ಯುಎಸ್ನಿಂದ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ; ಬಿಜೆಪಿ ನಾಯಕರಿಂದ ಭರ್ಜರಿ ಸ್ವಾಗತ
PM Narendra Modi: ಅಮೆರಿಕದಲ್ಲಿ ಜೋ ಬೈಡೆನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಯುಎಸ್ಗೆ ಭೇಟಿ ನೀಡಿದ್ದರು.
ಸೆ.23ರಿಂದ ಮೂರು ದಿನಗಳ ಯುಎಸ್ ಪ್ರವಾಸದಲ್ಲಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು (ಭಾನುವಾರ-ಸೆ.26) ಭಾರತಕ್ಕೆ ಆಗಮಿಸಿದ್ದಾರೆ. ಇಂದು ದೆಹಲಿಯ ಪಾಲಂ ತಾಂತ್ರಿಕ ವಿಮಾನ ನಿಲ್ದಾಣಕ್ಕೆ ಬಂದಿಳಿದ ನರೇಂದ್ರ ಮೋದಿಯವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಸೇರಿ ಹಲವು ಮುಖಂಡರು ಸ್ವಾಗತಿಸಿದರು. ಬಹುದೊಡ್ಡ ಹೂವಿನ ಹಾರ ಹಾಕಿ, ಶಾಲು ಹೊದೆಸಿದರು. ಏರ್ಪೋರ್ಟ್ನಲ್ಲಿ ತಮ್ಮನ್ನು ಸ್ವಾಗತಿಸಿದ ಬಿಜೆಪಿ ನಾಯಕರಿಗೆ ಧನ್ಯವಾದ ಸಲ್ಲಿಸಿದ ಅವರು, ಅಲ್ಲಿಂದ ತಮ್ಮ ನಿವಾಸದ ಕಡೆಗೆ ಹೊರಟರು.
ಅಮೆರಿಕದಲ್ಲಿ ಜೋ ಬೈಡೆನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಯುಎಸ್ಗೆ ಭೇಟಿ ನೀಡಿದ್ದರು. ಸೆಪ್ಟೆಂಬರ್ 23ರಂದು ಅಮೆರಿಕಕ್ಕೆ ತೆರಳಿದ ಅವರು ಅಂದು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದೆ ಸುಗಾರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಕಮಲಾ ಹ್ಯಾರಿಸ್ಗೆ ಅವರ ತಾತ ಗೋಪಾಲನ್ ಅವರಿಗೆ ಸಂಬಂಧಪಟ್ಟ ಅಧಿಸೂಚನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದರು.
BJP president JP Nadda and other leaders greet PM Narendra Modi, on his arrival from the US, after concluding bilateral and Quad talks. pic.twitter.com/Tp2qfZ8YV2
— ANI (@ANI) September 26, 2021
ಇನ್ನು ಎರಡನೇ ದಿನ ಅಂದರೆ ಸೆಪ್ಟೆಂಬರ್ 24ರಂದು ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇದು ಅಮೆರಿಕ, ಭಾರತ, ಆಸ್ಟ್ರೇಲಿಯಾ, ಜಪಾನ್ ದೇಶಗಳನ್ನೊಂಡ ಸಂಘಟನೆಯಾಗಿದ್ದು, ನಾಲ್ಕೂ ರಾಷ್ಟ್ರಗಳ ನಾಯಕರು ಭಾಗವಹಿಸಿ, ಜಾಗತಿಕ ಶಾಂತಿ ಸ್ಥಾಪನೆ ಬಗ್ಗೆ ಚರ್ಚಿಸಿದರು. ಅದರಲ್ಲೂ ಮುಖ್ಯವಾಗಿ ಇಂಡೋ-ಫೆಸಿಪಿಕ್ ಪ್ರದೇಶದ ಅಭಿವೃದ್ಧಿ, ಶಾಂತಿ ಸ್ಥಾಪನೆಯ ಬಗ್ಗೆ ಮಾತುಕತೆ ನಡೆಸಿದರು.
ನಂತರ ಸೆಪ್ಟೆಂಬರ್ 25ರಂದು ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ್ದಾರೆ. ಪಾಕಿಸ್ತಾನ ಹಾಗೂ ಚೀನಾ ವಿರುದ್ಧ ಪರೋಕ್ಷವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಫ್ಘಾನಿಸ್ತಾನದ ಬೆಳವಣಿಗೆ ಬಗ್ಗೆ ಮಾತನಾಡಿ, ಅಫ್ಘಾನ್ ನೆಲವನ್ನು ಭಯೋತ್ಪಾದನೆ ಕೃತ್ಯಗಳಿಗೆ ಬಳಸಿಕೊಳ್ಳಬೇಡಿ ಎಂದು ತಾಲಿಬಾನಿಗಳಿಗೆ ಸಂದೇಶ ನೀಡಿದ್ದರು.
ಇದನ್ನೂ ಓದಿ: PM Modi in UNGA Summit: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭ
(PM Narendra Modi landed in India after concluding his three day visit to the US)