾಖೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ವಿಚಾರದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ಇತ್ತೀಚೆಗೆ ಒಬ್ಬರು ಸಚಿವರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ಕಾರಣವೇನು ಎಂಬುದನ್ನೂ ನಾವು ನೋಡಿದ್ದೇವೆ. ಆದರೆ ಇಂಥ ಘಟನೆಗಳು ತೆಲಂಗಾಣದಲ್ಲಿ ಯಾವತ್ತಿಗೂ ನಡೆಯುವುದಿಲ್ಲ ಎಂದಿದ್ದಾರೆ.
ಕೆ.ಸಿ.ಚಂದ್ರಶೇಖರ್ ರಾವ್ ಅವರು ಏಪ್ರಿಲ್ 27ರಂದು ನಡೆದ ಟಿಆರ್ಎಸ್ ಸಂಸ್ಥಾಪನಾ ದಿನದ ಸಮಗ್ರ ಸಭೆಯಲ್ಲಿ ಈ ಮಾತುಗಳನ್ನಾಡಿದ್ದಾರೆ. ಅದಕ್ಕೂ ಪೂರ್ವ ಮಂಗಳವಾರ ರಾಜ್ಯದ ವಿಧಾನಸಭೆಯಲ್ಲಿ ಮಾತನಾಡಿದ್ದ ಕೆಸಿಆರ್, ಹಿಜಾಬ್ ವಿವಾದವನ್ನು ಎತ್ತಾಡುವ ಮೂಲಕ ಕರ್ನಾಟಕ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದರು. ಯಾರೇನು ಉಡುಪು ಧರಿಸುತ್ತಾರೆ ಎಂಬುದಕ್ಕೂ, ಸರ್ಕಾರಕ್ಕೂ ಏನು ಸಂಬಂಧ? ಈ ಹಿಜಾಬ್ ವಿವಾದ ಯಾಕೆ ಬೇಕು? ಈಗಾಗಲೇ ಉಂಟಾಗಿರುವ ಸಂಘರ್ಷ, ವಿವಾದದ ವಾತಾವರಣವನ್ನು ಇನ್ನಷ್ಟು ಉತ್ತೇಜಿಸುವುದ ಯಾಕೆ ಎಂದು ಪ್ರಶ್ನಿಸಿದ್ದರು. ಅಷ್ಟೇ ಅಲ್ಲ, ಭಾರತೀಯ ಜನತಾ ಪಾರ್ಟಿ ಸಮಾಜದ ಸೌಹಾರ್ದತೆ ಕದಡುತ್ತಿದೆ ಎಂದೂ ಆರೋಪಿಸಿದ್ದರು.
ಕರ್ನಾಟಕದಲ್ಲಿ ಈ ವರ್ಷದ ಜನವರಿಯಿಂದ ಪ್ರಾರಂಭವಾಗಿರುವ ಹಿಜಾಬ್ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಇಸ್ಲಾಂನಲ್ಲಿ ಹಿಜಾಬ್ ಅತ್ಯಗತ್ಯ ಅಂಶವಲ್ಲ. ಶಿಕ್ಷಣ ಸಂಸ್ಥೆಗಳು ನಿಗದಿ ಪಡಿಸಿದ ಸಮವಸ್ತ್ರವನ್ನೇ ವಿದ್ಯಾರ್ಥಿಗಳು ಧರಿಸಬೇಕು ಹೈಕೋರ್ಟ್ ತೀರ್ಪು ನೀಡಿದ್ದರೂ, ಇನ್ನೂ ಕೂಡ ಕೆಲವು ವಿದ್ಯಾರ್ಥಿಗಳು ಹಿಜಾಬ್ಗಾಗಿ ಪರೀಕ್ಷೆಯನ್ನು ಬಿಟ್ಟು ಹೋಗುತ್ತಿದ್ದಾರೆ. ಈ ಹಿಜಾಬ್ನಿಂದ ಶುರುವಾದ ಗಲಾಟೆ ಹಲಾಲ್, ಹಿಂದು-ಮುಸ್ಲಿಂ ವ್ಯಾಪಾರ ನಿಷೇಧ ಇತ್ಯಾದಿ ವಿವಿಧ ಕೋಮು ಸಂಘರ್ಷದವರೆಗೆ ಬಂದು ನಿಂತಿದೆ. ಇನ್ನು ರಾಷ್ಟ್ರಾದ್ಯಂತ ವಿವಿಧ ರಾಜ್ಯಗಳಲ್ಲಿ ಈ ಹಿಂದು-ಮುಸ್ಲಿಂ ಜಟಾಪಟಿ ನಡೆಯುತ್ತಿದೆ.
ಇದನ್ನೂ ಓದಿ: ಖಾರಿಫ್ ಋತುವಿನಲ್ಲಿ ರಸಗೊಬ್ಬರಕ್ಕೆ ₹60,939 ಕೋಟಿ ಸಬ್ಸಿಡಿ; ಕೇಂದ್ರ ಸಂಪುಟ ಸಭೆ ಒಪ್ಪಿಗೆ
Published On - 1:13 pm, Thu, 28 April 22