ಬಾಗಲಕೋಟೆ: ನಮಗೆಲ್ಲರಿಗೂ ಜುಲೈ 1 ರಿಂದ 200 ಯುನಿಟ್ ವರೆಗೆ ವಿದ್ಯುತ್ (200 Unit Free Electricity) ಅನ್ನು ಉಚಿತವಾಗಿ ಬಳಕೆ ಮಾಡಬಹುದು. ಆದರೆ ಈ ಗ್ರಾಮದಲ್ಲಿ ಕಳೆದ 2 ದಶಕದಿಂದ ಕರೆಂಟ್ ಬಿಲ್ಲನ್ನೇ ಕಟ್ಟಿಲ್ಲವಂತೆ ಮಾರಾಯ್ರೆ! ಹೌದು, ಸರ್ಕಾರ ಈಗ ಉಚಿತವಾಗಿ 200 ಯುನಿಟ್ ವಿದ್ಯುತ್ ಘೋಷಣೆ ಬೆನ್ನಲ್ಲೇ ಬಾಗಲಕೋಟೆ (Bagalkot) ಜಿಲ್ಲೆಯ ಶಿರೋಳ ಗ್ರಾಮದ ಜನರು ಕಳೆದ 2 ದಶಕದಿಂದ ಬಿಲ್ ಕಟ್ಟದೇ ಇರುವ ಸಂಗತಿ ಬೆಳಕಿಗೆ ಬಂದಿದೆ.
ರೈತ ಸಂಘ ಬಲಾಡ್ಯ ಹಾಗೂ ಪ್ರಭಾವ ಹೊಂದಿರುವ ಮುಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿ ಹೆಸ್ಕಾಂ ಲೆಕ್ಕಕ್ಕೆ ಇರುವುದು 1142 ಮನೆಗಳು, 69 ಅಂಗಡಿಗಳು ಹಾಗೂ 121 ಕೈಗಾರಿಕೆ ವಲಯಗಳು. ಇದು ಲೆಕ್ಕಕ್ಕೆ ಇರುವ ಮೀಟರ್ ಹೊಂದಿರುವ ಗ್ರಾಹಕರ ಲಕ್ಕೆವಾದರೆ, ಮೀಟರ್ ಇಲ್ಲದೇ ವಿದ್ಯುತ್ ಸಂಪರ್ಕ ಮಾಡಿಸಿಕೊಂಡಿರುವ ಸಾವಿರಾರು ಮನೆಗಳೂ ಇವೆ.
ಆದರೆ ಸರ್ಕಾರ ನಮ್ಮದು, ನಾವು ವಿದ್ಯುತ್ ಬಿಲ್ ಕಟ್ಟಲ್ಲ. ನಿಯಮದಂತೆ ಸೌಲಭ್ಯ ಒದಗಿಸಲ್ಲ ಎನ್ನುವ ಕಾರಣಕ್ಕೆ ಈ ಗ್ರಾಮದ ಜನರು ಕಳೆದ 2 ದಶಕಗಳಿಂದ ಬಿಲ್ ಕಟ್ಟುವುದನ್ನೇ ನಿಲ್ಲಿಸಿದ್ದಾರೆ. ಇದರ ಹಿಂದೆ ಪ್ರೊ. ನಂಜುಂಡಸ್ವಾಮಿ ಪ್ರಭಾವ, ಸ್ಥಳೀಯ ರೈತ ಮುಖಂಡ ದಿ. ರಮೇಶ್ ಗಡದನ್ನವರ ಪ್ರೇರಣೆಯಿಂದ ಅನ್ನದಾತರು ಬಿಲ್ ಕಟ್ಟದೆ 2 ದಶಕದಿಂದ ಸೆಡ್ಡು ಹೊಡೆದು ನಿಂತಿದ್ದಾರೆ.
ಇದನ್ನೂ ಓದಿ: Electricity Price Hike: ಗೃಹಜ್ಯೋತಿ ಘೋಷಣೆ ಬೆನ್ನಲ್ಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್: ಜೂನ್ 1ರಿಂದಲೇ ವಿದ್ಯುತ್ ದರ ಏರಿಕೆ
ಕರ್ನಾಟಕ ರಾಜ್ಯ ರೈತ ಸಂಘ ಬಲಾಡ್ಯವಾಗಿರುವ ಈ ಗ್ರಾಮಕ್ಕೆ ವಿದ್ಯುತ್ ಬಿಲ್ ಕೇಳಲು ಹೋದರೆ ಹೆಸ್ಕಾಂ ಸಿಬ್ಬಂದಿಗೆ ಊರಿನೊಳಗೇ ಬಿಡುವುದಿಲ್ಲ, ಟಿಸಿ ದುರಸ್ತಿ ಇದ್ದರಷ್ಟೇ ಸಿಬ್ಬಂದಿಗೆ ಊರಿಗೆ ಬಂದು ರಿಪೇರಿ ಮಾಡಿ ಹೋಗಬೇಕು.
ಕಳೆದ 2 ದಶಕಗಳಿಂದ 1.26 ಕೋಟಿ ರೂ. ಮನೆ ಬಿಲ್ ಬಾಕಿ ಇದ್ದು, 9.68 ಲಕ್ಷ ರೂ. ಕೈಗಾರಿಕೆ ವಲಯದ ಬಿಲ್ ಬಾಕಿ ಇದೆ. ಅದೇ ರೀತಿ, 2.50 ಲಕ್ಷ ಅಂಗಡಿ (ಕಮರ್ಷಿಯಲ್) ಬಿಲ್ ಬಾಕಿ ಇದೆ. ಒಟ್ಟಾರೆಯಾಗಿ ಇಡೀ ಗ್ರಾಮದಲ್ಲಿ 140 ರಿಂದ 150 ಜನರು ಮಾತ್ರ ವಿದ್ಯುತ್ ಬಿಲ್ ಪಾವತಿ ಮಾಡುತ್ತಿದ್ದಾರೆ ಅಷ್ಟೆ. ಉಳಿದವರು ಬಿಲ್ ಕಟ್ಟುವುದೇ ಇಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:15 am, Sun, 4 June 23