ಬಾಗಲಕೋಟೆ: ಸಮೀರವಾಡಿ ಸಕ್ಕರೆ ಕಾರ್ಖಾನೆ ಬಳಿ ಬೆಂಕಿ, 20ಕ್ಕೂ ಹೆಚ್ಚು ಟ್ರ್ಯಾಕ್ಟರ್ ಕಬ್ಬು ಹಾನಿ
ಬಾಗಲಕೋಟೆ ಜಿಲ್ಲೆಯ ಸಮೀರವಾಡಿ ಸಕ್ಕರೆ ಕಾರ್ಖಾನೆ ಬಳಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ಕಬ್ಬಿಗೆ ಸೂಕ್ತ ಬೆಲೆ ಸಿಗಲಿಲ್ಲವೆಂದು ರೊಚ್ಚಿಗೆದ್ದ ರೈತರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಕಲ್ಲು ತೂರಾಟ ನಡೆದಿದ್ದು, ಐದಕ್ಕೂ ಹೆಚ್ಚು ಬೈಕ್ ಮತ್ತು 40-50 ಟ್ರ್ಯಾಕ್ಟರ್‌ಗಳು ಸುಟ್ಟುಹೋಗಿ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ನಾಶವಾಗಿದೆ. ಈ ಘಟನೆಯಿಂದ ರೈತರಿಗೆ ಭಾರಿ ನಷ್ಟ ಉಂಟಾಗಿದೆ.
ಬಾಗಲಕೋಟೆ, ನವೆಂಬರ್ 14: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಕಳೆದ 15 ದಿನಗಳಿಂದ ಮುಧೋಳದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಗುರುವಾರ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ಹಿಂಸಾಚಾರಕ್ಕೆ ತಿರುಗಿದೆ. ತಮ್ಮ ಬೇಡಿಕೆಗಳಿಗೆ ಕಾರ್ಖಾನೆ ಮಾಲೀಕರು ಸ್ಪಂದಿಸಿಲ್ಲ ಎಂದು ಆಕ್ರೋಶಗೊಂಡ ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಲು ಮುಂದಾದರು. ಈ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದು, ವಾಹನಗಳು ಜಖಂಗೊಂಡಿವೆ. ಐದಕ್ಕೂ ಹೆಚ್ಚು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಕಾರ್ಖಾನೆ ಆವರಣದಲ್ಲಿ ನಿಲ್ಲಿಸಿದ್ದ ನೂರಾರು ಟ್ರ್ಯಾಕ್ಟರ್‌ಗಳ ಪೈಕಿ 40-50 ಟ್ರ್ಯಾಕ್ಟರ್‌ಗಳಿಗೆ ಕಿಡಿಗೇಡಿಗಳು ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

