UP Cabinet Expansion: ಇಂದು ಉತ್ತರ ಪ್ರದೇಶ ಸಂಪುಟ ವಿಸ್ತರಣೆ; ಯೋಗಿ ಕ್ಯಾಬಿನೆಟ್ ಸೇರಲಿದ್ದಾರೆ ನೂತನ ಸಚಿವರು
ಸದ್ಯ ಉತ್ತರಪ್ರದೇಶದಲ್ಲಿ 23 ಕ್ಯಾಬಿನೆಟ್ ದರ್ಜೆಯ ಸಚಿವರು, 22 ರಾಜ್ಯ ಸಚಿವರುಗಳು ಮತ್ತು 9 ಸ್ವತಂತ್ರ ಖಾತೆ ಸಚಿವರು ಇದ್ದಾರೆ. ಒಟ್ಟಾರೆ 54 ಸಚಿವರು ಇದ್ದು 6 ಮಂತ್ರಿಹುದ್ದೆಗಳು ಖಾಲಿ ಇವೆ.
ಉತ್ತರಪ್ರದೇಶದಲ್ಲಿ ಇಂದು ಸಂಜೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸಚಿವ ಸಂಪುಟ ವಿಸ್ತರಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ರಾಜ್ಯಪಾಲೆ ಆನಂದಿಬೆನ್ ಪಟೇಲ್ ಲಖನೌಗೆ ತೆರಳಲಿದ್ದಾರೆ. ಇಂದು ಸಂಜೆ 5.30ರ ಹೊತ್ತಿಗೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು,7- 8 ಹೊಸ ಸಚಿವರು ಯೋಗಿ ಆದಿತ್ಯನಾಥ್ ಸಂಪುಟ ಸೇರಲಿದ್ದಾರೆ. ರಾಜಭವನದಲ್ಲಿ ಸಮಾರಂಭದ ಸಿದ್ಧತೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದಲ್ಲಿ ಬರುವ ವರ್ಷ (22) ವಿಧಾನಸಭೆ ಚುನಾವಣೆ ನಡೆಯಲಿದೆ. ಮುಂದಿನ ವಿಧಾನಸಭೆ ಚುನಾವಣೆ ಯೋಗಿ ಆದಿತ್ಯನಾಥ್ ನೇತೃತ್ವದಲ್ಲೇ ನಡೆಯಲಿದೆ ಎಂದು ಕೇಂದ್ರ ನಾಯಕರು ಅದಾಗಲೇ ಹೇಳಿದ್ದರಿಂದ ಅಲ್ಲಿ, ಉಳಿದ ಕೆಲವು ರಾಜ್ಯಗಳಲ್ಲಾದಂತೆ ಚುನಾವಣೆ ಪೂರ್ವ ಮುಖ್ಯಮಂತ್ರಿ ಬದಲಾವಣೆಯಾಗುವ ಸಾಧ್ಯತೆ ಇಲ್ಲ. ಆದರೆ ಇದೀಗ ಯೋಗಿ ಆದಿತ್ಯನಾಥ್ ತಮ್ಮ ಸಂಪುಟ ವಿಸ್ತರಣೆ ಮಾಡಲು ಮುಂದಾಗಿದ್ದಾರೆ. ಇಂದು ಸಂಪುಟ ಸೇರಲಿರುವವರ ಲಿಸ್ಟ್ನಲ್ಲಿ ಜಿತಿನ್ ಪ್ರಸಾದ (ಮೊದಲು ಕಾಂಗ್ರೆಸ್ನಲ್ಲಿದ್ದು ಬಿಜೆಪಿಗೆ ಸೇರ್ಪಡೆಯಾದವರು), ಪ್ರಮುಖ ಮುಖಂಡರಾಗಿದ್ದ ಸಂಜಯ್ ನಿಶಾದ್, ಬೇಬಿ ರಾಣಿ ಮೌರ್ಯಾ, ಸಂಗೀತಾ ಬಲವಂತ್, ತೇಜ್ಪಾಲ್ ನಾಗರ್, ಛತ್ರಪಾಲ್ ಗಾಂಗ್ವಾರ್, ಸಂಜಯ್ ಗೊಂಡ್, ಧರ್ಮವೀರ್ ಪ್ರಜಾಪತಿಯವರ ಹೆಸರು ಇದೆ ಎಂದು ಹೇಳಲಾಗಿದೆ.
ಉತ್ತರಪ್ರದೇಶ ಸಂಪುಟ ವಿಸ್ತರಣೆ ಸಂಬಂಧ ಕಳೆದ ತಿಂಗಳು ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ಮೂರೂವರೆ ತಾಸುಗಳ ಸಭೆ ನಡೆದಿತ್ತು. ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿ ಹಿರಿಯ ಕಾರ್ಯಕಾರಿಗಳಾದ ಸುನೀಲ್ ಬನ್ಸಾಲ್ ಮತ್ತು ಸ್ವತಂತ್ರ ದೇವ್ ಸಿಂಗ್ ಭಾಗವಹಿಸಿದ್ದರು. ಇದೇ ಸಭೆಯಲ್ಲಿ ನೂತನ ಸಚಿವರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಉತ್ತರಪ್ರದೇಶದಲ್ಲಿ 23 ಕ್ಯಾಬಿನೆಟ್ ದರ್ಜೆಯ ಸಚಿವರು, 22 ರಾಜ್ಯ ಸಚಿವರುಗಳು ಮತ್ತು 9 ಸ್ವತಂತ್ರ ಖಾತೆ ಸಚಿವರು ಇದ್ದಾರೆ. ಒಟ್ಟಾರೆ 54 ಸಚಿವರು ಇದ್ದು 6 ಮಂತ್ರಿಹುದ್ದೆಗಳು ಖಾಲಿ ಇವೆ. ಇಂದು ಏಳೆಂಟು ಜನರು ಲಿಸ್ಟ್ನಲ್ಲಿ ಇದ್ದಾರೆಂದು ಹೇಳಲಾಗಿದೆ. ಆದರೆ ಯೋಗಿ ಸರ್ಕಾರ ಹಳೇ ಸಚಿವರಲ್ಲಿ ಯಾರ ಬಳಿಯೂ ರಾಜೀನಾಮೆ ಪಡೆಯಲು ಮುಂದಾಗಿಲ್ಲ ಎಂದೂ ಮೂಲಗಳಿಂದ ಗೊತ್ತಾಗಿದೆ. ಹಾಗಾಗಿ ಎಷ್ಟು ಜನ ಇಂದು ಹೊಸದಾಗಿ ಯೋಗಿ ಆದಿತ್ಯನಾಥ್ ಸಂಪುಟ ಸೇರ್ಪಡೆಯಾಗುತ್ತಾರೆ ಎಂಬುದು ಸ್ಪಷ್ಟವಿಲ್ಲ.
ಇದನ್ನೂ ಓದಿ: ಅಫ್ಘಾನ್ ಪಾಸ್ಪೋರ್ಟ್, ರಾಷ್ಟ್ರೀಯ ಗುರುತಿನ ಚೀಟಿ ಬದಲಾಯಿಸಲಿದೆ ತಾಲಿಬಾನ್: ವರದಿ
ಸಾರಿಗೆ ಸಚಿವ ಶ್ರೀರಾಮುಲು ಒಬ್ಬ ಪೆದ್ದ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
(Uttar Pradesh CM Yogi Adityanath Expands Cabinet Today Ahead of 2022 Assembly Election)