
ಬಳ್ಳಾರಿ, ಏಪ್ರಿಲ್ 12: ಬಳ್ಳಾರಿಯಲ್ಲಿ (Ballari) ತಯಾರಾಗುವ ಜಿನ್ಸ್ ಉಡುಪುಗಳಿಗೆ (Jeans Dress) ದೇಶಾದ್ಯಂತ ಭಾರಿ ಬೇಡಿಕೆ ಇದೆ. ಇಲ್ಲಿನ ಜೀನ್ಸ್ ಉಡುಪು ತಯಾರಿಕಾ ಘಟಕಗಳಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಆದರೆ, ಇದೀಗ ಮೂಲಭೂತ ಸೌಕರ್ಯಗಳಿಲ್ಲದೆ ಜೀನ್ಸ್ ವಾಷಿಂಗ್ ಘಟಕಗಳು (Jeans washing unit) ಒಂದೊಂದಾಗಿ ಮುಚ್ಚುತ್ತಿವೆ. ವಿದ್ಯುತ್ ದರ ಹೆಚ್ಚಳ, ನೀರಿನ ಸಮಸ್ಯೆ, ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಕಚ್ಚಾ ವಸ್ತುಗಳ ದರ ಹೆಚ್ಚಳದಿಂದ ಬಳ್ಳಾರಿಯಲ್ಲಿರುವ 80 ಜೀನ್ಸ್ ವಾಷಿಂಗ್ ಘಟಕಗಳಲ್ಲಿ ಈಗಾಗಲೇ 40 ಘಟಕಗಳು ಮಚ್ಚಿವೆ.
ಈ ಘಟಕಗಳ ಮಾಲೀಕರು ಕಾರ್ಮಿಕರಿಗೆ ಸಂಬಳ ನೀಡುವುದು ಕೂಡ ಕಷ್ಟವಾಗಿದೆ. ಕೊರೊನಾ ಮಹಾಮಾರಿ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಘಟಕಗಳು ಬಂದ್ ಆಗಿದ್ದವು. ಈ ಸಮಯದಲ್ಲಿ ಬಂದ್ ಆದ ಘಟಕಗಳು 4-5 ವರ್ಷಗಳು ಕಳೆದರೂ ಪುನಃ ಚೇತರಿಸಿಕೊಂಡಿಲ್ಲ. ಬಳ್ಳಾರಿ ಜೀನ್ಸ್ ಉದ್ಯಮ ಆರ್ಥಿಕ ಹೊಡೆತಕ್ಕೆ ಸಿಲುಕಿದೆ.
2006 ರಲ್ಲಿ ಆರ್ಥಿಕವಾಗಿ ಬಲಿಷ್ಠ ಇದ್ದ ಬಳ್ಳಾರಿ ಜೀನ್ಸ್ ವಾಷಿಂಗ್ ಉದ್ಯಮ, ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲಗುತ್ತಿದೆ. ಬಳ್ಳಾರಿ ಜೀನ್ಸ್ ವಾಷಿಂಗ್ ಉದ್ಯಮ ಹಂತ – ಹಂತವಾಗಿ ಅರ್ಥಿಕ ಸಂಕಷ್ಟಕ್ಕೆ ಸಿಲುಕಲು ಕಾರಣವೇನು ಎಂಬುವುದನ್ನು ಜೀನ್ಸ್ ವಾಷಿಂಗ್ ಘಟಕಗಳ ಅಧ್ಯಕ್ಷ ವೇಣುಗೋಪಾಲ ತಿಳಿಸಿದ್ದಾರೆ.
ಉದ್ಯಮದಲ್ಲಿ ಪೈಪೋಟಿ ಹೆಚ್ಚಾಗಿದೆ. 2006 ರಿಂದ 2010 ರ ವರಗೆ ಒಂದು ಪ್ಯಾಂಟ್ ತೊಳೆಯಲು ಮಾಡಲು 18 ರೂ. ತೆಗೆದುಕೊಳ್ಳಲಾಗುತ್ತಿತ್ತು. 2010 ರ ನಂತರ ಒಂದು ಪ್ಯಾಂಟ್ ತೊಳೆಯಲು 14 ರೂ. ತೆಗೆದುಕೊಳ್ಳಲಾಗುತ್ತಿದೆ. 2006 ರಿಂದ 2010 ರ ವರಗೆ 25000 ರೂ. ವಿದ್ಯುತ್ ಬಿಲ್ ಬರುತ್ತಿತ್ತು. ನೀರಿನ ಬಿಲ್ ಕಡಿಮೆ ಇತ್ತು. ಮತ್ತು ವಾಷಿಂಗ್ ಕೆಮಿಕಲ್ಸ್‌ಗಳ ಬೆಲೆಯೂ ಕೂಡ ಕಡಿಮೆ ಇತ್ತು. ಆಗ, ಓರ್ವ ಕಾರ್ಮಿಕನಿಗೆ 10,000 ರೂ. ಸಂಬಳ ನೀಡಲಾಗುತ್ತಿತ್ತು. ಎಲ್ಲವೂ ಸೇರಿ ಒಂದು ತಿಂಗಳಿಗೆ 2 ಲಕ್ಷದ ವರಗೆ ಖರ್ಚು ಆಗುತ್ತಿತ್ತು.
ಆದರೆ, ಇದೀಗ ಎಲ್ಲದರ ಬೆಲೆ ಏರಿಕೆಯಾಗಿದೆ. ಕಾರ್ಮಿಕ ಕೂಲಿ ಕೂಡ ಹೆಚ್ಚಳವಾಗಿದೆ. ಆಗ, ಕಾರ್ಮಿಕನ ಸಂಬಳ 10 ಸಾವಿರ ರೂ. ಇದ್ದದ್ದು, 30 ಸಾವಿರ ರೂ.ಗೆ ಏರಿಕೆಯಾಗಿದೆ. ವಿದ್ಯುತ್ ಬಿಲ್ ತಿಂಗಳಿಗೆ 1.20 ಲಕ್ಷ ರೂ. ಬರುತ್ತಿದೆ. ನೀರಿನ ಬಿಲ್ 40 ಸಾವಿರ ರೂ. ಬರುತ್ತದೆ. ವಾಷಿಂಗ್ ಕೆಮಿಕಲ್ 2 ಲಕ್ಷ ರೂ.ವರೆಗೂ ನೀಡಬೇಕು. ಇದೆಲ್ಲವೂ ಸೇರಿ ಪ್ರಸ್ತುತ ಒಂದು ವಾಷಿಂಗ್ ಘಟಕ ನಡೆಸಬೇಕೆಂದರೆ ಕನಿಷ್ಠ ಅಂದ್ರೂ 6 ರಿಂದ 7 ಲಕ್ಷ ರೂ. ತಿಂಗಳಿಗೆ ಖರ್ಚಾಗುತ್ತದೆ. ಎಲ್ಲದರ ಬೆಲೆ ಏರಿಕೆಯಾಗಿ ಆರ್ಥಿಕ ಸಂಕಷ್ಟ ಸಿಲುಕಿ ಒಂದೊಂದಾಗಿ ಘಟಕಗಳು ಬಂದ್ ಆಗುತ್ತಿವೆ. ಸರ್ಕಾರಗಳು ಮಾತ್ರ ನಮ್ಮ ಮೇಲೆ ಹೊರೆ ಹಾಕುತ್ತಲೇ ಇವೆ. ಹೊಟ್ಟೆ ಪಾಡಿಗೆ ಜೀನ್ಸ್ ವಾಷಿಂಗ್ ಘಟಕಗಳನ್ನ ನಡೆಸುತ್ತಿದ್ದೆವೆ. ಯಾವುದೇ ಲಾಭವಾಗುತ್ತಿಲ್ಲ ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಬಳ್ಳಾರಿಯ ಜೀನ್ಸ್ ತಯಾರಿಕೆ ಘಟಕಗಳ ಉದ್ಯೋಗಿಗಳ ಮತ್ತು ಮಾಲೀಕರ ಜೊತೆ ಮಾತುಕತೆ ನಡೆಸಿದ್ದರು. ಆಗ ಅವರು, ಜೀನ್ಸ್ ಪಾರ್ಕ್ ಸ್ಥಾಪಿಸುವ ಭರವಸೆ ನೀಡಿದ್ದರು. ರಾಜ್ಯ ಸರ್ಕಾರದ ಮೊದಲನೇ ಕ್ಯಾಬಿನೆಟ್ನಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದ್ರೂ ಈ ಬಗ್ಗೆ ನೆಪ ಮಾತ್ರಕ್ಕೆ ಚರ್ಚೆ, ಹಣ ಮೀಸಲಿಟ್ಟಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವರ್ಷ 2024ರ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ನಲ್ಲೂ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸುವ ಘೋಷಣೆ ಮಾಡಿದ್ದರು. ಆದರೆ, ಜೀನ್ಸ್ ಉದ್ಯಮಿಗಳು ಜೀನ್ಸ್ ಪಾರ್ಕ್ ಬೇಡ, ವಿದ್ಯುತ್ ದರ ಕಡಿಮೆ ಮಾಡಿದರೆ ಸಾಕು ಎನ್ನುತ್ತಿದ್ದಾರೆ. ಕೆಲಸಗಾರರು ಕನಿಷ್ಠ ಮೂಲಭೂತ ಸೌಕರ್ಯ ಕೊಡಿ ಎನ್ನುತ್ತಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯ ಬಹುತೇಕ ಪಿಎಚ್‌ಸಿಗಳಲಿಲ್ಲ ಮರಣೋತ್ತರ ಪರೀಕ್ಷೆ ಕೇಂದ್ರಗಳು
ಒಂದು ಜೀನ್ಸ್ ವಾಷಿಂಗ್ ಘಟಕವನ್ನು ನಡೆಸಬೇಕಾದರೆ ಒಂದು ಲಕ್ಷ ಲೀಟರ್ ನೀರು ನಿತ್ಯ ಬೇಕು. ಬೇಸಿಗೆ ಹಿನ್ನೆಲೆ ನೀರಿನ ಅಭಾವ ಕೂಡ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಜೀನ್ಸ್ ವಾಷಿಂಗ್ ಘಟಕಗಳಿಗೆ ಬೇಕಾದಷ್ಟು ನೀರು ಸಿಗದೆ ಪರದಾಡುತ್ತಿದ್ದಾರೆ. ದರ ಏರಿಕೆ ಮತ್ತು ಆರ್ಥಿಕ ಸಮಸ್ಯೆಗಳಿಂದ ಒಂದೊಂದೆ ಜೀನ್ಸ್ ವಾಷಿಂಗ್ ಘಟಕಗಳು ಬಂದ್ ಆಗುತ್ತಿವೆ.
Published On - 2:51 pm, Sat, 12 April 25