ಮಾಧುಲಿಂಗ ಸ್ವಾಮೀಜಿ ನನಗೆ ಮತ್ತೆ ಮುಖ್ಯಮಂತ್ರಿ ಆಗಿ ಅಂದ್ರು: ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಹೇಳಿಕೆ

| Updated By: ganapathi bhat

Updated on: Sep 27, 2021 | 4:40 PM

Siddaramaiah: ನಾವೆಲ್ಲ ಮನುಷ್ಯರು, ಮನುಷ್ಯ ಹುಟ್ಟುವಾಗ ಯಾವ ಬೇಧಭಾವ ಇರಲ್ಲ. ಯಾರೂ ಸಹ ಇಂತಹ ಜಾತಿಯಲ್ಲಿ ಹುಟ್ಟಬೇಕು ಅಂದುಕೊಳ್ಳಲ್ಲ. ಎಲ್ಲಾ ಜಾತಿ ಧರ್ಮದ ಜನ್ರು ಒಂದೇನೆ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಇರಬೇಕು ಎಂದು ಸಿದ್ದರಾಮಯ್ಯ ಮಾತನಾಡಿದ್ದಾರೆ.

ಮಾಧುಲಿಂಗ ಸ್ವಾಮೀಜಿ ನನಗೆ ಮತ್ತೆ ಮುಖ್ಯಮಂತ್ರಿ ಆಗಿ ಅಂದ್ರು: ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಹೇಳಿಕೆ
ಸಿದ್ದರಾಮಯ್ಯ
Follow us on

ಬಾಗಲಕೋಟೆ: ಮಾಧುಲಿಂಗ ಸ್ವಾಮೀಜಿಯವ್ರು ನನಗೆ ಮತ್ತೆ ಮುಖ್ಯಮಂತ್ರಿ ಆಗಿ ಅಂದ್ರು. ನಾನು ಅವರ ಆಶ್ರಮಕ್ಕೆ ಬರಬೇಕು ಅಂತ ಅವರು 58 ದಿನ ಉಪವಾಸ ಮಾಡಿದ್ದಾರೆ. ನಾನು ಮಾಧುಲಿಂಗ ಸ್ವಾಮೀಜಿಯವ್ರಿಗೆ ಚಿರಋಣಿಯಾಗಿರ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲೆ ಜಮಖಂಡಿ ತಾಲ್ಲೂಕಿನ ಜಕನೂರು ಎಂಬಲ್ಲಿ ಸಿದ್ಧಶ್ರೀ ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದಾರೆ. ಧರ್ಮ ಇರೋದು ಜನರಿಗೋಸ್ಕರ. ನಾವೆಲ್ಲ ಮನುಷ್ಯರು, ಮನುಷ್ಯ ಹುಟ್ಟುವಾಗ ಯಾವ ಬೇಧಭಾವ ಇರಲ್ಲ. ಯಾರೂ ಸಹ ಇಂತಹ ಜಾತಿಯಲ್ಲಿ ಹುಟ್ಟಬೇಕು ಅಂದುಕೊಳ್ಳಲ್ಲ. ಎಲ್ಲಾ ಜಾತಿ ಧರ್ಮದ ಜನ್ರು ಒಂದೇನೆ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಇರಬೇಕು ಎಂದು ಸಿದ್ದರಾಮಯ್ಯ ಮಾತನಾಡಿದ್ದಾರೆ.

ಬಸವಾದಿಶರಣರು ಹೇಳಿದ್ದಾರೆ, ದಯಯೇ ಧರ್ಮದ ಮೂಲವಯ್ಯ. ದಯವಿಲ್ಲದ ಧರ್ಮವಾವುದಯ್ಯ. ಕೆಲವು ಶಕ್ತಿಗಳು, ಕೆಲ ಗುಂಪುಗಳು ಮನುಷ್ಯ ಮನುಷ್ಯರ ಮಧ್ಯೆಯೇ ಗೋಡೆ ಕಟ್ಟಿಬಿಡ್ತಾರೆ. ಸ್ವಾರ್ಥಕ್ಕಾಗಿ ಗೋಡೆ ಕಟ್ಟುತ್ತಾರೆ. ನಾನು ಕುರುಬ ಜಾತಿಯವನು, ಹಿಂದೂ ಧರ್ಮಕ್ಕೆ ಸೇರಿದವನು. ನನಗೆ ಕಾಯಿಲೆಯಾಗುತ್ತೆ, ನಾನು ಆಪರೇಶನ್ ಮಾಡಸಬೇಕಾಗುತ್ತೆ. ಕ್ರಿಶ್ಚಿಯನ್, ಮುಸ್ಲೀಂ ಯಾರದ್ದಾದ್ರೂ ರಕ್ತ ಕೊಡ್ರಯ್ಯ ಅಂತೀನಿ. ಗುಣಮುಖ ಆದಮೇಲೆ ಹಿಂದೂ, ಮುಸ್ಲೀಂ, ಕ್ರಿಶ್ಚಿಯನ್ ಅಂತಾ ಹೇಳೋದು. ಯಾರ ಮಾತನ್ನು ಕೇಳೋಕೆ ಹೋಗಬೇಡಿ. ನಾವೆಲ್ಲ ಮಾನವರಾಗಿ ಬದುಕಬೇಕು. ಹುಟ್ಟುವ ಮಗು ವಿಶ್ವ ಮಾನವನಾಗಿ ಹುಟ್ಟುತ್ತದೆ. ನಮ್ಮಲ್ಲಿ ಅನೇಕ ಜಾತಿ, ಧರ್ಮಗಳಿಂದ್ರಿಂದ ಬೆಳಿತಾ, ಬೆಳೀತಾ ಅಲ್ಪ ಮಾನವನಾಗಿಬಿಡ್ತಾನೆ ಎಂದು ತಿಳಿಸಿದ್ದಾರೆ.

ಪ್ರತಿಯೊಬ್ಬ ಮನುಷ್ಯ ವಿಶ್ವಮಾನವನಾಗಲು ಪ್ರಯತ್ನ ಮಾಡಬೇಕು. ಸಾಮಾಜ ನನಗೇನು ಕೊಟ್ಟಿತು ಅಂತಾ ಪ್ರಶ್ನೆ ಮಾಡಬಾರದು. ನಾನೇನು ಸಮಾಜಕ್ಕೆ ಕೊಟ್ಟೆ ಅಂತಾ ಯೋಚಿಸಬೇಕು. ಅದು ಪ್ರತಿಯೊಬ್ಬನ ಕರ್ತವ್ಯ ಆಗಬೇಕು. ಹುಟ್ಟಿನಿಂದ ಸಾವಿನ ಮಧ್ಯೆ ನಾನೇನು ಮಾಡಿದೆ ಸಮಾಜಕ್ಕೆ ಅಂತಾ ಚಿಂತಿಸಬೇಕು. ಏನೂ ಮಾಡೋದು ಬೇಡ, ಇನ್ನೊಬ್ಬರಿಗೆ ಕೆಡುಕನ್ನ ಮಾಡದೇ, ಒಳ್ಳೆಯದನ್ನ ಮಾಡಲು ಪ್ರಯತ್ನಿಸಬೇಕು. ಇದನ್ನ ಪ್ರತಿಯೊಬ್ಬರು ಮಾಡಿದ್ರೆ, ಅದಕ್ಕಿಂದ ದೊಡ್ಡ ಕೊಡುಗೆ ಯಾವುದಿಲ್ಲ. ನಾನು ಸಾಮಾನ್ಯ ಕುಟುಂಬದಿಂದ ಬಂದವನು. ಓದಿಸಿದ್ರೂ ಓದಿದೆ, ರಾಜಕಾರಣಿಯಾದೆ, ಮುಖ್ಯಮಂತ್ರಿ ಆದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನೀವೆಕೆ ಅರೆಬೆತ್ತಲೆ ಆಗಿದ್ದೀರಿ ಅಂತಾ ಕೇಳಿದ್ದಕ್ಕೆ ಮಹಾತ್ಮ ಗಾಂಧಿಯವ್ರು ನಮ್ಮ ದೇಶದಲ್ಲಿ ಬಹಳಷ್ಟು ಜನಕ್ಕೆ ಬಟ್ಟೆ ಇಲ್ಲ. ಎಲ್ಲಿಯವರೆಗೂ ನಮ್ಮ ದೇಶದ ಜನ್ರಿಗೆ ಬಟ್ಟೆ ಸಿಗುತ್ತೆ, ಊಟ ಸಿಗುತ್ತೆ ಅವತ್ತು ಫೂರ್ಣ ಬಟ್ಟೆ ಧರಿಸ್ತೀನಿ ಅಂದ್ರು. ಅದಕ್ಕೆ ಅವರು ಮಹಾತ್ಮರಾದ್ರು. ನೀವೆಲ್ಲ ಜಾತಿ ಧರ್ಮ ಮಾಡಬೇಡಿ. ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದಿನಿಸಯ್ಯ ಎಂಬ ವಚನ ಉಲ್ಲೇಖಿಸಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಈ ವಚನ ಹೇಳಿ, ನೀವ್ಯಾರು, ನಮ್ಮ ಸಮುದಾಯದವರಾ ಎಂದು ಕೇಳೋದು ಇಂತಹದ್ದು ಆಗಬಾರದು ಎಂದು ಹೇಳಿದ್ದಾರೆ.

ನಾನು ಬಸವೇಶ್ವರರ ಜಯಂತಿಯಂದು ಪ್ರಮಾಣವಚನ ಸ್ವೀಕರಿಸಿದೆ. ನೇರ ಕ್ಯಾಬಿನೆಟ್ ಹಾಲ್​ಗೆ ತೆರಳಿ, ಅನ್ನಭಾಗ್ಯ ಯೋಜನೆ ಜಾರಿ‌ಮಾಡಿದೆ. ನಮ್ಮ ಸಮಾಜದಲ್ಲಿ ಯಾರೂ ಹಸಿದು ಮಲಗಬಾರದು ಎಂದು ಫ್ರೀಯಾಗಿ ಅಕ್ಕಿ ಕೊಟ್ಟಿವು. ಬಹಳ ಮಂದಿ ಟೀಕೆ ಮಾಡಿದ್ರು. ಒಬ್ಬ ಬಿಜೆಪಿ ಗುರುಪಾದಪ್ಪ ನಾಗಮಾರಪಲ್ಲಿ ಎಂಬ ಮಾಜಿ ಸಚಿವ, ನೀವು ಅಕ್ಕಿ ಕೊಟ್ಟು ಜನ್ರನ್ನ ಸೋಮಾರಿ ಮಾಡಿಬಿಟ್ರೀ ಅಂದ್ರು. ನಾನು ಅವ್ರನ್ನ ಸೋಮಾರಿ ಮಾಡಿಲ್ಲ, ಕೂಲಿ ಮಾಡಿ ಮಾಡಿ ಸುಸ್ತಾಗಿದ್ದಾರೆ. ಅದಕ್ಕೆ ಒಂದಿಷ್ಟು ದಿನ ನೀವು ಕೂಲಿ‌ಮಾಡಲಿ ಅಂತಾ ಮಾಡಿದೆ ಅಂತಾ ಹೇಳಿದೆ. ಎಲ್ಲರೂ ಉತ್ಪಾದನೆ ಮಾಡಬೇಕು, ಉತ್ಪಾದನೆಯಾದ ಸಂಪತ್ತನ್ನ ಎಲ್ಲರೂ ಹಂಚಿಕೊಳ್ಬೇಕು. ಆರೋಗ್ಯ ಇರೋರು ಕಾಯಕ ಮಾಡಬೇಕಲ್ಲ. ನಮ್ಮ ಕತ್ತಿ ಅಂತಾ ಮಂತ್ರಿ ಇದ್ದಾನೆ. ನನಗೆ ಐದು ಕೆಜಿ ಅಕ್ಕಿ ಸಾಕು ಅಂತಾನೆ‌‌ ಎಂದು ಅಕ್ಕಿ ವಿಚಾರವಾಗಿಯೂ ಹೇಳಿಕೆ ನೀಡಿದ್ದಾರೆ.

ಕುರಿ ಸತ್ತರೆ 5 ಸಾವಿರ, ಎಮ್ಮೆ ಸತ್ತರೆ 10 ಸಾವಿರ ಪರಿಹಾರ. ನಾನು ಸಿಎಂ ಆಗಿದ್ದಾಗ ಪರಿಹಾರ ನೀಡುವುದನ್ನು ಆರಂಭಿಸಿದ್ದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ನಂತರ ಅದನ್ನು ನಿಲ್ಸಿದ್ದಾರೆ. ಕುರಿ, ಎಮ್ಮೆ ಸತ್ತರೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದೇನೆ. ಪಶುಸಂಗೋಪನಾ ಸಚಿವರಿಗೆ ಕುರಿ ಕಾದು ಅನುಭವವಿಲ್ಲ. ಬಜೆಟ್​ ಗಾತ್ರ ಎರಡು ಲಕ್ಷ ನಲವತ್ತಾರು ಸಾವಿರ ಕೋಟಿ. ಅದರಲ್ಲಿ 100 ಕೋಟಿ ಪ್ರಾಣಿಗಳ ಪರಿಹಾರಕ್ಕೆ ಮೀಸಲಿಡಿ. ಪರಿಹಾರ ನೀಡಿದರೆ ಅವರ ತಾತನ ಮನೆ ಗಂಟು ಹೋಗುತ್ತಾ? ಎಂದು ಬಾಗಲಕೋಟೆ ಜಿಲ್ಲೆಯ ಜಕನೂರಿನಲ್ಲಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ಧಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಅಕ್ಕಿ ರಾಜಕೀಯಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಹೆಚ್​ಡಿ ಕುಮಾರಸ್ವಾಮಿ

ಇದನ್ನೂ ಓದಿ: ಸಾರಿಗೆ ಸಚಿವ ಶ್ರೀರಾಮುಲು ಒಬ್ಬ ಪೆದ್ದ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Published On - 4:37 pm, Mon, 27 September 21