ಸಾಮಾನ್ಯವಾಗಿ ದೇವರಿಗೆ ಹಣ್ಣು ಕಾಯಿ, ಪಾಯಸ ಹೀಗೆ ವಿವಿಧ ಆಹಾರ ಪದಾರ್ಥಗಳ ನೈವೇದ್ಯ ಅರ್ಪಿಸುತ್ತಾರೆ. ಇದಕ್ಕೆ ಪ್ರತಿಯಾಗಿ ದೇವಾಲಯದಲ್ಲಿ ತೆಂಗಿನ ಹಾಲು, ತುಳಸಿ ನೀರು ತೀರ್ಥ ಅಂತ ಕೊಡ್ತಾರೆ. ಆದ್ರೆ ಅದೊಂದು ದೇವಸ್ಥಾನದಲ್ಲಿ ಮಾತ್ರ ಮದ್ಯವೇ ದೇವರಿಗೆ ನೈವೇದ್ಯ, ಸಾರಾಯಿ ತೀರ್ಥವೇ ಭಕ್ತರಿಗೆ ಪ್ರಸಾದ. ಅರ್ಚಕರ ಕೈಯಲ್ಲೇ ಮದ್ಯದ ಬಾಟಲ್.. ದೇವಸ್ಥಾನದಲ್ಲೇ ತೀರ್ಥ ಸೇವನೆ.. ವೆರೈಟಿ ವೆರೈಟಿ ಬ್ರಾಂಡ್ಗಳ ಸೋಮರಸ (alcohol).. ಜೊತೆಗೆ ಜೋಳದ ರೊಟ್ಟಿ, ಕಾಳಿನ ಪಲ್ಯ ಇದೇನಪ್ಪಾ ಅಂತ ಯೋಚಿಸ್ತಿದ್ದೀರಾ..? ಯೆಸ್, ಇದು ಉತ್ತರ ಕರ್ನಾಟಕದ ದೇವಸ್ಥಾನವೊಂದರಲ್ಲಿ ನಡೆದ ಡಿಫರೆಂಟ್ ಜಾತ್ರೆ.. ಬಾಗಲಕೋಟೆ ಜಿಲ್ಲೆ ಜಿಲ್ಲೆ ಗುಳೇದಗುಡ್ಡದ ನಿಂಗಾಪುರ ಹಾಗೂ ಕೆಲವಡಿ ಗ್ರಾಮದ ಲಕ್ಷ್ಮಿರಂಗನಾಥ ದೇವಸ್ಥಾನದಲ್ಲಿ (Sri Lakshmi Ranganatha temple) ಈ ಜಾತ್ರೆ ನಡೆಯುತ್ತೆ. ಇಲ್ಲಿನ ಸ್ಪೆಷಲ್ ಏನಪ್ಪಾ ಅಂದ್ರೆ ಪ್ರತಿವರ್ಷ ಹೋಳಿ ಹುಣ್ಣಿಮೆ ಬಳಿಕ ನಡೆಯೋ ಜಾತ್ರೆ ಸಂಪೂರ್ಣವಾಗಿ ಮದ್ಯದ ಆರಾಧನೆಯೇ ನಡೆಯುತ್ತೆ.
600 ವರ್ಷಗಳ ಇತಿಹಾಸವಿರೋ ಕನಕರಾಯ ಹಾಗೂ ಲಕ್ಷ್ಮೀರಂಗನಾಥ ದೇವಸ್ಥಾನಕ್ಕೆ ಮದ್ಯದ ಬಾಟಲಿ ತಂದು ಪೂಜೆ ಸಲ್ಲಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ರು. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಹರಕೆ ಹೊತ್ತುಕೊಂಡಷ್ಟು ಮದ್ಯವನ್ನು ತಂದು ದೇವರಿಗೆ ಅರ್ಪಿಸುತ್ತಾರೆ. ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಅದೇ ಮದ್ಯವನ್ನು ತೀರ್ಥ ಎಂದು ಭಾವಿಸಿ ಸೇವಿಸುತ್ತಾರೆ. ಕನಕರಾಯ ದೇವರಿಗೆ ಹೆಚ್ಚಿನ ಪ್ರಮಾಣದಲ್ಲಿ ಕಳ್ಳಬಟ್ಟಿ ಸಾರಾಯಿಯನ್ನೇ ಭಕ್ತರು ನೈವೇದ್ಯ ಮಾಡ್ತಾರೆ. ದೇಗುಲದ ಮುಂದೆ ಕಳ್ಳಬಟ್ಟಿಯನ್ನು ಮಾರಾಟ ಸಹ ಮಾಡಲಾಗುತ್ತೆ ಅನ್ನುತ್ತಾರೆ ಪೂಜಾರಿ ರಂಗಪ್ಪ.
ಜಾತ್ರೆಯ ಮತ್ತೊಂದು ವಿಶೇಷ ಅಂದ್ರೆ ಮಹಿಳೆಯರು ಜೋಳದ ರೊಟ್ಟಿ, ಕಾಳಿನ ಪಲ್ಯ, ಅನ್ನ ಸೇರಿ ವಿವಿಧ ಅಡುಗೆ ಮಾಡಿಕೊಂಡು ತಂದು ಎಲ್ಲರಿಗೂ ಪ್ರಸಾದ ಅಂತ ಹಂಚುತ್ತಾರೆ ಅನ್ನುತ್ತಾರೆ ಅಕ್ಷತಾ, ಭಕ್ತರು. ಒಟ್ಟಾರೆ, ಲಕ್ಷ್ಮಿರಂಗನಾಥ ಸ್ವಾಮಿಯ ಈ ಜಾತ್ರೆ ವಿಶೇಷವಾಗಿದ್ದು, ಕೊರೊನಾ ಕಾರಣದಿಂದ 2 ವರ್ಷಗಳ ಬಳಿಕ ನಡೆದ್ರೂ ಅದ್ಧೂರಿಯಾಗಿ ಜಾತ್ರೆ ಆಚರಿಸಲಾಯ್ತು. ಭಕ್ತರು ಹರಕೆ ತೀರಿಸಿ ಪುನೀತರಾದರು.
– ರವಿಮೂಕಿ, ಟಿವಿ9, ಬಾಗಲಕೋಟೆ
Devotees Offering Alcohol To Lakshmi Ranganatha God In Bagalkot Is A Unique Tradition