Shakti scheme effect: ಶಕ್ತಿ ಯೋಜನೆಯಿಂದ 2 ತಿಂಗಳಲ್ಲಿ ಮಹಿಳೆಯರಿಂದಲೇ 27 ಕೋಟಿ ಲಾಭ, ನಷ್ಟದ ಹಾದಿಯಲ್ಲಿದ್ದ ಕೆಎಸ್ಆರ್ಟಿಸಿಗೆ ಕೋಟಿ ಕೋಟಿ ಆದಾಯ!
KSRTC -Bagalkot: ಎಲ್ಲ ಬಸ್ ಬಹುತೇಕ ಫುಲ್ ರಶ್. ಇದರಿಂದ ಕೆಎಸ್ಆರ್ಟಿಸಿ ಸಿಬ್ಬಂದಿಗೆ ಪ್ರಾರಂಭದಲ್ಲಿ ಕಿರಿಕಿರಿ ಆದರೂ ಈಗ ಖುಷಿ ತಂದಿದೆ. ಕಾರಣ ಸಂಸ್ಥೆಗೆ ಮಹಿಳಾ ಪ್ರಯಾಣಿಕರಿಂದ ಕೋಟಿ ಕೋಟಿ ಆದಾಯ ಬರುತ್ತಿದೆ!
Shakti scheme -ಶಕ್ತಿ ಯೋಜನೆ: ಕರ್ನಾಟಕದ ನೂತನ ಕಾಂಗ್ರೆಸ್ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲೊಂದು.ಯೋಜನೆ ಜಾರಿ ಬಂದಿದ್ದೇ ತಡ ರಾಜ್ಯಾದ್ಯಂತ ಮಹಿಳೆಯರ ಓಡಾಟ ತೀರಾ ಹೆಚ್ಚಾಗಿದೆ. ಪ್ರವಾಸಿ ತಾಣಗಳು ಧಾರ್ಮಿಕ ಸ್ಥಳಗಳು ಬಸ್ ನಿಲ್ದಾಣ ಎಲ್ಲೆಂದರಲ್ಲಿ ಮಹಿಳೆಯರದ್ದೇ ದರ್ಬಾರ್ ಆಗಿದೆ.ಇದಕ್ಕೆ ಕೆಲವರ ವಿರೋಧ ಕೂಡ ಇದೆ.ಇದೆಲ್ಲದರ ಮಧ್ಯೆ ಅದೊಂದು ಜಿಲ್ಲೆಯಲ್ಲಿ ಜೂನ್ ೧೧ ರಿಂದ ಜುಲೈ ಅಂತ್ಯದವರೆಗೆ ಮಹಿಳೆಯರಿಂದಲೇ (Women Passengers) ಬಂದ ಆದಾಯ ಬರೊಬ್ಬರಿ ೨೭ ಕೋಟಿ ರೂಪಾಯಿಯಷ್ಟಿದೆ! ಬಸ್‌ನಲ್ಲಿ ಕಿಕ್ಕಿರಿದು ತುಂಬಿದ ಜನರು. ಬಸ್ ಹತ್ತಲು ಮಹಿಳೆಯರ ಹರಸಾಹಸ.ಬಸ್ ನಿಲ್ದಾಣಗಳು ಫುಲ್.ಧಾರ್ಮಿಕ ಸ್ಥಳಗಳಲ್ಲೂ ಮಹಿಳೆಯರದ್ದೇ ದರ್ಬಾರ್.ಈ ಎಲ್ಲ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ ( KSRTC, Bagalkot).
ಹೌದು ಇಲ್ಲಿ ಎಲ್ಲ ಕಡೆ ಮಹಿಳೆಯರೇ ಹೆಚ್ಚು ಕಾಣುತ್ತಿರೋದಕ್ಕೆ ಶಕ್ತಿ ಯೋಜನೆಯೆ ಪ್ರಮುಖ ಕಾರಣ.ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಮಹಿಳೆಯರು ಧಾರ್ಮಿಕ,ಪ್ರವಾಸಿ ತಾಣಗಳು ಸೇರಿದಂತೆ ಸಂಬಂಧಿಕರ ಮನೆಗಳಿಗೆ ಹೋಗೋದು-ಬರೋದು ಜಾಸ್ತಿಯಾಗಿದೆ.ಜೊತೆಗೆ ಕೆಲಸಕ್ಕೆ ಹೋಗೋರ ಸಂಖ್ಯೆ ಹೆಚ್ಚಾಗಿದೆ.ಇದಕ್ಕೆಲ್ಲ ಮಹಿಳೆಯರು ಕೆಎಸ್ಆರ್ಟಿಸಿ ಬಸ್ ನಲ್ಲೇ ಗಣನೀಯವಾಗಿ ಪ್ರಯಾಣ ಮಾಡುತ್ತಿದ್ದಾರೆ.ಇದರಿಂದ ಎಲ್ಲ ಬಸ್ ಗಳು ಬಹುತೇಕ ಪುಲ್ ರಶ್ ಆಗುತ್ತಿವೆ.
ಇದು ಕೆಎಸ್ಆರ್ಟಿಸಿ ಸಿಬ್ಬಂದಿಗೆ ಆರಂಭದಲ್ಲಿ ಕಿರಿಕಿರಿ ತಂದರೂ ಈಗ ಖುಷಿ ತಂದಿದೆ.ಇದಕ್ಕೆ ಕಾರಣ ಕೆಎಸ್ಆರ್ಟಿಸಿಗೆ ಮಹಿಳಾ ಪ್ರಯಾಣಿಕರಿಂದ ಕೋಟಿ ಕೋಟಿ ಆದಾಯ ಬರುತ್ತಿದೆ.ಬಾಗಲಕೋಟೆ ಜಿಲ್ಲೆ ಒಂದರಿಂದಲೇ ಜೂನ್ ಹನ್ನೊಂದರಿಂದ ಜುಲೈ ಅಂತ್ಯದವರೆಗೆ ಮಹಿಳಾ ಪ್ರಯಾಣಿಕರಿಂದಲೇ ಬಂದ ಆದಾಯ ೨೭ ಕೋಟಿ ೭೪ ಲಕ್ಷ ದ ೮೧ ಸಾವಿರ ರೂಪಾಯಿ.ಹೌದು ಈ ಮೊತ್ತ ಕಂಡು ಕೆಎಸ್ಆರ್ಟಿಸಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.ಜೊತೆಗೆ ಇದು ಸರ್ಕಾರಿ ದಾಖಲೆಯ ಮೂಲಕವೇ ಲೆಕ್ಕಾಚಾರ ಹೊರಬಿದ್ದಿದ್ದು,ಇಷ್ಟು ಹಣ ಪಾವತಿ ಮಾಡಲು ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಪಿವ್ಹಿ ಮೇತ್ರಿ, ವಿಭಾಗೀಯ ಸಾರಿಗೆ ಅಧಿಕಾರಿ, ಕೆಎಸ್ಆರ್ಟಿಸಿ, ಬಾಗಲಕೋಟೆ ಅವರು ತಿಳಿಸಿದ್ದಾರೆ.
ಇಷ್ಟೊಂದು ಆದಾಯ ಸಂಗ್ರಹಕ್ಕೆ ಕಾರಣ ಮಹಿಳಾ ಬಸ್ ಪ್ರಯಾಣಿಕರ ಸಂಖ್ಯೆ ತೀರಾ ಹೆಚ್ಚಾಗಿರೋದು.ಯೋಜನೆಗೂ ಮೊದಲು ಪ್ರತಿದಿನ ಬಸ್ ನಲ್ಲಿ ೨ ಲಕ್ಷ ೩ ಸಾವಿರ ಜನರು ಪ್ರಯಾಣ ಮಾಡುತ್ತಿದ್ದರು.ಅದರಲ್ಲಿ ೨೮ ಪ್ರತಿಶತ ಮಾತ್ರ ಮಹಿಳೆಯರು ಪ್ರಯಾಣ ಮಾಡುತ್ತಿದ್ದರು. ಆದರೆ ಶಕ್ತಿ ಯೋಜನೆ ಆರಂಭದ ನಂತರ ಬಸ್ ನಲ್ಲಿ ಪ್ರತಿದಿನ ಪ್ರಯಾಣಿಕರ ಸಂಖ್ಯೆ ೩ ಲಕ್ಷ ೨೨ ಸಾವಿರ ಇದೆ.
ಇದರಲ್ಲಿ ೧ ಲಕ್ಷ ೮೫ ಸಾವಿರ ಮಹಿಳಾ ಪ್ರಯಾಣಿಕರಿದ್ದಾರೆ.ಶಕ್ತಿಯೋಜನೆ ಮೊದಲು ದಿನಾಲು ೬೮ ಲಕ್ಷ ಆದಾಯ ಬರುತ್ತಿತ್ತು. ಶಕ್ತಿ ಯೋಜನೆ ಬಳಿಕ ಅದು ೧ ಕೋಟಿ ೩ ಲಕ್ಷಕ್ಕೆ ಏರಿಕೆಯಾಗಿದೆ.ಶಕ್ತಿ ಯೋಜನೆ ಬಳಿಕ ಇಷ್ಟೊಂದು ಆದಾಯ ಏರಿಕೆಯಾಗಿದ್ದು ಕೆಎಸ್ಆರ್ಟಿಸಿ ಲಾಭದತ್ತ ಸಾಗಿದೆ.ಯೋಜನೆ ಆರಂಭವಾದಾಗಿನಿಂದ ಇದುವರೆಗೂ ೧ ಕೋಟಿ ೫೪ ಲಕ್ಷ ಜನ ಮಹಿಳೆಯರು ಪ್ರಯಾಣ ಮಾಡಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆಯದ್ದೇ ಅತಿ ಹೆಚ್ಚು ಆದಾಯ ಬಂದಿದ್ದು ವಿಶೇಷ.ಇನ್ನು ಇದರಿಂದ ಮಹಿಳೆಯರು ಹೆಮ್ಮೆ ಪಡುತ್ತಿದ್ದು, ಸಿದ್ದರಾಮಯ್ಯ ಬಡ ಮಹಿಳೆಯರು ಸೇರಿದಂತೆ ಎಲ್ಲ ಮಹಿಳೆಯರಿಗೂ ಶಕ್ತಿ ಯೋಜನೆ ಮೂಲಕ ಅನುಕೂಲ ಕಲ್ಪಿಸಿದ್ಧಾರೆ.ಇದರಿಂದ ಕೆಎಸ್ಆರ್ಟಿಸಿಗೆ ಲಾಭ ಆಗ್ತಿದೆ.ಜೊತೆಗೆ ಪ್ರವಾಸಿ,ಧಾರ್ಮಿಕ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿದೆ.ಆದರೆ ಇನ್ನು ಹೆಚ್ಚಿನ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಸಾಕಷ್ಟು ಟೀಕೆಗಳ ಮಧ್ಯೆ ನಿತ್ಯ ಸಾಗುತ್ತಿರುವ ಶಕ್ತಿ ಯೋಜನೆ ಕೆ ಎಸ್ ಆರ್ ಟಿ ಸಿಗೆ ಲಾಭ ತಂದಿದೆ.ಆದರೆ ಸಮರ್ಪಕ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಮಹಿಳೆಯರು ಎಲ್ಲರೂ ಪರದಾಡುವ ಸ್ಥಿತಿ ಇದ್ದು,ಸೂಕ್ತ ಬಸ್ ಸೌಲಭ್ಯ ಕೂಡ ಕಲ್ಪಿಸಬೇಕಾಗಿದೆ.
ಬಾಗಲಕೋಟೆ ಜಿಲ್ಲೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ