ಬದಾಮಿಯಿಂದಲೇ ಮತ್ತೆ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕ್ಷೇತ್ರದ ಕೈ ಮುಖಂಡರ ಒತ್ತಾಯ

| Updated By: ವಿವೇಕ ಬಿರಾದಾರ

Updated on: Dec 02, 2022 | 10:46 PM

ವಿಪಕ್ಷ ನಾಯಕ ಸಿದ್ದರಾಮಯ್ಯ ಬದಾಮಿಯಿಂದಲೇ ಸ್ಪರ್ಧರಿಸುವಂತೆ ಬದಾಮಿ ಕಾಂಗ್ರೆಸ್​ ನಾಯಕರು ಒತ್ತಾಯಿಸುತ್ತಿದ್ದು, ಈ ಬಾರಿ ಹಿಂದಿನದಕ್ಕಿಂತ ಅಧಿಕ ಮತಗಳಿಂದ ಗೆಲ್ಲಿಸುವುದಾಗಿ ಭರವಸೆ ನೀಡಿದ್ದಾರೆ.

ಬದಾಮಿಯಿಂದಲೇ ಮತ್ತೆ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕ್ಷೇತ್ರದ ಕೈ ಮುಖಂಡರ ಒತ್ತಾಯ
ಬದಾಮಿ ಕಾಂಗ್ರೆಸ್ ಮುಖಂಡರು
Follow us on

ಮಾಜಿ ಸಿಎಂ ಸಿದ್ದರಾಮಯ್ಯ ಮುಂದಿನ ವಿಧಾನಸಭೆ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎನ್ನೋದು ಇದೀಗ ರಾಜಕೀಯ ಕ್ಷೇತ್ರದಲ್ಲಿ ಬಹು ಚರ್ಚಿತ ವಿಷಯವಾಗಿದೆ. ತಮಗೆ ರಾಜಕೀಯ ಪುನರ್ ಜನ್ಮ ನೀಡಿರುವ ಬಾದಾಮಿಯೋ, ಹೊಸದಾಗಿ ಕೋಲಾರಕ್ಕೆ ಹೋಗುತ್ತಾರೋ ಅಥವಾ ಸೇಫ್ ಎನ್ನಲಾದ ವರುಣಾದಿಂದಲೇ ಅಖಾಡಕ್ಕೆ ಇಳಿಯುತ್ತಾರೋ ಎನ್ನುವ ಚರ್ಚೆ ನಡೆಯುತ್ತಲೇ ಇದೆ. ಈ ಮಧ್ಯೆ ಬಾದಾಮಿ ಕ್ಷೇತ್ರದ ವಿಚಾರವಾಗಿ ಈವರೆಗೂ ಮೌನವಾಗಿಯೇ ಉಳಿದಿದ್ದ ಬಾಗಲಕೋಟೆ ಜಿಲ್ಲೆಯ ಕೈ ನಾಯಕರು ಇದೀಗ ಮೊದಲ ಬಾರಿಗೆ ಬಾಯಿ ಬಿಟ್ಟಿದ್ದಾರೆ. ಕಳೆದ ಸಲ ಪಟ್ಟು ಹಿಡಿದು ಕರೆ ತಂದು ಬಾದಾಮಿಗೆ ನಿಲ್ಲಿಸಿದ್ದ ಜಿಲ್ಲೆಯ ಮುಖಂಡರು ಈಗ ಏನಂತಾರೆ….

ಕಾಂಗ್ರೆಸ್ ಮಾತ್ರವಲ್ಲದೇ ಎಲ್ಲ ರಾಜಕೀಯ ಪಕ್ಷಗಳಲ್ಲಿ ಟಗರು ಸಿದ್ದರಾಮಯ್ಯ 2023ರ ವಿಧಾನಸಭೆ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂದು ಕುತೂಹಲದಿಂದ ಕಾಯುತ್ತಾ ಇದ್ದಾರೆ. ಕಳೆದ ಸಲ ಚಾಮುಂಡಿಯಲ್ಲಿ ಮುಗ್ಗರಿಸಿದ್ದ ಸಿದ್ದರಾಮಯ್ಯ ಈ ಸಲ ಮಾತ್ರ ಅಳೆದು ತೂಗಿ ಕ್ಷೇತ್ರ ಆಯ್ಕೆ ಕಡೆಗೆ ಒತ್ತುಕೊಟ್ಟಿದ್ದಾರೆ. ತಮಗೆ ರಾಜಕೀಯ ಪುನರ್​​ಜನ್ಮ ನೀಡಿದ್ದ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದನ್ನು ಬಹುತೇಕ ಕೈಬಿಟ್ಟಂತಿರುವ ಸಿದ್ದರಾಮಯ್ಯ, ಕೋಲಾರ, ವರುಣಾ ರೌಂಡ್ ಹೊಡೆಯುತ್ತಿದ್ದಾರೆ.

ಆದರೆ, ರಾಜಕೀಯ ಪುನರ್ ಜನ್ಮ ನೀಡಿರುವ ಬಾದಾಮಿ ಬಿಡಬೇಡಿ ಈ ಸಲ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದು ಅವರ ಅಭಿಮಾನಿಗಳು ದುಂಬಾಲು ಬಿದ್ದಿದ್ದಾರೆ. ಬೆಂಗಳೂರಿಗೆ ತೆರಳಿ ಮನವಿ ಮಾಡಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ಕರೆಯುತ್ತಿದ್ದಾರೆ ವಿನಃ ಕಳೆದ ಸಲ ಪಟ್ಟು ಹಿಡಿದು ಕರೆದುಕೊಂಡು ಹೋಗಿದ್ದ ಜಿಲ್ಲೆಯ ಕೈ ಮುಖಂಡರ ಲೆಕ್ಕಾಚಾರ ಫಲಿತಾಂಶ ಬಂದಾಗ ಉಲ್ಟಾ ಆಗಿತ್ತು. ಬಾದಾಮಿ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಬಾಗಲಕೋಟೆ, ಹುನಗುಂದ, ಬೀಳಗಿ, ಮುಧೋಳ, ತೇರದಾಳ ಕ್ಷೇತ್ರದಲ್ಲಿ ಪಕ್ಷ ಮುಗ್ಗರಿಸಿತ್ತು. ಸ್ವತಃ ಸಿದ್ದರಾಮಯ್ಯ ಅವರು ಅತ್ಯಲ್ಪ ಮತಗಳ ಅಂತರದಲ್ಲಿ ಗೆದ್ದಿದ್ದರು. ಸಿದ್ದು ವಿರುದ್ದ ಸ್ಪರ್ಧೆ ಮಾಡಿದ್ದ ಶ್ರೀರಾಮುಲು ಹೊಡೆತ ಬೇರೆ ಕ್ಷೇತ್ರಗಳಿಗೂ ತಟ್ಟಿತ್ತು. ಹೀಗಾಗಿ ಈ ಸಲ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡುವಂತೆ ಜಿಲ್ಲೆಯ ಕೈ ಮುಖಂಡರಾರು ಕರೆಯುತ್ತಿಲ್ಲ ಎನ್ನುವ ಆರೋಪಗಳು ಇದ್ದವು.

ಇದೀಗ ಮೊದಲ ಬಾರಿಗೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು, ಮಾಜಿ ಶಾಸಕರು ಜಂಟಿಯಾಗಿ ಸಿದ್ದರಾಮಯ್ಯ ಅವರನ್ನು ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು. ಹೆಚ್ಚು ಅಂತರದಿಂದ ಗೆಲ್ಲುವ ವಿಶ್ವಾಸ ಇದೆ. ಬನ್ನಿ ನೀವು ಎಂದು ಆಹ್ವಾನ ನೀಡಿದ್ದಾರೆ..

ಸಿದ್ದರಾಮಯ್ಯ ಅವರಿಗೆ ಬಾದಾಮಿ ದೂರವಾಗುತ್ತದೆ. ಹೀಗಾಗಿ ಸ್ಪರ್ಧೆ ಮಾಡುವುದು ಅನುಮಾನ ಎಂದು ಕ್ಷೇತ್ರಕ್ಕೆ ಬಂದಾಗಲೇ ಹೇಳಿದ್ದರು. ಇದು ಸಿದ್ದರಾಮಯ್ಯ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದ್ದು, ಇಲ್ಲ ಇಲ್ಲ ನೀವು ಮತ್ತೆ ಬಾದಾಮಿಯಿಂದ ಸ್ಪರ್ಧೆ ಮಾಡಿ ಅಂತ ಪಟ್ಟು ಹಿಡಿದಿದ್ದಾರೆ.

ಆದರೆ, ಬಾದಾಮಿ ಕ್ಷೇತ್ರ ಬಿಟ್ಟುಕೊಟ್ಟಿದ್ದ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಮಾತ್ರ ಬಹಿರಂಗವಾಗಿಯೇ ಸಿದ್ದರಾಮಯ್ಯ ಬರುವುದು ಬೇಡ ಎಂದು ಭಾಷಣ ಮಾಡಿದ್ದು, ಸಿದ್ದರಾಮಯ್ಯ ಅವರಿಗೆ ಇರಸು ಮುರುಸು ಉಂಟು ಮಾಡಿತ್ತು. ಆದರೆ, ಉಳಿದ ಮುಖಂಡರ ಮೌನ, ಉಳಿದವರಿಗೆ ಸಿದ್ದು ಬರುವುದು ಬೇಡವಾಗಿದೆ ಅಂತನೇ ಚರ್ಚೆ ಹುಟ್ಟುಹಾಕಿತ್ತು.

ಇವತ್ತು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕರೆದಿದ್ದ ಕೈ ಮುಖಂಡರ ಎದುರು ಈ ಪ್ರಶ್ನೆ ಎದುರಾದಾಗ, ತಮ್ಮ ಮೇಲಿನ ಆರೋಪ ಅಲ್ಲಗಳೆದಿದ್ದಾರೆ. ಮಾಜಿ ಸಚಿವ ಎಚ್.ವೈ.ಮೇಟಿ, ಮಾಜಿ ಶಾಸಕರಾದ ಜೆ.ಟಿ.ಪಾಟೀಲ್, ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರು, ಮೊದಲ ಬಾರಿಗೆ ಬಹಿರಂಗವಾಗಿ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಬಾದಾಮಿಯಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದಾರೆ.

– ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ

ಈಗಾಗಲೇ ಕೆಲವು ಸಲ ಸಿದ್ದರಾಮಯ್ಯ ಅವರನ್ನು ಕರೆದಿದ್ದೇವೆ. ಆದರೆ, ಅವರಿಗೆ ಕ್ಷೇತ್ರ ದೂರ ಎನ್ನುವ ಮಾತು ಹೇಳುತ್ತಿದ್ದಾರೆ. ಜೊತೆಗೆ ವಯಸ್ಸು ಅಡ್ಡಿ ಆಗುತ್ತದೆ. ಹೀಗಾಗಿ ಒಲ್ಲೆ ಅಂತಿದ್ದಾರೆ. ಆದರೂ ನಾವು ಪ್ರಯತ್ನ ಬಿಡಲ್ಲ. ಅವರು ಬಂದ ಮೇಲೆ ಬಾದಾಮಿಗೆ 4 ಸಾವಿರ ಕೋಟಿ ರೂ. ಅಧಿಕ ಅನುದಾನ ತಂದು ಅಭಿವೃದ್ದಿ ಪಡಿಸಿದ್ದಾರೆ. ಹೀಗಾಗಿ ಅವರು ಇಲ್ಲಿಂದಲೇ ಸ್ಪರ್ಧೆ ಮಾಡಬೇಕು. ಈ ಸಲ ಭಾರಿ ಅಂತರದಿಂದ ಗೆಲ್ಲಲಿದ್ದಾರೆ. ನಾವು ಈ ಸಲ ಗೆಲ್ಲುತ್ತೇವೆ. ಇನ್ನು ಕಾಲ ಮಿಂಚಿಲ್ಲ ಅವರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

ಒಟ್ಟಾರೆ, ಮುಂದಿನ ಸಲ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಸ್ಪರ್ಧೆ ಮಾಡುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಇದೀಗ ಜಿಲ್ಲೆಯ ಕೈ ಮುಖಂಡರು ಮೊದಲ ಬಾರಿಗೆ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಬಾದಾಮಿಗೆ ಆಹ್ವಾನ ನೀಡಿದ್ದಾರೆ. ಮಾಜಿ ಸಿಎಂ ಮನಸ್ಸು ಬದಲಿಸಿ ಮತ್ತೆ ಬಾದಾಮಿ ಬರ್ತಾರಾ? ಅಥವಾ ವರುಣಾನೇ ಫೈನಲ್ ಮಾಡ್ತಾರಾ ನೋಡಬೇಕಿದೆ.

ರವಿ ಮೂಕಿ ಟಿವಿ9 ಬಾಗಲಕೋಟೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 pm, Fri, 2 December 22