ಅಂಜನಾದ್ರಿಯೇ ಹನುಮನ ಜನ್ಮಸ್ಥಳ, ವಿವಾದದ ಬಗ್ಗೆ ರಾಜ್ಯ ಸರ್ಕಾರದಿಂದ ಆದೇಶ ಸಾಧ್ಯತೆ: ಸಚಿವೆ ಶಶಿಕಲಾ ಜೊಲ್ಲೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 20, 2022 | 4:39 PM

ರಾಮಮಂದಿರ ಮಾದರಿಯಲ್ಲಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಮಾಡುತ್ತೇವೆ. ಬಜೆಟ್​ನಲ್ಲಿ ಅಂಜನಾದ್ರಿ ಅಭಿವೃದ್ಧಿ ಬಗ್ಗೆ ಹೆಚ್ಚಿನ ಹಣ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಅಂಜನಾದ್ರಿಯೇ ಹನುಮನ ಜನ್ಮಸ್ಥಳ, ವಿವಾದದ ಬಗ್ಗೆ ರಾಜ್ಯ ಸರ್ಕಾರದಿಂದ ಆದೇಶ ಸಾಧ್ಯತೆ: ಸಚಿವೆ ಶಶಿಕಲಾ ಜೊಲ್ಲೆ
ಅಂಜನಾದ್ರಿ ಬೆಟ್ಟ ಮತ್ತು ಸಚಿವೆ ಶಶಿಕಲಾ ಜೊಲ್ಲೆ (Courtesy: narahari_karanam92/Instagram)
Follow us on

ಹೊಸಪೇಟೆ: ತಾಲ್ಲೂಕಿನ ಅಂಜನಾದ್ರಿಯೇ (Anjanadri Betta) ಹನುಮನ ಜನ್ಮಸ್ಥಳ (Hanuman Birth Place) ಎಂಬ ಬಗ್ಗೆ ಕರ್ನಾಟಕ ಸರ್ಕಾರವು ಶೀಘ್ರ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಈ ಬಗ್ಗೆ ಮುಜರಾಯಿ ಇಲಾಖೆಯಿಂದ ಎಲ್ಲ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಈ ಬಗ್ಗೆ ಆಗಮ ಪಂಡಿತರಿಗೂ ಮಾಹಿತಿ ಸಂಗ್ರಹ ಮಾಡಲು ತಿಳಿಸಿದ್ದೇವೆ. ರಾಮಮಂದಿರ ಮಾದರಿಯಲ್ಲಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಮಾಡುತ್ತೇವೆ. ಬಜೆಟ್​ನಲ್ಲಿ ಅಂಜನಾದ್ರಿ ಅಭಿವೃದ್ಧಿ ಬಗ್ಗೆ ಹೆಚ್ಚಿನ ಹಣ ನೀಡುವ ಪ್ರಯತ್ನ ಮಾಡ್ತೇವೆ. ಅಂಜನಾದ್ರಿಯೇ ಹನುಮನ ಜನ್ಮಸ್ಥಾನ ಇದರಲ್ಲಿ ಯಾವುದೇ ಸಂಶಯವಿಲ್ಲ. ತಿರುಪತಿಯಲ್ಲಿ ಹನುಮನ ಜನ್ಮ ಸ್ಥಳ ಇದೆ ಅನ್ನೋದಕ್ಕೆ ಯಾವುದೇ ಪುರಾವೇ ಇಲ್ಲ. ಇದೇ ಬಜೆಟ್​ನಲ್ಲಿ ಅಂಜನಾದ್ರಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟು ಅಭಿವೃದ್ಧಿ ಮಾಡುತ್ತೇವೆ. ರಾಮಾಯಣದಲ್ಲಿಯೂ ಇಲ್ಲಿನ ಕಿಷ್ಕಿಂಧೆಯ ಬಗ್ಗೆ ಉಲ್ಲೇಖ ಇದೆ. ಹೀಗಾಗಿ ಇದೇ ಹುನುಮನ ಹುಟ್ಟಿದ ಸ್ಥಳ. ಅಭಿವೃದ್ದಿ ಕುರಿತು ಕೊಪ್ಪಳ ಜಿಲ್ಲಾಧಿಕಾರಿ ಪ್ರಸ್ತಾವ ಸಲ್ಲಿಸಿದ್ದಾರೆ. ಕೊಪ್ಪಳದ ಉಸ್ತುವಾರಿ ಸಚಿವ ಆನಂದ್ ಸಿಂಗ್ ಈ ವಿಚಾರದಲ್ಲಿ ಮುತುವರ್ಜಿ ವಹಿಸುತ್ತಿದ್ದಾರೆ. ಹೀಗಾಗಿ ಈ ಪ್ರದೇಶ ಅಭಿವೃದ್ಧಿ ಕಾಣುವುದು ನಿಶ್ಚಿತ ಎಂದರು.

ಸಚಿವ ಆನಂದ್ ಸಿಂಗ್ ಪ್ರಯತ್ನದಿಂದ ವಿಜಯನಗರ ಜಿಲ್ಲೆಯು ರಚನೆಯಾಯಿತು. ಈ ಜಿಲ್ಲೆಯ ಅಭಿವೃದ್ಧಿ ಜವಾಬ್ದಾರಿ ರಾಜ್ಯ ಸರ್ಕಾರದ್ದು. ನೂತನ ಜಿಲ್ಲೆಯ ಅಭಿವೃದ್ಧಿಗೆ ಅಧಿಕಾರಿಗಳು ಸಹಕರಿಸಿ ಕೆಲಸ ಮಾಡಬೇಕು. ವಿಜಯನಗರ ಜಿಲ್ಲೆಗೆ ಪ್ರತ್ಯೇಕ ಅಧಿಕಾರಿಗಳ ನೇಮಕದ ಬಗ್ಗೆ ಫೆ.4ರಂದೇ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳ ನೂತನ ಕಚೇರಿ ನಿರ್ಮಾಣಕ್ಕೆ 83 ಎಕರೆ ಸ್ಥಳ ಗುರುತಿಸಲಾಗಿದೆ. ಹೊಸಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ 250 ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ನವ ಕರ್ನಾಟಕದ ಕನಸು-ನನಸು ಮಾಡಲು ನಾವೆಲ್ಲಾ ಕೈಜೋಡಿಸಬೇಕು ಎಂದು ವಿನಂತಿಸಿದರು.

ಹೊಸಪೇಟೆ ಕ್ಷೇತ್ರದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ₹ 228 ಕೋಟಿ ವೆಚ್ಚದ ಯೋಜನೆಗಳಿಗೆ ಭೂಮಿಪೂಜೆ ಸಮಾರಂಭವನ್ನೂ ಸಚಿವೆ ನೆರವೇರಿಸಿದರು. ವಿಜಯನಗರ ಜಿಲ್ಲೆಯು ದೇಶದಲ್ಲಿ ತನ್ನದೇ ಆದ ಛಾಪು ಹೊಂದಿದೆ. ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನಸು ಕಂಡಿದ್ದಾರೆ. ಸಚಿವ ಆನಂದ ಸಿಂಗ್ ಪ್ರಯತ್ನದಿಂದ ವಿಜಯನಗರ ಜಿಲ್ಲೆ ರಚನೆಯಾಯಿತು. ನೂತನ ಜಿಲ್ಲೆಯ ಅಭಿವೃದ್ಧಿ ಸರ್ಕಾರದ ಜವಾಬ್ದಾರಿ. ನೂತನ ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲೆಯ ಅಧಿಕಾರಿಗಳು ಸಹಕರಿಸಿ ಕೆಲಸ ಮಾಡಬೇಕು. ಬಳ್ಳಾರಿ ಜಿಲ್ಲೆಯ ಅಧಿಕಾರಿಗಳು ವಿಜಯನಗರ ಜಿಲ್ಲೆಯಲ್ಲೂ ಕೆಲಸ ಮಾಡುತ್ತಿದ್ದಾರೆ. ವಿಜಯನಗರ ಜಿಲ್ಲೆಗೆ ಪ್ರತ್ಯೇಕ ಅಧಿಕಾರಿಗಳ ನೇಮಕ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇವೆ. ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ 83 ಎಕರೆಯಲ್ಲಿ ಸ್ಥಳ ಗುರುತಿಸಲಾಗಿದೆ. ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ 100 ಬೆಡ್​ಗಳ ತಾಲ್ಲೂಕು ಆಸ್ಪತ್ರೆಯನ್ನು 250 ಬೆಡ್​ಗಳಿಗೆ ಏರಿಕೆ ಮಾಡಲಾಗುತ್ತಿದೆ ಎಂದರು. ಮುಖ್ಯಮಂತ್ರಿಗಳ ನವಕರ್ನಾಟಕ ಕನಸನ್ನು ನನಸು ಮಾಡಲು ನಾವೆಲ್ಲರೂ ಕೈಜೋಡಿಸಬೇಕು ಎಂದು ಸಲಹೆ ಮಾಡಿದರು.

ಸಚಿವ ಆನಂದ್ ಸಿಂಗ್ ಅವರ ಹೊಸಪೇಟೆ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ₹ 228.94 ಕೋಟಿ ವೆಚ್ಚದ ಹಲವು ಯೋಜನೆಗಳನ್ನು ಘೋಷಿಸಿದರು. ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಆನಂದ್ ಸಿಂಗ್‌ ಮುನಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಂಪರ್ ಕೊಡುಗೆ ನೀಡಿದ್ದಾರೆ. 67 ಇಲಾಖೆಗಳ ವಿವಿಧ ಕಾಮಗಾರಿಗಳಿಗೆ ಈ ವೇಳೆ ಚಾಲನೆ ನೀಡಲಾಯಿತು. ಸಚಿವ ಆನಂದ ಸಿಂಗ್ ಮತ್ತು ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆಯಿಂದ ಭೂಮಿಪೂಜೆ ನೆರವೇರಿಸಿದರು. ಭೂಮಿಪೂಜೆ ಸಮಾರಂಭದಲ್ಲಿ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ವಿಜಯನಗರ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಕೆ.ಅರುಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ದೇವಸ್ಥಾನಗಳನ್ನು ಖಾಸಗೀಕರಣ ಮಾಡುತ್ತಿಲ್ಲ; ದೇವಸ್ಥಾನಗಳಿಗೆ ಸ್ವಾಯುತ್ತತೆ ಕೊಡುತ್ತಿದ್ದೇವೆ: ಶಶಿಕಲಾ ಜೊಲ್ಲೆ ಹೇಳಿಕೆ

ಇದನ್ನೂ ಓದಿ: ಅಂಜನಾದ್ರಿ ಬೆಟ್ಟದ ವಾಯುಪುತ್ರನ ದೇಗುಲದ ಹುಂಡಿ ಕಾಣಿಕೆ ಎಣಿಕೆ: 75 ದಿನದಲ್ಲಿ 24 ಲಕ್ಷ ರೂಪಾಯಿ ಸಂಗ್ರಹ

Published On - 4:36 pm, Sun, 20 February 22