ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ಹಿಂಸಾಚಾರ​​: ಕಿಡಿಗೇಡಿಗಳಿಗೆ ಖಾಕಿ ಶಾಕ್​; 17 ಮಂದಿ ಅರೆಸ್ಟ್​​

ಬಾಗಲಕೋಟೆ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಆರೋಪಿಗಳಿಗೆ ಪೊಲೀಸರು ಶಾಕ್​​ ಕೊಟ್ಟಿದ್ದಾರೆ. ಜೊತೆಗೆ ಘಟನೆಗೆ ಕಾರಣರಾದವರು ರೈತರಲ್ಲ, ಕಿಡಿಗೇಡಿಗಳು ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ವಿಡಿಯೋ ಸಾಕ್ಷ್ಯ ಆಧರಿಸಿ ಆರೋಪಿಗಳನ್ನು ಅರೆಸ್ಟ್​​ ಮಾಡಲಾಗಿದ್ದು, ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ಹಿಂಸಾಚಾರ​​: ಕಿಡಿಗೇಡಿಗಳಿಗೆ ಖಾಕಿ ಶಾಕ್​; 17 ಮಂದಿ ಅರೆಸ್ಟ್​​
ಕಿಡಿಗೇಡಿಗಳಿಂದ ಟ್ರ್ಯಾಕ್ಟರ್​​ಗಳಿಗೆ ಬೆಂಕಿ
Updated By: ಪ್ರಸನ್ನ ಹೆಗಡೆ

Updated on: Nov 26, 2025 | 4:20 PM

ಬಾಗಲಕೋಟೆ, ನವೆಂಬರ್​​ 26: ಕಬ್ಬಿಗೆ ಯೋಗ್ಯ ಬೆಲೆಗೆ ಆಗ್ರಹಿಸಿ ರಬಕವಿಬನಹಟ್ಟಿ ತಾಲ್ಲೂಕಿನ ಸಮೀರವಾಡಿ ಬಳಿಯ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ರೈತರ ಪ್ರತಿಭಟನೆ ವೇಳೆ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದ ಘಟನೆ ಸಂಬಂಧ 17 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಆರೋಪಿಗಳು ಕಿಡಿಗೇಡಿಗಳು, ರೈತರಲ್ಲ ಎಂಬುದು ಬಹಿರಂಗಗೊಂಡಿದೆ.

ಘಟನೆ ಸಂಬಂಧ ತನಿಖೆಗೆ ಮುಂದಾಗಿದ್ದ ಪೊಲೀಸರು ಘಟನೆಯ ವಿಡಿಯೋವನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡು ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವ ಆರೋಪಿ ಯಾವ ಕೃತ್ಯ ನಡೆಸಿದ್ದಾನೆಂದು ವಿಡಿಯೋ ಸಾಕ್ಷಿ ಕಲೆಹಾಕಿದ ಬಳಿಕವೇ ಅರೆಸ್ಟ್​​ ಮಾಡಲಾಗಿದೆ. ರೈತರ ಕಡೆ ನಿಂತು 13 ಜನ ಕಲ್ಲು ತೂರಿದ್ದರೆ, ಇನ್ನೊಂದೆಡೆ ಕಾರ್ಖಾನೆ ಕಡೆಯಿಂದ ಕಲ್ಲು ತೂರಾಟ ನಡೆಸಿರುವ 4 ಜನರು ಸೇರಿ ಒಟ್ಟು 17 ಮಂದಿಯನ್ನು ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮುಧೋಳ ಹಾಗೂ ರಬಕವಿಬನಹಟ್ಟಿ ತಾಲೂಕಿನ ವಿವಿಧ ಹಳ್ಳಿಯವರು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಸಮೀರವಾಡಿ ಸಕ್ಕರೆ ಕಾರ್ಖಾನೆ ಬಳಿ ಬೆಂಕಿ, 40ಕ್ಕೂ ಹೆಚ್ಚು ಟ್ರ್ಯಾಕ್ಟರ್ ಕಬ್ಬು ಹಾನಿ

‘ತಪ್ಪೊಪ್ಪಿಕೊಂಡ ಕಿಡಿಗೇಡಿಗಳು’

ಆರೋಪಿಗಳ ಬಂಧನದ ಬಗ್ಗೆ ಮಾಹಿತಿ ನೀಡಿರುವ ಬಾಗಲಕೋಟೆ ಎಸ್​​ಪಿ ಸಿದ್ದಾರ್ಥ್​​ ಗೋಯೆಲ್​, ಇದು ರೈತರ ಕೃತ್ಯ ಅಲ್ಲ. ಬಂಧಿತ ಕಿಡಿಗೇಡಿಗಳು ಘಟನೆ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಬೆಂಕಿ ಹಚ್ಚಿದ್ದು ಮತ್ತು ಕಲ್ಲು ತೂರಿದ್ದು ತಾವೇ ಎಂದು ಹೇಳಿದ್ದಾರೆ. ಘಟನೆಯಲ್ಲಿ ಒಬ್ಬ ಎಎಸ್​ಐ ಕಾಲು ಮುರಿದಿದ್ದರೆ, ಕೆಲ ಪೊಲೀಸ್​​ ಸಿಬ್ಬಂದಿಗೆ ಗಾಯಗಳಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಜನರಿಗೆ ನೊಟೀಸ್ ಕೊಟ್ಟು ಬಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ತಮ್ಮ ಬೇಡಿಕೆಗಳಿಗೆ ಕಾರ್ಖಾನೆ ಮಾಲೀಕರು ಸ್ಪಂದಿಸಿಲ್ಲ ಎಂದು ಆಕ್ರೋಶಗೊಂಡ ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದು, ವಾಹನಗಳು ಜಖಂಗೊಂಡಿದ್ದವು. ಐದಕ್ಕೂ ಹೆಚ್ಚು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಅಲ್ಲದೆ, ಕಾರ್ಖಾನೆ ಆವರಣದಲ್ಲಿ ನಿಲ್ಲಿಸಿದ್ದ ನೂರಾರು ಟ್ರ್ಯಾಕ್ಟರ್‌ಗಳ ಪೈಕಿ 40-50 ಟ್ರ್ಯಾಕ್ಟರ್‌ಗಳಿಗೆ ಕಿಡಿಗೇಡಿಗಳು ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದರು. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.