ಬಾಗಲಕೋಟೆ, (ಡಿಸೆಂಬರ್ 20): ಲೋಕಸಭೆಯಲ್ಲಿ ಮನೋರಂಜನ್ ಹಾಗೂ ಇತರರಿಂದ ಸ್ಪ್ರೇ ದಾಳಿ ಪ್ರಕರಣಕ್ಕೆ ಬಾಗಲಕೋಟೆಗೂ ಲಿಂಕ್ ಇರುವುದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಬಂಧನವಾಗಿರುವ ಮೈಸೂರಿನ ಮನೋರಂಜನ್ಗೆ ಬಾಗಲಕೋಟೆ ನಿವೃತ್ತ DySP ಪುತ್ರ ಸಾಯಿಕೃಷ್ಣಗೂ ಲಿಂಕ್ ಇದ್ದು, ಸದ್ಯ ಸಾಯಿಕೃಷ್ಣನನ್ನು ಪೊಲೀಸರು ವಿಚಾರಣೆಗೊಳಪಡಿಸಿ ಬಳಿಕ ದೆಹಲಿಗೆ ಕರೆದೊಯ್ದಿದ್ದಾರೆ.
ಮನೋರಂಜನ್ ತನ್ನ ಡೈರಿಯಲ್ಲಿ ಸಾಯಿಕೃಷ್ಣ ಹೆಸರು ಬರೆದಿದ್ದ. ಈ ಆಧಾರದ ಮೇಲೆ ದೆಹಲಿ ಪೊಲೀಸರು ಸಾಯಿಕೃಷ್ಣನನ್ನು ವಿಚಾರಣೆಗೊಳಡಿಸಿದ್ದಾರೆ. ಮನೋರಂಜನ್ ಹಾಗೂ ಸಾಯಿಕೃಷ್ಡ ಸ್ನೇಹಿತರಾಗಿದ್ದು, ಬೆಂಗಳೂರು ಬಿಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಬ್ಬರೂ ಕ್ಲಾಸ್ಮೇಟ್. ಅಲ್ಲದೇ 2008-2009ರಲ್ಲಿ ರೂಮ್ ಮೇಟ್ ಆಗಿದ್ದರು. 2012ರಲ್ಲಿ ಸಾಯಿಕೃಷ್ಣ ದೆಹಲಿಗೆ ಹೋಗಿದ್ದ. ಸದ್ಯ ಸಾಯಿಕೃಷ್ಣ ಎನ್ರಿಚ್ ವಿಡಿಯೋ ಕಂಪನಿ ಸೀನಿಯರ್ ಸಾಪ್ಟವೇರ್ ಇಂಜಿನಿಯರ್ ಆಗಿದ್ದಾನೆ.
ಇದನ್ನೂ ಓದಿ: ಸಂಸತ್ನ ಒಳಗೆ ನುಗ್ಗಿದ ಯುವಕರ ಉದ್ದೇಶವೇನಿತ್ತು? ಪೊಲೀಸ್ ವಿಚಾರಣೆ ವೇಳೆ ಅವರು ಹೇಳಿದ್ದು ಹೀಗೆ
ದೆಹಲಿ ಕಮೀಷನರೇಟ್ನ ಪಿಎಸ್ಐ ಪಿಂಟು ಶರ್ಮಾ ಹಾಗೂ ನಾಲ್ಕು ಸಿಬ್ಬಂದಿ ತಂಡ ಇಂದು ಸಂಜೆ 7 ಗಂಟೆಗೆ ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ನಿವೃತ್ತ ಡಿವೈಎಸ್ ಪಿ ವಿಠ್ಠಲ ಜಗಲಿ ನಿವಾಸಕ್ಕೆ ಭೇಟಿ ಸಾಯಿಕೃಷ್ಣನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ನವನಗರ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಬಳಿಕ ದೆಹಲಿಗೆ ಕರೆದೊಯ್ದಿದ್ದಾರೆ.
ಇನ್ನು ಈ ಬಗ್ಗೆ ಟಿವಿ9ಗೆ ಸಾಯಿಕೃಷ್ಣ ಸಹೋದರಿ ಸ್ಪಂದನಾ ಪ್ರತಿಕ್ರಿಯಿಸಿದ್ದು, ನಮ್ಮ ಸಹೋದರ ಯಾವುದೇ ತಪ್ಪು ಮಾಡಿಲ್ಲ. ಆತ ಮನೋರಂಜನ್ ಸ್ನೇಹಿತ ಮಾತ್ರ. ಸ್ನೇಹಿತನಾದ ಕಾರಣ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಎಲ್ಲ ತನಿಖೆಗೆ ನಾವು ಸಿದ್ದರಿದ್ದೇವೆ. ತಪ್ಪೇ ಮಾಡಿಲ್ಲ ಅಂದ್ರೆ ಹೆದರುವುದ್ಯಾಕೆ? ಎರಡು ದಿನದಿಂದ ದೆಹಲಿ ಪೊಲೀಸರು ಬಂದು ವಿಚಾರಣೆ ನಡೆಸಿದ್ದಾರೆ. ಎಲ್ಲದಕ್ಕೂ ಸಹಕರಿಸಿದ್ದೇವೆ. ಮನೆಯಿಂದ ವರ್ಕ್ ಪ್ರಾಮ್ ಹೋಮ್ ಕೆಲಸ ಮಾಡುತ್ತಿದ್ದಾನೆ. ನಮ್ಮ ಸಹೋದರ ನಿರಪರಾಧಿ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Wed, 20 December 23