ಬಳ್ಳಾರಿಯಲ್ಲಿ ಹೃದಯವಿದ್ರಾವಕ ಘಟನೆ: ಮೂವರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

ಗಂಡ ಹೆಂಡತಿ ಜಗಳ ಅಂದ್ರೆ ಉಂಡು ಮಲಗುವ ತನಕ ಅಂತಾರೆ. ಆದ್ರೆ, ಇವರದ್ದು ಸಾವಿನ ತನಕ. ಹೌದು.. ಕುರಿ ಮೇಯಿಸಲು ಬೆಳಗಾವಿಯಿಂದ ಬಳ್ಳಾರಿಗೆ ಬಂದಿದ್ದ ಕುಟುಂಬದಲ್ಲಿ ಗಲಾಟೆಯಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ನಾಲ್ವರ ಸಾವಿನಲ್ಲಿ ಅಂತ್ಯವಾಗಿದೆ. ತಾಯಿ ತನ್ನ ಮೂರು ಪುಟ್ಟ ಕಂದಮ್ಮಗಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬಳ್ಳಾರಿಯಲ್ಲಿ ಹೃದಯವಿದ್ರಾವಕ ಘಟನೆ: ಮೂವರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ
Mother Suicide with Children
Updated By: ರಮೇಶ್ ಬಿ. ಜವಳಗೇರಾ

Updated on: Jun 18, 2025 | 8:56 PM

ಬಳ್ಳಾರಿ, (ಜೂನ್ 18): ಮೂವರು ಮಕ್ಕಳ ಜೊತೆ ತಾಯಿ ಕೃಷಿ ಹೊಂಡಕ್ಕೆ ಜಿಗಿದು ಆತ್ಮಹತ್ಯೆ(Suicide)  ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬಳ್ಳಾರಿ (Bellary) ಜಿಲ್ಲೆ ಕುರುಗೋಡು ತಾಲೂಕಿನ ಬರದನಹಳ್ಳಿಯಲ್ಲಿ ನಡೆದಿದೆ. ಬೆಳಗಾವಿ (Belagavi) ಮೂಲದ ತಾಯಿ ಸಿದ್ದಮ್ಮ(30) ತನ್ನ ಜೊತೆಗೆ ಮಕ್ಕಳಾದ ಅಭಿಗ್ನ(8), ಅವಣಿ(6), ಆರ್ಯ(4) ಕೃಷಿ ಹೊಂಡಕ್ಕೆ ತಳ್ಳಿ ಬಳಿಕ ತಾನೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುರಿ ಮೇಯಿಸಲು ಬೆಳಗಾವಿಯಿಂದ ಬರದನಹಳ್ಳಿಗೆ ಬಂದಿದ್ದು, ಈ ವೇಳೆ ಗಂಡ ಹೆಂಡ್ತಿ ನಡುವೆ ಗಲಾಟೆಯಾಗಿದೆ. ಇದರಿಂದ ಮನನೊಂದು ಸಿದ್ದಮ್ಮ ಮಕ್ಕಳ ಜತೆ ಸಾವಿಗೆ ಶರಣಾಗಿದ್ದಾಳೆ.

ಬೆಳಗಾವಿ ಮೂಲದ ಸಿದ್ದಮ್ಮ ಪತಿ ಜೊತೆ ಕುರಿ ಮೇಯಿಸಲು ಬಂದಿದ್ದು, ಬರದನಹಳ್ಳಿಯ ರಾಘವೇಂದ್ರ ಎಂಬುವವರ ಜಮೀನಿನಲ್ಲಿ ಕುರಿ ಹಟ್ಟಿ ಹಾಕಿಕೊಂಡಿದ್ದರು. ಆದ್ರೆ, ಪತಿ ಕುಮಾರ್ ಹಾಗೂ ಪತ್ನಿ ಸಿದ್ದಮ್ಮ ನಡುವೆ ನಿನ್ನೆ (ಜೂನ್ 17) ಗಲಾಟೆಯಾಗಿದೆ. ಬಳಿಕ ಮೂವರು ಮಕ್ಕಳ ಜೊತೆ ಕುರಿ ಮೇಯಿಸಲು ತೆರಳಿದ್ದ ಸಿದ್ದಮ್ಮ, ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೊದಲು ಸಿದ್ದಮ್ಮ ತನ್ನ ಮಕ್ಕಳನ್ನು ಕೃಷಿ ಹೊಂಡಕ್ಕೆ ತಳ್ಳಿದ್ದಾಳೆ. ನಂತರ ಕೊನೆ ತಾನು ಸಹ ಜಿಗಿದಿದ್ದಾಳೆ.

ಸಂಜೆಯಾದರೂ ಕುರಿಗಳು, ಪತ್ನಿ, ಮಕ್ಕಳು ಹಿಂದಿರುಗದ ಹಿನ್ನೆಲೆಯಲ್ಲಿ ಪತಿ ಹುಡುಕಾಡಿದ್ದಾನೆ. ಆ ವೇಳೆ
ಕುರಿಗಳು ಕೃಷಿ ಹೊಂಡದ ಬಳಿಯೇ ನಿಂತಿದ್ದರಿಂದ ಕುಮಾರ್ ಗೆ ಅನುಮಾನ ಬಂದಿದ್ದು, ಹೊಂಡಕ್ಕೆ ಇಳಿದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ನಾಲ್ವರ ಸಾವಿನಿಂದ ಆಘಾತಕ್ಕೊಳಗಾದ ಕುಮಾರ್, ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ. ಸದ್ಯ ಮೃತ ಸಿದ್ದಮ್ಮ ಸಹೋದರನ ದೂರಿನ ಅನ್ವಯ ಕುರುಗೋಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಸಂಸಾರದಲ್ಲಿ ಒಂದೇ ಒಂದು ಗಲಾಟೆ, ವೈಮನಸ್ಸಿನಿಂದ ಸಿಟ್ಟಿಗೆ ಕೈಕೊಟ್ಟಿದ್ದಕ್ಕೆ ನಾಲ್ಕು ಜೀವಗಳು ಬಲಿಯಾಗಿವೆ. ಇದರಿಂದ ಯಾವುದೇ ಕಾರಣಕ್ಕೂ ಸಿಟ್ಟಿನಲ್ಲಿ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಆ ಕ್ಷಣದಲ್ಲಿ ದುಡುಕಿನ ನಿರ್ಧಾರರಿಂದ ಏನೆಲ್ಲಾ ಸಂಭವಿಸುತ್ತವೆ ಎನ್ನುವುದನ್ನು ಇದೊಂದು ಉದಾಹರಣೆ.