ಬಾಗಲಕೋಟೆ: ಕೊರೊನಾ ಎರಡನೇ ಅಲೆ ಅತ್ಯಂತ ವೇಗವಾಗಿ ಹರಡುತ್ತಿದ್ದು, ಸೋಂಕಿತರ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಇದರ ನಡುವೆ ಆಕ್ಸಿಜನ್ ಸಿಗುತ್ತಿಲ್ಲ ಎನ್ನುವ ಕೂಗು ಕೇಳಿಬರುತ್ತಿದ್ದು, ರೆಮ್ಡೆಸಿವರ್ ಇಂಜೆಕ್ಷನ್ ಸಿಗುತ್ತಿಲ್ಲ ಎಂದು ಬಾಗಲಕೋಟೆಯಲ್ಲಿ ಹಾಹಾಕಾರ ಶುರುವಾಗಿದೆ. ಆದರೆ ರೆಮ್ಡೆಸಿವರ್ ಕೊರತೆ ಮಧ್ಯೆ ಈಗ ರೆಮ್ಡೆಸಿವರ್ ಕದ್ದು ಮಾರಾಟ ಮಾಡುವ ಜಾಲ ಪತ್ತೆಯಾಗಿದೆ.
ಬಾಗಲಕೋಟೆ ಸಿಇಎನ್ ಪೊಲೀಸರ ಕಾರ್ಯಾಚರಣೆ ವೇಳೆ ರೆಮ್ಡೆಸಿವರ್ ಕದ್ದು ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಮೂವರು ಕೊವಿಡ್ ಆಸ್ಪತ್ರೆ ಸಿಬ್ಬಂದಿಗಳು, ಏಳು ಜನ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳನ್ನು ಸೇರಿ ಒಟ್ಟು ಹತ್ತು ಜನರನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. 25ರಿಂದ30 ಸಾವಿರಕ್ಕೆ ರೆಮ್ಡೆಸಿವರ್ ಅನ್ನು ಮಾರಾಟ ಮಾಡುವ ವೇಳೆ ಪೊಲೀಸರು ದಾಳಿ ಮಾಡಿದ್ದು, ಹದಿನಾಲ್ಕು ಪುಲ್ ವೈಲ್ ಮತ್ತು ಎರಡು ಖಾಲಿ ವೈಲ್ ಜಪ್ತಿ ಮಾಡಿದ್ದಾರೆ.
ಕೊವಿಡ್ ಆಸ್ಪತ್ರೆಯ ಮೂವರು ಸ್ಟಾಫ್ ನರ್ಸ್ಗಳು ಎರಡು ವೈಲ್ ಅನ್ನು 25ರಿಂದ 30 ಸಾವಿರಕ್ಕೆ ಮಾರಾಟ ಮಾಡಿರುವುದು ಈ ವೇಳೆ ಬೆಳಕಿಗೆ ಬಂದಿದೆ. ಕೊವಿಡ್ ಆಸ್ಪತ್ರೆಯ ವಿಠ್ಠಲ ಚಲವಾದಿ, ರಂಗಪ್ಪ ದಿನ್ನಿ, ರಾಹು ಗುಡಿಮನಿ ಮತ್ತು ಖಾಸಗಿ ಆಸ್ಪತ್ರೆಯ ತಿಮ್ಮಣ್ಣ ಗಡದನ್ನವರ, ಬಾಲಚಂದ್ರ ಭಜಂತ್ರಿ, ಮಂಜುನಾಥ ಗಾಣಿಗೇರ, ಶ್ರೀಕಾಂತ್ ಲಮಾಣಿ, ಗಣೇಶ್ ನಾಟಕಾರ್, ಪ್ರವೀಣ ಕೋತ್ಲಿ, ಮಹಾಂತಗೌಡ ಬಿರಾದಾರ್ ಬಂಧಿತ ಆರೋಪಿಗಳು.
ಇವರಲ್ಲಿ ಖಾಸಗಿ ವೈದ್ಯರ ಪಾತ್ರ ಇದೆಯಾ ಎನ್ನುವ ಪ್ರಶ್ನೆ ಸದ್ಯ ಉದ್ಭವವಾಗಿದ್ದು, ಜಿಲ್ಲಾಸ್ಪತ್ರೆ ನಿಷ್ಕಾಳಜಿ ಬಗ್ಗೆ ತನಿಖೆ ಮುಂದುವರಿದಿದೆ. ಯಾವುದೇ ಕಾರಣಕ್ಕೂ ಜಾಲದಲ್ಲಿ ಸಿಕ್ಕವರ ಕೈ ಬಿಡುವುದಿಲ್ಲ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:
ರೆಮ್ಡೆಸಿವರ್ ಬೇಕೋ? ಬೇಡವೋ? ವೈದ್ಯರಲ್ಲೇ ಭಿನ್ನಾಭಿಪ್ರಾಯ, ಒಬ್ರು ಬೇಡ ಅಂತಾರೆ, ಇನ್ನೊಬ್ರು ಜೀವ ರಕ್ಷಕ ಅಂತಾರೆ
ಪೊಲೀಸ್ ದಾಳಿ: ಬೆಂಗಳೂರಿನಲ್ಲಿ 10 ರಿಂದ 15 ಸಾವಿರಕ್ಕೆ ರೆಮ್ಡೆಸಿವರ್ ಮಾರುತ್ತಿದ್ದವರ ಬಂಧನ