ಕೋಲಾರದಿಂದ ಕಣಕ್ಕಿಳಿಯಲು ಸಜ್ಜಾದ ಸಿದ್ಧರಾಮಯ್ಯ, ಬಾದಾಮಿ ಮುಖಂಡರಿಗೆ ಬಿಗ್ ಶಾಕ್​: ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದ ಕಾರ್ಯಕರ್ತರು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 09, 2023 | 9:28 PM

ಸಿದ್ಧರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ ಘೋಷಿಸುತ್ತಿದಂತೆ ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಗೆ ಬರ ಸಿಡಿಲು ಅಪ್ಪಳಿಸಿದ ಹಾಗೆ ಆಗಿದೆ.

ಕೋಲಾರದಿಂದ ಕಣಕ್ಕಿಳಿಯಲು ಸಜ್ಜಾದ ಸಿದ್ಧರಾಮಯ್ಯ, ಬಾದಾಮಿ ಮುಖಂಡರಿಗೆ ಬಿಗ್ ಶಾಕ್​: ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದ ಕಾರ್ಯಕರ್ತರು
ಸಿದ್ದರಾಮಯ್ಯ
Image Credit source: indianexpress.com
Follow us on

ಬಾಗಲಕೋಟೆ: ಇನ್ನೇನು ಕೆಲವೇ ತಿಂಗಳಲ್ಲಿ 2023ರ ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಕೋಲಾರದಿಂದ ಸ್ಪರ್ಧಿಸುವುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ (Siddaramaiah) ಅವರು ಇಂದು(ಜ. 9) ಬಹಿರಂಗವಾಗಿ ಘೋಷಣೆ ಮಾಡಿದರು. ಇತ್ತ ಸಿದ್ಧರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ ಘೋಷಿಸುತ್ತಿದಂತೆ ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಗೆ ಬರ ಸಿಡಿಲು ಅಪ್ಪಳಿಸಿದ ಹಾಗೆ ಆಗಿದೆ. ಈ ಕುರಿತಾಗಿ ಬಾದಾಮಿ ಕಾಂಗ್ರೆಸ್ ಮುಖಂಡರು ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು. ಇಲ್ಲದಿದ್ದರೆ ಅವರ ಮನೆ ಮುಂದೆ ಧರಣಿ ಕೂಡುತ್ತೇವೆ. ಹೇಗಾದ್ರು ಮಾಡಿ ವಾಪಸ್ ಬಾದಾಮಿ ಕ್ಷೇತ್ರಕ್ಕೆ ಕರೆ ತರುತ್ತೇವೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯನವರ ಆಪ್ತ ಹೊಳೆಬಸು ಶೆಟ್ಟರ್, ಮುಖಂಡರಾದ ಮುಚಖಂಡಯ್ಯ ಹಂಗರಗಿ, ರಾಜಮಹ್ಮದ್ ಭಾಗವಾನ್ ಹೇಳಿದರು. ಸಿದ್ಧರಾಮಯ್ಯನವರ ಮನವೊಲಿಸಲು ಕಾಂಗ್ರೆಸ್​ನ ಮುಖಂಡರು ಹಾಗೂ ಕಾರ್ಯಕರ್ತರ ಒಂದು ಗುಂಪಿನಿಂದ ತಯಾರಿ ನಡೆಸಿದ್ದಾರೆ. ಸಿದ್ಧರಾಮಯ್ಯನವರ ಮನೆ ಮುಂದೆ ಧರಣಿ ನಡೆಸಿ ಮತ್ತೆ ಬಾದಾಮಿ ಕ್ಷೇತ್ರಕ್ಕೆ ಕರೆ ತರುತ್ತೇವೆ‌. ಬಾದಾಮಿ ಕ್ಷೇತ್ರ ಅವರಿಗೆ ದೂರ ಎನಿಸಿದರೆ ಹೆಲಿಕಾಪ್ಟರ್ ಕೊಡಿಸಲು ಸಿದ್ದ ಎಂದು ಕಾರ್ಯಕರ್ತರು ತಿಳಿಸಿದರು.

ಕೋಲಾರ ಕ್ಷೇತ್ರದಿಂದ ಸಿದ್ಧರಾಮಯ್ಯ ಕಣಕ್ಕೆ

ನಿಮ್ಮ ಪ್ರೀತಿ, ಅಭಿಮಾನವನ್ನು ತಿರಸ್ಕಾರ ಮಾಡಲು ಸಾಧ್ಯವಿಲ್ಲ. ನಾನು ಕೋಲಾರದಿಂದ ಸ್ಪರ್ಧಿಸಲು ತೀರ್ಮಾನ ಮಾಡಿದ್ದು, ಹೈಕಮಾಂಡ್​ ಸೂಚಿಸಿದರೆ ಕೋಲಾರದಿಂದ ಸ್ಪರ್ಧಿಸಲು ಸಿದ್ಧ. ನನ್ನ ಸ್ಪರ್ಧೆಗೆ ಹೈಕಮಾಂಡ್ ತೀರ್ಮಾನ ಕೂಡ ಬೇಕಾಗುತ್ತದೆ. ಅಹಿಂದ ಮತಗಳ ಮೇಲೆ ವಿಶ್ವಾಸವಿಟ್ಟು ಕೋಲಾರ ಕ್ಷೇತ್ರ ಘೋಷಣೆ ಮಾಡಿದ್ರ ಮಾಜಿ ಸಿಎಂ ಸಿದ್ಧರಾಮಯ್ಯ ಎನ್ನುವ ಪ್ರಶ್ನೆಗಳು ಸಹ ಹುಟ್ಟಿಕೊಂಡಿವೆ.

ಇದನ್ನೂ ಓದಿ: Siddaramaiah: ನಾನು ಕೋಲಾರದಿಂದ ಸ್ಪರ್ಧಿಸಲು ಸಿದ್ಧ, ಆದರೆ ಹೈಕಮಾಂಡ್ ತೀರ್ಮಾನಿಸಬೇಕು: ಸಿದ್ಧರಾಮಯ್ಯ

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಿದರೆ ಸ್ವಾಗತ: ಕೆ.ಹೆಚ್​.ಮುನಿಯಪ್ಪ

ಸಮಾವೇಶದಲ್ಲಿ ಮಾಜಿ ಸಂಸದ ಕೆ.ಹೆಚ್​.ಮುನಿಯಪ್ಪ ಮಾತನಾಡಿ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಿದರೆ ಸ್ವಾಗತ ಮಾಡುತ್ತೇವೆ. ಅವರ ಪರ ನಾವು ಕೆಲಸ ಮಾಡುತ್ತೇವೆ. ಆದರೆ ಅಭ್ಯರ್ಥಿ ಆಯ್ಕೆ ಬಗ್ಗೆ ಕಾಂಗ್ರೆಸ್​ ಪಕ್ಷದಲ್ಲಿ ನಿಯಮ ಇದೆ. ಪಕ್ಷದಲ್ಲಿ ಎಲೆಕ್ಷನ್ ಕಮಿಟಿ, ಸ್ಕ್ರೀನಿಂಗ್ ಕಮಿಟಿ ಇದೆ.

ಕೆಪಿಸಿಸಿ ಅಧ್ಯಕ್ಷರಾಗಲಿ, ಸಿಎಲ್​ಪಿ ನಾಯಕ ಸೇರಿ ಯಾರೇ ಆಗಲಿ ಪಕ್ಷದ ನಿಯಮದ ಪ್ರಕಾರವೇ ಅಭ್ಯರ್ಥಿ ಆಯ್ಕೆ ನಡೆಯಲಿದೆ. ಮೊದಲು ಎಲೆಕ್ಷನ್, ಸ್ಕ್ರೀನಿಂಗ್ ಕಮಿಟಿಯಲ್ಲಿ ಆಯ್ಕೆ ಆಗಬೇಕು. ಅಲ್ಲಿ ಆಯ್ಕೆಯಾಗಿ ಸ್ಪರ್ಧೆ ಮಾಡಿದರೆ ನಿಮ್ಮ ಪರವಾಗಿ ಹೃದಯಪೂರ್ವಕವಾಗಿ ಕೆಲಸ ಮಾಡುವೆ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಅಹಿಂದ ನಾಯಕನೇ ಅಲ್ಲ; ದಲಿತ ಸಮಾಜ ತಕ್ಕ ಪಾಠ ಕಲಿಸುತ್ತದೆ: ವರ್ತೂರ್​ ಪ್ರಕಾಶ್

ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ ವರ್ತೂರ್​ ಪ್ರಕಾಶ್​ 

ಇನ್ನು ಮಾಜಿ ಸಚಿವ ವರ್ತೂರ್​ ಪ್ರಕಾಶ್​ ಮಾತನಾಡಿ ಮಗನ ಮೇಲಿನ ವ್ಯಾಮೋಹದಿಂದ ಕೋಲಾರಕ್ಕೆ ಬಂದಿದ್ದಾರೆ. ನನ್ನ ಮೇಲೆ ಸ್ಪರ್ಧೆ ಮಾಡಲು ಬಂದಿರುವ ಸಿದ್ದರಾಮಯ್ಯ ಅಹಿಂದ ನಾಯಕನೇ ಅಲ್ಲ ಎಂದು ವಾಗ್ದಾಳಿ ಮಾಡಿದರು.  ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಒಬ್ಬ ಅಹಿಂದ ಮುಖಂಡ ನನ್ನ ವಿರುದ್ದ ಸ್ಪರ್ಧೆ ಮಾಡಲು ಬಂದಿರುವ ಸಿದ್ದರಾಮಯ್ಯಗೆ ಅಹಿಂದ ಮತದಾರರೇ ಸರಿಯಾದ ಪಾಠ ಕಲಿಸುತ್ತಾರೆ. ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರ ಮತ ಕೇಳಲು ಯಾರು ಇಲ್ಲ. ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಮಾತ್ರ ಪ್ರಬಲ, ಕೋಲಾರದಲ್ಲಲ್ಲಾ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್​​ಗೆ ಇಡೀ ರಾಜ್ಯದಲ್ಲೇ ಹಿನ್ನೆಡೆಯಾಗುತ್ತದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:24 pm, Mon, 9 January 23