ಬಳ್ಳಾರಿ: ಕೊರೊನಾ ಮಾಹಾಮಾರಿ ಎರಡನೇ ಅಲೆ ನಿಧಾನಗತಿಯಲ್ಲಿ ಇಳಿಮುಖವಾಗುತ್ತಿರುವ ಬೆನ್ನಲೇ ಈಗ ಕೊರೊನಾ ಮೂರನೇ ಅಲೆ ಭೀತಿ ಶುರುವಾಗಿದೆ. ಅದರಲ್ಲೂ ಕೊರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯ ಎನ್ನುವುದನ್ನು ತಜ್ಞರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ ತುಂಬಾ ಅಪಾಯ ಎನ್ನುವ ಮಾಹಿತಿಯು ಲಭ್ಯವಾಗಿದೆ. ಈ ಕಾರಣಕ್ಕಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ.
ಕೊರೊನಾ ಮೂರನೇ ಅಲೆಯ ಆತಂಕದಿಂದ ದೂರವಾಗಲು ದೇಶದೆಲ್ಲೇಡೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಬಳ್ಳಾರಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿಶೇಷ ಯೋಜನೆಯೊಂದನ್ನು ಜಾರಿಗೊಳಿಸಿದೆ. ಆ ಪ್ರಕಾರ ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಕಾಳಜಿಗಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಬಾಲ್ಯ ಚೈತನ್ಯ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ.
ಎರಡು ಜಿಲ್ಲೆಗಳಲ್ಲಿರುವ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಸತಿ ನಿಲಯಗಳಲ್ಲಿ ಈ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ. ತಾಲೂಕಿಗೆ ಎರಡರಂತೆ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ. ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗು ಹಾಗೂ ಮಗುವಿನ ತಾಯಿ ಈ ಆರೈಕೆ ಕೇಂದ್ರದಲ್ಲಿ 14 ದಿನಗಳ ಕಾಲ ಇರಬೇಕು. ಈ ಆರೈಕೆ ಕೇಂದ್ರದಲ್ಲಿ ವೈದ್ಯಕೀಯ ಚಿಕಿತ್ಸೆ ಜತೆಗೆ ಮಕ್ಕಳಿಗೆ ಪೌಷ್ಠಿಕತೆ ಹೆಚ್ಚಿಸುವ ಆಹಾರವನ್ನು ನೀಡಲಾಗುತ್ತಿದೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ತಿಳಿಸಿದ್ದಾರೆ.
ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೈಕೆಯ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವಹಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 0-6 ವರ್ಷದೊಳಗಿನ ಮಕ್ಕಳ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಲು ಮುಂದಾಗಿದೆ. ಮಕ್ಕಳನ್ನು ಮೂರು ವಿಭಾಗಗಳಾಗಿ ವಿಂಗಡನೆ ಮಾಡಲಾಗಿದ್ದು, ಗ್ರೀನ್ ಝೋನ್-1.85 ಲಕ್ಷ, ಹಳದಿ-45 ಸಾವಿರ, ರೆಡ್ ಝೋನ್-852 ಮಕ್ಕಳನ್ನು ಗುರುತಿಸಲಾಗಿದೆ.
ರೆಡ್ ಝೋನ್ನಲ್ಲಿರುವ 852 ಮಕ್ಕಳನ್ನು ಈಗ ಬಾಲ್ಯ ಚೈತನ್ಯ ಆರೈಕೆ ಕೇಂದ್ರಗಳಿಗೆ ದಾಖಲು ಮಾಡಲಾಗುತ್ತದೆ. ಈಗಾಗಲೇ ನಾಲ್ಕು ತಾಲೂಕುಗಳಲ್ಲಿ ಈ ಬಾಲ್ಯ ಚೈತನ್ಯ ಆರೈಕೆ ಕೇಂದ್ರ ಆರಂಭ ಮಾಡಲಾಗಿದ್ದು, ಇನ್ನೂಳಿದ ತಾಲೂಕುಗಳಲ್ಲೂ ಆರಂಭ ಮಾಡಲಾಗುತ್ತದೆ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಪೋಷಕರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಆ ಮೂಲಕ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಸಿಇಒ ಕೆ. ಆರ್ ನಂದಿನಿ ತಿಳಿಸಿದ್ದಾರೆ.
ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಕೊರೊನಾ ಮೂರನೇ ಅಲೆಯಲ್ಲಿ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚಿದೆ. ಈ ಕಾರಣಕ್ಕಾಗಿ ಬಳ್ಳಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ರಾಜ್ಯದಲ್ಲಿ ಮೊದಲ ಬಾರಿಗೆ ಬಾಲ್ಯ ಚೈತನ್ಯ ಆರೈಕೆ ಕೇಂದ್ರಗಳನ್ನು ಆರಂಭಿಸುವ ಮೂಲಕ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ರಕ್ಷಣೆಗೆ ಮುಂದಾಗಿದೆ.
ಇದನ್ನೂ ಓದಿ:
ಕೊವಿಡ್ ಮೂರನೇ ಅಲೆ ನಂತರ ಏನಾಗುತ್ತದೆ ಎಂದು ಹೇಳುವುದು ಅಸಾಧ್ಯ; ಡಿಜಿಟಲ್ ಕಲಿಕೆ ಮುಂದುವರಿಯಲಿದೆ: ಪಿಣರಾಯಿ ವಿಜಯನ್
ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಭೋಜನ ವ್ಯವಸ್ಥೆ; ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ವಿಶೇಷ ಆರೈಕೆ