ಸಿದ್ದರಾಮಯ್ಯ ಅಕ್ಕಿ ರಾಜಕೀಯಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಹೆಚ್​ಡಿ ಕುಮಾರಸ್ವಾಮಿ

HD Kumaraswamy: ಸಮ್ಮಿಶ್ರ ಸರಕಾರದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದೆ. ಅದಕ್ಕೆ ಮುನ್ನ ಬಜೆಟ್ ಮಂಡಿಸಿ ಚುನಾವಣೆಗೆ ಹೋದ ತಾವು ಎಷ್ಟು ಕೆಜಿ ಅಕ್ಕಿಗೆ ಹಣ ಇಟ್ಟಿದ್ದಿರಿ? ಐದು ಕೆಜಿಗೋ ಅಥವಾ ಏಳು ಕೆಜಿಗೋ? ಸತ್ಯವನ್ನು ಕಕ್ಕಲು ಕಷ್ಷವೇಕೆ? ನಾಲಗೆ ತಡವರಿಸುತ್ತಿದೆಯಾ ಪ್ರತಿಪಕ್ಷ ನಾಯಕರೇ? ಎಂದು ಕೇಳಿದ್ದಾರೆ.

ಸಿದ್ದರಾಮಯ್ಯ ಅಕ್ಕಿ ರಾಜಕೀಯಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಹೆಚ್​ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ
TV9kannada Web Team

| Edited By: ganapathi bhat

Sep 26, 2021 | 6:56 PM

ಬೆಂಗಳೂರು: ಬಡವರಿಗೆ ನೀಡಲಾಗುತ್ತಿದ್ದ ಅಕ್ಕಿಯ ಪ್ರಮಾಣವನ್ನು 7 ಕೆಜಿಯಿಂದ 5 ಕೆಜಿಗೆ ಕಡಿತ ಮಾಡಿದ್ದ ಬಗ್ಗೆ ತಮ್ಮ ವಿರುದ್ಧ ಸುಳ್ಳಿನ ಆರೋಪ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಸಿದ್ದರಾಮಯ್ಯ ಅವರು ಸತ್ಯವನ್ನು ಮರೆಮಾಚಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಟ್ವೀಟ್ ಮೂಲಕ ಸಿದ್ದರಾಮಯ್ಯಗೆ ಪ್ರತ್ಯುತ್ತರ ನೀಡಿದ್ದಾರೆ.

ಅಕ್ಕಿಭಾಗ್ಯದ ಅಸಲಿಯತ್ತು ಏನು ಎಂಬುದನ್ನು ಈಗಾಗಲೇ ಸದನದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದೇನೆ. ಅದಾದ ಮೇಲೂ ನಿಮ್ಮ ಸುಳ್ಳಿನ ಜಪ ಮುಂದುವರಿದಿದೆ. ಸತ್ಯ ಹೇಳಲು ಹಿಂಜರಿಕೆ- ಅಧೈರ್ಯ ಏಕೆ? ಸುಳ್ಳಿನ ಮೇಲಿರುವಷ್ಟು ನಿಷ್ಠೆ ಸತ್ಯದ ಮೇಲೆ ಯಾಕಿಲ್ಲ? 5 ಕೆಜಿ ಅಕ್ಕಿ ಅಸಲಿಯೆತ್ತಿನ ಬಗ್ಗೆ ಹೇಳಲು ಅಂಜಿಕೆ ಏಕೆ ಸಿದ್ದರಾಮಯ್ಯನವರೇ? ಎಂದು ಟ್ವೀಟ್ ಮಾಡಿದ್ದಾರೆ.

ಸಮ್ಮಿಶ್ರ ಸರಕಾರದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದೆ. ಅದಕ್ಕೆ ಮುನ್ನ ಬಜೆಟ್ ಮಂಡಿಸಿ ಚುನಾವಣೆಗೆ ಹೋದ ತಾವು ಎಷ್ಟು ಕೆಜಿ ಅಕ್ಕಿಗೆ ಹಣ ಇಟ್ಟಿದ್ದಿರಿ? ಐದು ಕೆಜಿಗೋ ಅಥವಾ ಏಳು ಕೆಜಿಗೋ? ಸತ್ಯವನ್ನು ಕಕ್ಕಲು ಕಷ್ಷವೇಕೆ? ನಾಲಗೆ ತಡವರಿಸುತ್ತಿದೆಯಾ ಪ್ರತಿಪಕ್ಷ ನಾಯಕರೇ? ಎಂದು ಕೇಳಿದ್ದಾರೆ.

ಸಮ್ಮಿಶ್ರ ಸರಕಾರದಲ್ಲಿ ಐದು ಕೆಜಿ ಅಕ್ಕಿ ನೀಡಲಾಯಿತು, ನಿಜ. ಇದ್ದಕ್ಕಿದ್ದಂತೆ 7 ಕೆಜಿ ಕೊಡಿ ಎಂದು ಬೊಬ್ಬೆ ಹೊಡೆದ ಸ್ವತಃ ನೀವೇ ಬಜೆಟ್​ನಲ್ಲಿ ಹಣ ಮೀಸಲು ಇಟ್ಟಿದ್ದದ್ದು 5 ಕೆಜಿಗೆ ಮಾತ್ರ. ಹೊರಗೆ ಮಾತ್ರ ಹೆಚ್.ಡಿ. ಕುಮಾರಸ್ವಾಮಿ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದರು ಎಂದು ನಿರ್ಲಜ್ಜವಾಗಿ ಸುಳ್ಳು ಹೇಳುತ್ತಿದ್ದೀರಿ. ಉಳಿದ ಎರಡು ಕೆಜಿ ಅಕ್ಕಿಗೆ ಹಣ ಎಲ್ಲಿತ್ತು? ಸ್ವಲ್ಪವಾದರೂ ಪಾಪಪ್ರಜ್ಞೆ ಇಲ್ಲವೆ ನಿಮಗೆ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಕೇವಲ ಚುನಾವಣೆಯಲ್ಲಿ ಮತ ಪಡೆಯುವ ದುರುದ್ದೇಶದಿಂದ ನೀವು ಜನರು ತಿನ್ನುವ ಅನ್ನದಲ್ಲೂ ರಾಜಕೀಯ ಮಾಡುತ್ತಿದ್ದರಿ. ಆದರೆ ಉಳಿದ ಎರಡು ಕೆಜಿ ಅಕ್ಕಿಗೆ ಹಣ ಹೊಂದಿಸಲು ಸಮ್ಮಿಶ್ರ ಸರಕಾರದಲ್ಲಿ ನಾವು ಪಟ್ಟ ಕಷ್ಟ ನಿಮಗೆ ಗೊತ್ತಿಲ್ಲವೇ? ಸದನದಲ್ಲಿ ನಾನು ಈ ವಿಷಯವನ್ನು ಪ್ರಸ್ತಾಪ ಮಾಡಿದಾಗ ಐದು ಕೆಜಿಗೆ ಹಣ ಮೀಸಲಿಟ್ಟಿದ್ದ ಅಕ್ಕಿಗಾಗಿ ಮಿಡಿದ ನಿಮ್ಮ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು? ಸುಳ್ಳಿನ ಶೂರ ಸಿದ್ದರಾಮಯ್ಯ ಇನ್ನಾದರೂ ನಿಮ್ಮ ಸುಳ್ಳಿನ ʼಸಿದ್ದಕಲೆʼಗೆ ಕೊನೆ ಹಾಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಾರಿಗೆ ಸಚಿವ ಶ್ರೀರಾಮುಲು ಒಬ್ಬ ಪೆದ್ದ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಇದನ್ನೂ ಓದಿ: ಜಾತಿ ಗಣತಿ ಬಿಡುಗಡೆ ಮಾಡಲು ಹೆಚ್​ಡಿ ಕುಮಾರಸ್ವಾಮಿ ಬಿಡಲಿಲ್ಲ: ಸಿದ್ದರಾಮಯ್ಯ ಆರೋಪ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada