Mann ki Baat: ವಿಶ್ವ ನದಿಗಳ ದಿನವನ್ನು ನೆನಪಿಸಿದ ಪ್ರಧಾನಿ ಮೋದಿ; ವರ್ಷಕ್ಕೊಮ್ಮೆಯಾದರೂ ನದಿಗಳ ಉತ್ಸವ ನಡೆಸಲು ಮನ್​ ಕೀ ಬಾತ್​​ನಲ್ಲಿ ಕರೆ

TV9 Digital Desk

| Edited By: Lakshmi Hegde

Updated on:Sep 26, 2021 | 12:09 PM

PM Narendra Modi: ನದಿಗಳ ಬಗ್ಗೆ ಮುಂದುವರಿದು ಮಾತನಾಡಿದ ಮೋದಿ, ನಮಾಮಿ ಗಂಗಾ ಮಿಷನ್​​ನ್ನು ನೆನಪಿಸಿದರು. ದೇಶದ ಪವಿತ್ರ ನದಿ ಗಂಗೆಯನ್ನು ಸ್ವಚ್ಛಗೊಳಿಸುವ ಈ ನಮಾಮಿ ಗಂಗಾ ಯೋಜನೆ ಅದ್ಭುತ ಯಶಸ್ಸು ಕಾಣುತ್ತಿದೆ ಎಂದು ತಿಳಿಸಿದರು.

Mann ki Baat: ವಿಶ್ವ ನದಿಗಳ ದಿನವನ್ನು ನೆನಪಿಸಿದ ಪ್ರಧಾನಿ ಮೋದಿ; ವರ್ಷಕ್ಕೊಮ್ಮೆಯಾದರೂ ನದಿಗಳ ಉತ್ಸವ ನಡೆಸಲು ಮನ್​ ಕೀ ಬಾತ್​​ನಲ್ಲಿ ಕರೆ
ಪ್ರಧಾನಿ ನರೇಂದ್ರ ಮೋದಿ
Follow us

ಪ್ರಧಾನಿ ನರೇಂದ್ರ ಮೋದಿ (PM Modi) ಯವರು ಇಂದು ತಮ್ಮ ಮನ್​ ಕೀ ಬಾತ್​ (Mann Ki Baat) ಪ್ರಾರಂಭದಲ್ಲಿ ಮೊಟ್ಟಮೊದಲಿಗೆ ನದಿಗಳ ಬಗ್ಗೆ ಮಾತನಾಡಿದರು. ಇಂದು ವಿಶ್ವ ನದಿಗಳ ದಿನದ ಹಿನ್ನೆಲೆಯಲ್ಲಿ ನದಿಗಳ ಬಗ್ಗೆ ಮಾತನಾಡಿದ ಅವರು, ಸೆಪ್ಟೆಂಬರ್​ ಒಂದು ಅತ್ಯಂತ ಮಹತ್ವದ ತಿಂಗಳು. ಈ ತಿಂಗಳಲ್ಲಿ ವಿಶ್ವ ನದಿಗಳ ದಿನವನ್ನು ಆಚರಿಸುತ್ತೇವೆ. ನದಿಗಳು ನಮಗೆ ನಿಸ್ವಾರ್ಥವಾಗಿ ನೀರು ನೀಡುತ್ತವೆ. ಅವುಗಳ ಪರೋಪಕಾರವನ್ನು ನಾವು ಸ್ಮರಿಸಬೇಕು ಎಂದು ಹೇಳಿದರು.  ನೀರಿನ ಹನಿಹನಿಯೂ ತುಂಬ ಮುಖ್ಯ. ದೇಶಾದ್ಯಂತ ನದಿ ದಡದ ಮೇಲೆ ವಾಸಿಸುವ ಜನರು ವರ್ಷದಲ್ಲಿ ಒಮ್ಮೆಯಾದರೂ ನದಿಗಳ ಉತ್ಸವ (River Festival) ನಡೆಸಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು.

ನದಿಗಳ ಬಗ್ಗೆ ಮುಂದುವರಿದು ಮಾತನಾಡಿದ ಮೋದಿ, ನಮಾಮಿ ಗಂಗಾ ಮಿಷನ್​​ನ್ನು ನೆನಪಿಸಿದರು. ದೇಶದ ಪವಿತ್ರ ನದಿ ಗಂಗೆಯನ್ನು ಸ್ವಚ್ಛಗೊಳಿಸುವ ಈ ನಮಾಮಿ ಗಂಗಾ ಯೋಜನೆ ಅದ್ಭುತ ಯಶಸ್ಸು ಕಾಣುತ್ತಿದೆ. ಜನರೂ ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.   ತಮಿಳುನಾಡಿನ ನಾಗಾ ನದಿಯ ಉಲ್ಲೇಖ ಮಾಡಿ, ಈ ನಾಗಾ ನದಿ ಒಣಗಿ ಹೋಗಿತ್ತು. ಆದರೆ ಅಲ್ಲಿನ ಹಳ್ಳಿಗಳ ಮಹಿಳೆಯರು, ಸಾರ್ವಜನಿಕರು ಸೇರಿ ನದಿಗೆ ಹೊಸ ಜೀವ ನೀಡಿದರು. ಸ್ವತಃ ಅವರೇ ಕೆಲಸ ಮಾಡಿ ಚೆಕ್​ ಡ್ಯಾಂ ನಿರ್ಮಿಸಿಕೊಂಡರು. ಅಲ್ಲೀಗ ಹೇರಳವಾಗಿ ನೀರಿದೆ. ಇದು ತುಂಬ ಖುಷಿಕೊಟ್ಟ ವಿಚಾರ ಎಂದೂ ತಿಳಿಸಿದರು.  ಭಾರತದ ಪಶ್ಚಿಮ ಭಾಗದಲ್ಲಿ, ಅದರಲ್ಲೂ ವಿಶೇಷವಾಗಿ ಗುಜರಾತ್​ ಮತ್ತು ರಾಜಸ್ಥಾನಗಳಲ್ಲಿ ನೀರಿನ ತೀವ್ರ ಅಭಾವ ಇದೆ. ಬರಗಾಲ ಬಾಧಿಸುತ್ತದೆ.  ಸರಿಯಾಗಿ ಮಳೆ ಬರಲಿ ಎಂಬ ಪ್ರಾರ್ಥನೆಯೊಂದಿಗೆ ಗುಜರಾತ್​​ನ ಜನರು ಮಳೆಗಾಲದ ಪ್ರಾರಂಭದಲ್ಲಿ ಜಲ-ಜಿಲಾನಿ ಏಕಾದಶಿ ಆಚರಿಸುತ್ತಾರೆ. ಇದು ನೀರಿನ ಮಹತ್ವವನ್ನು ಸಾರುತ್ತದೆ ಎಂದು ನರೇಂದ್ರ ಮೋದಿ ಹೇಳಿದರು.

ಗಂಗಾನದಿ ದಡದ ಮೇಲೆ ಕಲ್ಪವಾಸ ಮಾಘ ಮಾಸದ ಆಗಮನವಾಗುತ್ತಿದ್ದಂತೆ ನಮ್ಮ ದೇಶದಲ್ಲಿ ಗಂಗಾನದಿ ಸೇರಿ ಹಲವು ನದಿಗಳ ತಟದಲ್ಲಿ ಕಲ್ಪಾವಾಸ ಆಚರಿಸುತ್ತಾರೆ. ಇಡೀ ತಿಂಗಳೂ ಈ ಆಚರಣೆ ಇರುತ್ತಿತ್ತು. ಆದರೆ ಈಗೀಗ ಕಲ್ಪಾವಾಸ ಕಡಿಮೆಯಾಗುತ್ತಿದೆ. ಹಿಂದೆಲ್ಲ ಜನರು ಮನೆಯಲ್ಲಿ ಸ್ನಾನ ಮಾಡುವಾಗಲೂ ನದಿಗಳ ಹೆಸರನ್ನು ಸ್ಮರಿಸುತ್ತಿದ್ದರು. ಆದರೆ ಈ ಸಂಪ್ರದಾಯವೂ ಈಗ ಕಡಿಮೆಯಾಗಿದೆ. ಕೆಲವೊಂದು ಕಡೆಗಳಲ್ಲಿ ಅಸ್ತಿತ್ವದಲ್ಲಿ ಇರಬಹುದು ಎಂದು ಹೇಳಿದರು.

ದೇಶಾದ್ಯಂತ ನದಿಗಳ ಪುನಶ್ಚೇತನ, ಸ್ವಚ್ಛತೆಗಾಗಿ ಸರ್ಕಾರಗಳು, ವಿವಿಧ ಸಂಘ-ಸಂಸ್ಥೆಗಳು ಕೆಲಸ ಮಾಡುತ್ತಲೇ ಇರುತ್ತವೆ. ದಶಕಗಳಿಂದಲೂ ಇದು ನಡೆದುಕೊಂಡು ಬಂದಿದೆ.  ಭಾರತದ ನದಿಗಳು ಕೇವಲ ಭೌತಿಕ ಅಂಶವಲ್ಲ. ಅವುಗಳಿಗೂ ಜೀವ ಇದೆ. ನದಿಗಳನ್ನು ಸ್ವಲ್ಪವೇ ಮಲಿನಗೊಳಿಸಿದರೂ ಅದು ತಪ್ಪು ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಪ್ರತಿಯೊಬ್ಬರೂ ನದಿಗಳನ್ನು ಸ್ವಚ್ಛವಾಗಿಡಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿಯವರ ಸ್ವಚ್ಛತಾ ತತ್ವ ಅಳವಡಿಸಿಕೊಳ್ಳಬೇಕು. ಗಾಂಧೀಜಿಯವರು ಶುಚಿತ್ವವನ್ನು ಸಾಮೂಹಿಕ ಚಳವಳಿಯನ್ನಾಗಿ ರೂಪಿಸಿದ್ದರು. ನಾವೂ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಖಾದಿಯನ್ನು ಬಳಕೆ ಮಾಡಲು ಸಲಹೆ ಅಕ್ಟೋಬರ್ 2 ಗಾಂಧೀಜಯಂತಿ ಕೆಲವೇ ದಿನಗಳಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಇಂದು ಮನ್​ ಕೀ ಬಾತ್​ನಲ್ಲಿ ಆ ಬಗ್ಗೆಯೂ ಉಲ್ಲೇಖ ಮಾಡಿದರು. ಗಾಂಧಿ ಜಯಂತಿ ನಿಮಿತ್ತ ಜನರು ಖಾದಿ ಉತ್ಪನ್ನಗಳು ಖರೀದಿಸಬೇಕು. ಈ ಮೂಲಕ ಗಾಂಧೀಜಿಯವರಿಗೆ ಗೌರವ ಸಲ್ಲಿಸಬೇಕು. ಗಾಂಧೀಜಿಯವರು ಸ್ವಾತಂತ್ರ್ಯದೊಂದಿಗೆ ಸ್ವಚ್ಛತೆಯ ಕನಸನ್ನೂ ಹೊಂದಿದ್ದರು. ಆಗ ಸ್ವಾತಂತ್ರ್ಯ ಹೋರಾಟಕ್ಕೆ ಸ್ವಚ್ಛತಾ ಅಭಿಯಾನ ನಿರಂತರ ಶಕ್ತಿ ನೀಡಿದ್ದರ ಬಗ್ಗೆ ಇಂದಿನ ಯುವಕರು ಅರಿತುಕೊಳ್ಳಬೇಕು ಎಂದು ಹೇಳಿದರು.  ಇನ್ನು ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕೋತ್ಸವದ ನಿಮಿತ್ತ ಕೇಂದ್ರ ಸರ್ಕಾರ ಆಚರಿಸುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವ್​ ಬಗ್ಗೆಯೂ ಮೋದಿ ಮಾತನಾಡಿದರು.

ಸೆ.25 ಮಹತ್ವದ ದಿನ ನಿನ್ನೆ ಸೆಪ್ಟೆಂಬರ್​ 25 ತುಂಬ ಮಹತ್ವದ ದಿನವಾಗಿದೆ. ಈ ದೇಶದ ಹೆಮ್ಮೆಯ ಪುತ್ರ ಪಂಡಿತ್​ ದೀನ್​ ದಯಾಳ್​ ಉಪಾಧ್ಯಾಯ ಅವರ ಜನ್ಮ ದಿನ ಮತ್ತು ಮೂರು ವರ್ಷಗಳ ಹಿಂದೆ ಇದೇ ದಿನ ನಮ್ಮ ದೇಶದಲ್ಲಿ ಆಯುಷ್ಮಾನ್​ ಭಾರತ್​ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಲಾಯಿತು. ಇದು ಜಗತ್ತಿನ ಅತ್ಯಂತ ದೊಡ್ಡ ಆರೋಗ್ಯ ಭಾಗ್ಯ ಯೋಜನೆಯಾಗಿದೆ ಎಂದು ಮೋದಿ ನೆನಪಿಸಿದರು.  ಹಾಗೇ, ದೇಶದಲ್ಲಿ ಒಂದಲ್ಲ ಒಂದು ಹಬ್ಬಗಳು ನಡೆಯುತ್ತಲೇ ಇವೆ. ಆದರೆ ಜನರು ಕೊವಿಡ್​ 19 ಸಾಂಕ್ರಾಮಿಕದ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಕೊರೊನಾ ನಿಯಂತ್ರಣದ ಸುರಕ್ಷಾ ಚಕ್ರ ಶಿಷ್ಟಾಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದೂ ಹೇಳಿದರು.

ಇದನ್ನೂ ಓದಿ: ಚಾಮರಾಜನಗರ: ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆತಂಕ ಮೂಡಿಸಿದ್ದ ಚಿರತೆ ಸೆರೆ, ನಿಟ್ಟುಸಿರುಬಿಟ್ಟ ಜನ

Viral Video: ರಸ್ತೆ ಗುಂಡಿಗಳ ಸಮಸ್ಯೆಯನ್ನು ಹೀಗೂ ಹೇಳಬಹುದಾ?; ಮಜವಾದ ಈ ವಿಡಿಯೊ ನೋಡಿ

(I urge the people across the country to mark a river festival at least once a year Says PM Modi in Mann ki Baat)

ತಾಜಾ ಸುದ್ದಿ

Related Stories

Click on your DTH Provider to Add TV9 Kannada