ಭಾರತೀಯ ವಾಯುಸೇನೆ ಮಹಿಳಾ ಅಧಿಕಾರಿ ಮೇಲೆ ಅತ್ಯಾಚಾರ; ಐಎಎಫ್ ಲೆಫ್ಟಿನೆಂಟ್ ಬಂಧನ
ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಫ್ಲೈಟ್ ಲೆಫ್ಟಿನೆಂಟ್ ಅಮರಿಂದರ್ ಅವರನ್ನು ನ್ಯಾಯಾಧೀಶರ ಮನೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು.ಇವರು ಚತ್ತೀಸ್ಗಡ್ನವರೆಂದು ಹೇಳಲಾಗಿದೆ.
ಭಾರತೀಯ ವಾಯುಸೇನೆಯ ಮಹಿಳಾ ಅಧಿಕಾರಿಯನ್ನು ಅತ್ಯಾಚಾರ ಮಾಡಿದ ಆರೋಪದಡಿ ಐಎಎಫ್ನ ಫ್ಲೈಟ್ ಲೆಫ್ಟಿನೆಂಟ್ ಒಬ್ಬರನ್ನು ಬಂಧಿಸಲಾಗಿದ್ದು, ಭಾರತೀಯ ದಂಡಸಂಹಿತೆ ಕಾಯ್ದೆಯ ಸೆಕ್ಷನ್ 376ರಡಿ ಪ್ರಕರಣ ದಾಖಲಿಸಲಾಗಿದೆ. ಈ ಲೆಫ್ಟಿನೆಂಟ್ ಅಧಿಕಾರಿ ತಮಿಳುನಾಡಿನ ಕೊಯಮತ್ತೂರ್ನಲ್ಲಿರುವ ರೆಡ್ಫೀಲ್ಡ್ ಏರ್ ಫೋರ್ಸ್ ಕಾಲೇಜಿನವರು. ಸದ್ಯ ಇವರನ್ನು ಉದುಮಲಪೇಟ್ ಜೈಲಿಗೆ ಹಾಕಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಕೊಯಮತ್ತೂರ್ ಪೊಲೀಸರು ತಿಳಿಸಿದ್ದಾರೆ.
ಐಎಎಫ್ ಮಹಿಳಾ ಅಧಿಕಾರಿಯ ಮೇಲೆ ಕೊಯಮತ್ತೂರ್ ಏರ್ಪೋರ್ಸ್ ಆಡಳಿತಾತ್ಮಕ ಕಾಲೇಜಿನಲ್ಲಿ ಅತ್ಯಾಚಾರ ನಡೆದಿದೆ. ಎರಡು ವಾರಗಳ ಹಿಂದೆಯೇ ಕೃತ್ಯ ನಡೆದಿದ್ದು, ಅಧಿಕಾರಿ ಐಎಫ್ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಆದರೆ ಇದುವರೆಗೂ ಅವರು ಲೆಫ್ಟಿನೆಂಟ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ. ಅದಾದ ನಂತರ ಕೊಯಮತ್ತೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಮಹಿಳಾ ಅಧಿಕಾರಿ, ಲೆಫ್ಟಿನೆಂಟ್ ವಿಚಾರಣೆಯನ್ನು ಐಎಎಫ್ ಹಿರಿಯ ಅಧಿಕಾರಿಗಳು ಮಾಡಿದ್ದಾರೆ. ಆದರೆ ನನಗೆ ಅದು ತೃಪ್ತಿ ತಂದಿಲ್ಲ ಎಂದು ಹೇಳಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಮಹಿಳಾ ಅಧಿಕಾರಿಗೆ 29 ವರ್ಷ ವಯಸ್ಸಾಗಿದೆ. ಇವರು ಕೊಯಮತ್ತೂರಿನ ಏರ್ಫೋರ್ಸ್ ಕಾಲೇಜಿನ ವಸತಿ ಸೌಲಭ್ಯದಲ್ಲಿಯೇ ವಾಸವಾಗಿದ್ದರು. ಇಲ್ಲಿ ಒಟ್ಟು 30 ಅಧಿಕಾರಿಗಳು ಕಳೆದ ತಿಂಗಳಿಂದಲೂ ಇಲ್ಲಿ ತರಬೇತಿಯಲ್ಲಿದ್ದಾರೆ. ತಮ್ಮ ಮೇಲೆ ಅತ್ಯಾಚಾರ ನಡೆದ ಘಟನೆ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ನಾನು ಸೆಪ್ಟೆಂಬರ್ 10ರಂದು ಕ್ರೀಡೆಯೊಂದರಲ್ಲಿ ಭಾಗವಹಿಸಿದ್ದಾಗ ಬಿದ್ದು ಏಟಾಗಿತ್ತು. ನಂತರ ನಾನು ಔಷಧ ತೆಗೆದುಕೊಂಡು ಹೋಗಿ ಕೋಣೆಯಲ್ಲಿ ಮಲಗಿದ್ದೆ. ಆದರೆ ಮಧ್ಯ ರಾತ್ರಿ ಎಚ್ಚರವಾದಾಗ ನನ್ನ ಮೇಲೆ ಅತ್ಯಾಚಾರ ಆಗಿದ್ದು ಗೊತ್ತಾಯ್ತು ಎಂದು ಹೇಳಿದ್ದಾರೆ. ಮಹಿಳಾ ಅಧಿಕಾರಿ ಕೊಯಮತ್ತೂರು ಪೊಲೀಸ್ ಆಯುಕ್ತರ ಕಚೇರಗೆ ನೇರವಾಗಿ ದೂರು ನೀಡಿದ್ದಾರೆ. ಅದಾದ ಬಳಿಕ ಪೊಲೀಸ್ ಆಯುಕ್ತರು ಗಾಂಧಿಪುರಂನಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿ, ತನಿಖೆ ನಡೆಸಲು ಹೇಳಿದ್ದಾರೆ.
ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಫ್ಲೈಟ್ ಲೆಫ್ಟಿನೆಂಟ್ ಅಮರಿಂದರ್ ಅವರನ್ನು ನ್ಯಾಯಾಧೀಶರ ಮನೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು.ಇವರು ಚತ್ತೀಸ್ಗಡ್ನವರೆಂದು ಹೇಳಲಾಗಿದೆ. ಇನ್ನು ಲೆಫ್ಟಿನೆಂಟ್ ವಿರುದ್ಧ ತನಿಖೆ ನಡೆಸಲು ಕೊಯಮತ್ತೂರ್ ಪೊಲೀಸರಿಗೆ ಯಾವುದೇ ಅಧಿಕಾರ ಇಲ್ಲ ಎಂದು ಅಮರಿಂದರ್ ಪರ ವಕೀಲರು ನ್ಯಾಯಾಧೀಶರಿಗೆ ವರದಿ ಸಲ್ಲಿಸಿದ್ದಾರೆ. ಇನ್ನು ವಿಚಾರಣೆ ರಕ್ಷಣಾ ನ್ಯಾಯಾಲಯದಲ್ಲೇ ನಡೆಯಬೇಕು ಎಂದೂ ಹೇಳಿದ್ದಾರೆ. ಇದಕ್ಕೆ ಪ್ರತಿ ಅಫಿಡಿವಿಟ್ ಸಲ್ಲಿಸಲು ಕಾಲಾವಕಾಶ ಕೊಡುವಂತೆ ಕೊಯಮತ್ತೂರು ಪೊಲೀಸರು ನ್ಯಾಯಾಧೀಶರ ಬಳಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Redmi 9 Activ: ಸದ್ದಿಲ್ಲದೆ ಹೊಸ ಸ್ಮಾರ್ಟ್ಫೋನ್ ರಿಲೀಸ್ ಮಾಡಿ ಮಾರಾಟ ಕೂಡ ಶುರು ಮಾಡಿದ ರೆಡ್ಮಿ
Published On - 2:14 pm, Sun, 26 September 21